Tuesday, June 16, 2026
spot_imgspot_img
spot_imgspot_img

ತಿರುಪತಿ ಲಡ್ಡುಗೆ ವಿಜ್ಞಾನಿಗಳ ಕಣ್ಗಾವಲು – ಕಲಬೆರಕೆಗೆ ಇನ್ಮುಂದೆ ಬ್ರೇಕ್!

- Advertisement -
- Advertisement -

ತಿರುಪತಿ ಲಡ್ಡುವಿನಲ್ಲಿನ ತುಪ್ಪದ ಕಲಬೆರಕೆ ಆರೋಪದ ಬಳಿಕ ಉಂಟಾಗಿದ್ದ ವಿವಾದಗಳ ನಡುವೆಯೇ, ತಿರುಮಲ ತಿರುಪತಿ ದೇವಸ್ಥಾನ ಭಕ್ತರಿಗೆ ಮಹತ್ವದ ಸಿಹಿಸುದ್ದಿ ನೀಡಿದೆ. ವಿಶ್ವವಿಖ್ಯಾತ ತಿರುಪತಿ ಲಡ್ಡು ಸೇರಿದಂತೆ ಶ್ರೀವಾರಿಗೆ ಸಮರ್ಪಿಸುವ ಪ್ರಸಾದಗಳ ಗುಣಮಟ್ಟ ಮತ್ತು ಪವಿತ್ರತೆಯನ್ನು ಖಚಿತಪಡಿಸಿಕೊಳ್ಳಲು ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾಲಯ ಜತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಬೆಂಗಳೂರಿನಲ್ಲಿ ನಡೆದ RISE ಕಾನ್‌ಕ್ಲೇವ್ 2026ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇನ್ಮುಂದೆ ತಿರುಪತಿ ಲಡ್ಡುವಿನ ಗುಣಮಟ್ಟ ಮೇಲ್ವಿಚಾರಣೆಯಲ್ಲಿ CFTRI ಪ್ರಮುಖ ಪಾತ್ರವಹಿಸಲಿದೆ.

ಈ ಒಪ್ಪಂದದ ಭಾಗವಾಗಿ, ಪ್ರಸಾದ ತಯಾರಿಕೆಗೆ ಬಳಸುವ ತುಪ್ಪ, ಗೋಡಂಬಿ, ಏಲಕ್ಕಿ, ದ್ರಾಕ್ಷಿ ಸೇರಿದಂತೆ ಪ್ರತಿಯೊಂದು ಕಚ್ಚಾ ವಸ್ತುವಿನ ಖರೀದಿಯಿಂದ ವಿತರಣೆವರೆಗಿನ ಎಲ್ಲಾ ಹಂತಗಳಲ್ಲಿ ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಫ್ರಾನ್ಸ್‌ನಿಂದ ಆಮದು ಮಾಡಲಾದ ‘ಎಲೆಕ್ಟ್ರಾನಿಕ್ ನೋಸ್’ ಹಾಗೂ ‘ಎಲೆಕ್ಟ್ರಾನಿಕ್ ಟಂಗ್’ ತಂತ್ರಜ್ಞಾನಗಳ ಮೂಲಕ ತುಪ್ಪದ ವಾಸನೆ, ರುಚಿ ಮತ್ತು ಗುಣಮಟ್ಟದಲ್ಲಿ ಉಂಟಾಗುವ ಅತಿ ಸೂಕ್ಷ್ಮ ಬದಲಾವಣೆಗಳನ್ನೂ ಪತ್ತೆಹಚ್ಚಲು ಸಾಧ್ಯವಾಗಲಿದೆ.

ತಿರುಮಲದಲ್ಲಿರುವ ಆಧುನಿಕ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ CFTRI ತಾಂತ್ರಿಕ ಮಾರ್ಗದರ್ಶನ ನೀಡಲಿದೆ. LC-MS, ICP-MS, ಗ್ಯಾಸ್ ಕ್ರೋಮಾಟೋಗ್ರಫಿ ಹಾಗೂ HPLC ಸೇರಿದಂತೆ ಜಾಗತಿಕ ಮಟ್ಟದ ಉಪಕರಣಗಳ ಮೂಲಕ ಕೀಟನಾಶಕ, ಭಾರೀ ಲೋಹ, ಆಂಟಿಬಯಾಟಿಕ್ ಹಾಗೂ ಇತರ ಕಲ್ಮಶಗಳ ಪತ್ತೆ ಕಾರ್ಯ ನಡೆಯಲಿದೆ.

ಪ್ರಸಾದದ ಗುಣಮಟ್ಟ ಹಾಗೂ ಜೀವಿತಾವಧಿ ಹೆಚ್ಚಿಸಲು ತಾಪಮಾನ ನಿಯಂತ್ರಿತ ವ್ಯವಸ್ಥೆ ಮತ್ತು DRDO ಮಾದರಿಯ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್ ಪ್ಯಾಕೇಜಿಂಗ್ ತಂತ್ರಜ್ಞಾನ ಅಳವಡಿಸುವ ಯೋಜನೆಯೂ ರೂಪಿಸಲಾಗಿದೆ.

TTD ಸಿಬ್ಬಂದಿ ಹಾಗೂ ಆಹಾರ ವಿಶ್ಲೇಷಕರಿಗೆ ಸ್ಯಾಂಪ್ಲಿಂಗ್, ಗುಣಮಟ್ಟ ಪರೀಕ್ಷೆ ಮತ್ತು ಕಲ್ಮಶ ಪತ್ತೆ ಕುರಿತು CFTRI ವಿಶೇಷ ತರಬೇತಿ ನೀಡಲಿದೆ. ಜೊತೆಗೆ ವಿಜ್ಞಾನಿಗಳ ತಂಡ ನಿಯಮಿತವಾಗಿ ತಿರುಮಲಕ್ಕೆ ಭೇಟಿ ನೀಡಿ ಪರಿಶೀಲನೆ ಮತ್ತು ಮಾರ್ಗದರ್ಶನ ನೀಡಲಿದೆ.

ಇತ್ತೀಚಿನ ವಿವಾದಗಳಿಂದ ಆತಂಕಗೊಂಡಿದ್ದ ಕೋಟ್ಯಂತರ ಶ್ರೀವಾರಿ ಭಕ್ತರಿಗೆ ಈ ಕ್ರಮ ನೆಮ್ಮದಿಯ ನಿಟ್ಟುಸಿರು ನೀಡಿದೆ. ಸಾಂಪ್ರದಾಯಿಕ ಧಾರ್ಮಿಕ ಪವಿತ್ರತೆ ಮತ್ತು ಆಧುನಿಕ ವಿಜ್ಞಾನದ ಸಮನ್ವಯದ ಮೂಲಕ ತಿರುಪತಿ ಲಡ್ಡುವಿನ ಶುದ್ಧತೆ ಹಾಗೂ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!