Sunday, August 14, 2022
spot_imgspot_img
spot_imgspot_img

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ; ಯೋಗ ಮಾರ್ಗದಲ್ಲಿ ಬದುಕೋಣ; ಮೋದಿ

- Advertisement -G L Acharya G L Acharya
- Advertisement -

ತಾಯಿ ಚಾಮುಂಡಿಗೆ ವೃಕ್ಷಾಸನದ ಪ್ರಣಾಮ
ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಸಾವಿರಾರು ಜನರೊಂದಿಗೆ ಮೋದಿ ಅವರೂ ಮಾಡಿದರು. ವೃಕ್ಷಾಸನವು ತಾಯಿ ಚಾಮುಂಡಿಗೆ ಶರಣಾಗತಿ ಮತ್ತು ಆರಾಧನೆಯ ಭಾವವನ್ನು ಪ್ರದರ್ಶಿಸಿತು.

ಯೋಗಾಭ್ಯಾಸ ಆರಂಭ
ಕುತ್ತಿಗೆ ಸಡಿಲಗೊಳಿಸುವ, ಕುತ್ತಿಗೆ ತಿರುಗಿಸುವ ಮತ್ತು ಇತರ ಸರಳ ಉಸಿರಾಟದ ವ್ಯಾಯಾಮಗಳೊಂದಿಗೆ ಯೋಗಾಭ್ಯಾಸ ಆರಂಭವಾಯಿತು.

ಓಂಕಾರದೊಂದಿಗೆ ಯೋಗಾಭ್ಯಾಸ ಆರಂಭ
ಮೂರು ಬಾರಿ ಓಂಕಾರ ಉಚ್ಚಾರಣೆಯೊಂದಿಗೆ ಯೋಗದಿನದ ಪ್ರಯುಕ್ತ ನಡೆಯುತ್ತಿರುವ ವಿಶೇಷ ಯೋಗಾಭ್ಯಾಸ ಆರಂಭವಾಯಿತು. ಸಂಸ್ಕೃತದ ಶ್ಲೋಕವೊಂದರ ಮೂಲಕ ಪ್ರಾರ್ಥನೆ ಮಾಡಲಾಯಿತು.

ಯೋಗ ಮಾರ್ಗದಲ್ಲಿ ಬದುಕೋಣ: ಮೋದಿ
ಯೋಗದ ಬಗ್ಗೆ ತಿಳಿಯೋಣ, ಯೋಗದ ರೀತಿಯಲ್ಲಿ ಬದುಕೋಣ, ಯೋಗವನ್ನು ನಮ್ಮದಾಗಿಸಿಕೊಳ್ಳೋಣ. ನಾವು ಯೋಗದ ರೀತಿಯಲ್ಲಿ ಜೀವನ ಮುಂದುವರಿಸೋಣ. ಯೋಗದಿಂದ ಸಿಗುವ ನೆಮ್ಮದಿಯನ್ನು ಎಲ್ಲರೂ ಸಂಭ್ರಮಿಸೋಣ. ಯೋಗದಿಂದ ನಾವು ಎಲ್ಲರೂ ಬೆಸೆದುಕೊಳ್ಳಲು ದೊಡ್ಡ ಅವಕಾಶ ಸಿಕ್ಕಿದೆ. ಈಗ ಯುವಕರು ಹೊಸಹೊಸ ಆಲೋಚನೆಗಳೊಂದಿಗೆ ಯೋಗದ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಸ್ಟಾರ್ಟ್​ಅಪ್ ಅವಕಾಶಗಳೂ ಸಾಕಷ್ಟು ಇವೆ. ಮೈಸೂರಿನಲ್ಲಿ ಈಗ ಇನ್ನೊವೇಟಿವ್ ಡಿಜಿಟಲ್ ಎಕ್ಸಿಬಿಷನ್ ಆಯೋಜಿಸಿದ್ದೇವೆ ಎಂದು ಮೋದಿ ಹೇಳಿದರು.

ವಿಶ್ವಮಟ್ಟದಲ್ಲಿ ಗಾರ್ಡಿಯನ್ ರಿಂಗ್ ಆಫ್ ಯೋಗ ಸದ್ದು ಮಾಡಿದೆ
ವಿಶ್ವದ ವಿವಿಧ ದೇಶಗಳಲ್ಲಿ ಸೂರ್ಯೋದಯದ ಹೊತ್ತಿಗೆ ಯೋಗ ದಿನದ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶ್ವದ ವಿವಿಧೆಡೆ ಸೂರ್ಯರಶ್ಮಿ ಸ್ಪರ್ಶವಾಗುವ ಹೊತ್ತಿಗೆ ಯೋಗದಿನದ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಪ್ರಯೋಗವು ವಿಶ್ವಮಟ್ಟದಲ್ಲಿ ಗಾರ್ಡಿಯನ್ ರಿಂಗ್ ಆಫ್ ಯೋಗ ಹೆಸರಿನಲ್ಲಿ ಜನಜನಿತವಾಗಿದೆ. ಯೋಗ ಎನ್ನುವುದು ಕೇವಲ ಜೀವನದ ಭಾಗ ಅಲ್ಲ, ಅದು ಜೀವನದ ರೀತಿ ಆಗುತ್ತಿದೆ ಎಂದು ಮೋದಿ ಹೇಳಿದರು.

ಯೋಗವು ಜನರನ್ನು ಬೆಸೆಯುತ್ತದೆ
ಯೋಗವು ಜಗತ್ತಿನ ಹಲವು ಸಮಸ್ಯೆಗಳಿಗೆ ಉತ್ತಮ ಮದ್ದು ಎನಿಸಿದೆ. ನಾವೀಗ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಈಗ ದೇಶದ 75 ವಿವಿಧ ನಗರಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಯೋಗದಿನ ನಡೆಯುತ್ತಿದೆ. ಇವು ಭಾರತದ ಇತಿಹಾಸಕ್ಕೆ ಸಾಕ್ಷಿ, ಸಾಂಸ್ಕೃತಿಕ ಔನ್ನತ್ಯಕ್ಕೆ ಸಾಕ್ಷಿಯಾಗಿವೆ. ಯೋಗದಿನದ ಪ್ರಯುಕ್ತ ಎಲ್ಲರನ್ನೂ ಬೆಸೆಯುತ್ತಿದ್ದೇವೆ.

ಭಾರತವು ವಿಶ್ವದ ಒಳಿತು ಬಯಸುತ್ತದೆ:
ಭಾರತವು ಸದಾ ವಿಶ್ವದ ಒಳಿತು ಬಯಸಿದೆ. ಈ ಬಾರಿಯ ವಿಶ್ವ ಯೋಗದಿನದ ಆಶಯವೂ ಇದಕ್ಕೆ ಪೂರಕವಾಗಿದೆ. ಮಾನವತೆಗೆ ಯೋಗ ಎನ್ನುವುದು ಈ ವರ್ಷದ ಆಶಯ. ನಮ್ಮ ಋಷಿಮುನಿಗಳು ‘ಯೋಗದಿಂದ ವಿಶ್ವಕ್ಕೆ ಶಾಂತಿ’ ಎಂದು ಪ್ರತಿಪಾದಿಸಿದ್ದರು. ಯೋಗದಿಂದ ಸಮಾಜಕ್ಕೆ, ದೇಶಕ್ಕೆ, ವಿಶ್ವಕ್ಕೆ ಶಾಂತಿ ದೊರೆಯುತ್ತದೆ. ಇದನ್ನು ಕೆಲವರು ವಿಪರೀತದ ಚಿಂತನೆ ಎಂದುಕೊಳ್ಳಬಹುದು. ಆದರೆ ಭಾರತೀಯರಿಗೆ ಇದು ಹೊಸದಲ್ಲ. ಪಿಂಡದಲ್ಲಿರುವುದು ಬ್ರಹ್ಮಾಂಡದಲ್ಲಿದೆ ಎನ್ನುವುದು ಭಾರತೀಯರ ಚಿಂತನೆ. ನಾವು ಬದಲಾಗಲು ಆರಂಭಿಸಿದರೆ ಜಗತ್ತು ಬದಲಾಗುವುದು ಆರಂಭಿಸುತ್ತದೆ ಎಂದು ಹೇಳಿದರು.

ಮೈಸೂರು ಅಧ್ಯಾತ್ಮ, ಯೋಗ ಸಾಧಕರ ನೆಲೆವೀಡು:
ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನದ ಶುಭಾಶಯಗಳು. ಯೋಗದಿನದ ಪ್ರಯುಕ್ತ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಅಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆವೀಡು ಮೈಸೂರಿಗೆ ಪ್ರಣಾಮ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಯೋಗ ಈಗ ಇಡೀ ಜಗತ್ತಿನಲ್ಲಿ ಜನಪ್ರಿಯವಾಗಿದೆ. ಯೋಗ ಎನ್ನುವುದು ಆತ್ಮಪ್ರಕಾಶಕ್ಕೆ ನೆರವಾಗುವ ಪ್ರಕ್ರಿಯೆಯಾಗಿದೆ ಎಂದು ನುಡಿದರು.

ಯೋಗ ದಿನದಲ್ಲಿ ಬೊಮ್ಮಾಯಿ ಭಾಷಣ
ಮೈಸೂರಿನಲ್ಲಿ ನಡೆಯುತ್ತಿರುವ ಯೋಗ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಯೋಗದಿನ ಆಯೋಜನೆ, ಜನಪ್ರಿಯತೆಯಲ್ಲಿ ಮೋದಿ ಅವರ ಪಾತ್ರ ದೊಡ್ಡದು. ಈ ಬಾರಿ ಅವರು ಮೈಸೂರಿಗೆ ಬರುವ ಮೂಲಕ ಮೈಸೂರು ನಗರವನ್ನು ಅಂತರರಾಷ್ಟ್ರೀಯ ನಕ್ಷೆಯಲ್ಲಿ ಗಮನ ಸೆಳೆಯಲು ನೆರವಾಗಿದ್ದಾರೆ. ಯೋಗದಿಂದ ವಿಶ್ವವನ್ನುಒಂದುಗೂಡಿಸಬಹುದು ಎಂಬ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ಬೊಮ್ಮಾಯಿ ನುಡಿದರು.

ಮೈಸೂರಿನ ಇತಿಹಾಸ ಸ್ಮರಿಸಿದ ಸಚಿವ ಸೋನೊವಾಲ
ವಿಶ್ವ ಯೋಗ ದಿನಾಚರಣೆಯ ಸಭಾ ಕಾರ್ಯಕ್ರಮ ಆರಂಭವಾಗಿದ್ದು ಕೇಂದ್ರ ಆಯುಷ್ ಸಚಿವ ಸೋನೊವಾಲ ಸ್ವಾಗತ ಭಾಷಣ ಮಾಡುತ್ತಿದ್ದಾರೆ. ಈ ವೇಳೆ ಅವರು ಕರ್ನಾಟಕ ಮತ್ತು ಮೈಸೂರಿನ ಇತಿಹಾಸ ಸ್ಮರಿಸಿದ ಅವರು, ಯುವಜನರಿಗಾಗಿ ಕೇಂದ್ರ ಸರ್ಕಾರಿ ಜಾರಿಗೆ ತಂದಿರುವ ಹಲವು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು.

ಮಾನವತೆಗೆ ಯೋಗ: ಕಾರ್ಯಕ್ರಮ ಆರಂಭ
ಈ ಬಾರಿಯ ಯೋಗ ದಿನಾಚರಣೆಗೆ ಮಾನವತೆಗೆ ಯೋಗ ಎನ್ನುವ ಘೋಷವಾಕ್ಯ ನೀಡಲಾಗಿದೆ. ಇದು ಯೋಗದ ಆಶಯವನ್ನು ಸಮರ್ಥವಾಗಿ ಬಿಂಬಿಸುವ ವಾಕ್ಯ ಎನಿಸಿದೆ. ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ ರಾಜವಂಸ್ಥರಾದ ಪ್ರಮೋದಾದೇವಿ, ಯದುವೀರ್ ಒಡೆಯರ್, ಕೇಂದ್ರ ಆಯುಷ್ ಇಲಾಖೆ​ ಸಚಿವ ಸರ್ಬಾನಂದ ಸೋನೊವಾಲ, ಸಚಿವರಾದ ಡಾ.ಕೆ.ಸುಧಾಕರ್​, ಎಸ್​.ಟಿ.ಸೋಮಶೇಖರ್, ಸಂಸದ ಪ್ರತಾಪ್​ ಸಿಂಹ ಸೇರಿದಂತೆ ಹಲವರು ಸಾಥ್ ನೀಡುತ್ತಿದ್ದಾರೆ.

ಸಾವಿರ ಜನರಿಂದ ಯೋಗ
ಮೈಸೂರಿನಲ್ಲಿ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮೈಸೂರು ಅರಮನೆಯ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಕ್ಷಮದಲ್ಲಿ ಯೋಗಾಭ್ಯಾಸಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದಾರೆ. ಯೋಗ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಜನರು ಭಾಗವಹಿಸಿದ್ದಾರೆ.

ಪ್ರವೇಶ ನಿರಾಕರಣೆ: ಮೋದಿಯೊಂದಿಗೆ ಯೋಗ ಮಾಡುವ ಅವಕಾಶ ಕಳೆದುಕೊಂಡ ವಿದ್ಯಾರ್ಥಿಗಳ ನೋವು
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗ ಮಾಡಲು ಬಂದಿದ್ದ ಎಚ್​ಡಿ ಕೋಟೆಯ ಜೆಎಸ್​ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೈಸೂರು ಅರಮನೆ ಆವರಣ ಪ್ರವೇಶಕ್ಕೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಕೊನೆಯ ಹಂತದಲ್ಲಿ ಪಾಸ್ ಸಿಗದ ಕಾರಣ ಇವರನ್ನು ಪೊಲೀಸರು ಹೊರಗೆ ಕಳಿಸಿದರು. ಬೇಸರದಿಂದಲೇ ವಿದ್ಯಾರ್ಥಿಗಳು ಅರಮನೆಯಿಂದ ಹೊರಗೆ ನಡೆದರು.

ಯೋಗ ಕಾರ್ಯಕ್ರಮದ ವೇದಿಕೆಗೆ ಪ್ರಧಾನಿ
8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಿರುವ ವಿಶೇಷ ಕಾರ್ಯಕ್ರಮದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ರಾಡಿಸನ್​ ಬ್ಲೂ ಹೋಟೆಲ್​ನಿಂದ ಮೈಸೂರು ಅರಮನೆ ಮೈದಾನದ ಆವರಣಕ್ಕೆ ಮೋದಿ ಬಂದರು. ಬೆಳಗ್ಗೆ 6.30ರಿಂದ 7.45ರವರೆಗೂ ಯೋಗ ದಿನಾಚರಣೆ ಕಾರ್ಯಕ್ರಮಗಳು ನಡೆಯಲಿವೆ.

ವಿಶ್ವ ಯೋಗದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಪೂರ್ವ ನಿಗದಿತ 6.30ರ ಒಳಗೆ ಮೋದಿ ಮೈಸೂರು ಅರಮನೆಗೆ ಬಂದ ಮೋದಿ ಅವರನ್ನು ರಾಜಮಾತೆ ಪ್ರಮೋದ ದೇವಿ ಸ್ವಾಗತಿಸಿದರು. 6.30ರಿಂದ 7.45ರ ವರೆಗೂ ಯೋಗಭ್ಯಾಸ ನಡೆಸಲಿರುವ ಅವರು, ಬಳಿಕ ರಾಜವಂಶಸ್ಥರ ಜೊತೆ ಉಪಹಾರ ಸೇವಿಸಲಿದ್ದಾರೆ. ನಮೋ ಎಕ್ಸಿಬಿಷನ್ ಉದ್ಘಾಟಿಸಿದ ಬಳಿಕ ನೇರವಾಗಿ ಮೈಸೂರು ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಲಿದ್ದಾರೆ.

- Advertisement -

Related news

error: Content is protected !!