
ವಿಟ್ಲ: ಕರಾವಳಿಯಲ್ಲಿ ಇತ್ತೀಚಿಗಿನ ದಿನಗಳಲ್ಲಿ ಅಕ್ರಮ ಚಟುವಟಿಕೆ, ಕೊಲೆ, ಸುಲಿಗೆ, ಕಳ್ಳತನ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಈ ನಡುವೆ ವಿಟ್ಲದ ನಾಲ್ಕು ಮಾರ್ಗ ರಾತ್ರಿ ವೇಳೆ ಕತ್ತಲಿನಿಂದ ಕೂಡಿದ್ದು ವಿದ್ಯುತ್ ಹೈಮಾಸ್ಟ್ ದಾರಿದೀಪ ಕೆಟ್ಟು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ವಿ.ಟಿವಿ ವಿಸ್ತಾರದವಾದ ವರದಿ ಪ್ರಕಟಿಸಿತ್ತು.

ವಿ.ಟಿವಿ ವರದಿ ಪ್ರಕಟಿಸುತ್ತಿದ್ದಂತೆ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಿದೆ. ವರದಿ ಭಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪವನ್ನು ಸರಿಪಡಿಸಿದ್ದಾರೆ. ವಿದ್ಯುತ್ ಹೈಮಾಸ್ಟ್ ದಾರಿದೀಪ ಕೆಟ್ಟು ನಿಂತದ್ದು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ಬಂದರೂ ಇದರ ಬಗ್ಗೆ ಜಾಣ ಮೌನ ವಹಿಸಿದಂತೆ ಕಂಡುಬಂದಿತ್ತು.

ಕರಾವಳಿಯಲ್ಲಿ ಹರಿದ ನೆತ್ತರಿನ ಬಗ್ಗೆ ವಿವರಿಸಬೇಕಾದ ಅವಶ್ಯಕತೆ ಜಾಸ್ತಿಯಿಲ್ಲ. ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆದ್ರೆ ಇಂತಹ ಸಂಕಟದ ಸಮಯದಲ್ಲಿ ಕೇರಳದಿಂದ ನೇರವಾಗಿ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ವಿಟ್ಲ ಪೇಟೆ ನಾಲ್ಕು ಮಾರ್ಗ ಕತ್ತಲೆಯಾಗಿತ್ತು. ಆದ್ರೆ ಈಗ ದಾರಿ ದೀಪ ಸರಿಮಾಡಿದ್ದು ಪೊಲೀಸ್ ಇಲಾಖೆಗೂ ಕಟ್ಟೆಚ್ಚರ ವಹಿಸಲು ಅನುವಾಗಲಿದೆ.
ಮೊನ್ನೆಯಷ್ಟೇ ಪ್ರವೀಣ್ ನೆಟ್ಟಾರು ಹತ್ಯೆ ಕರಾವಳಿಯನ್ನೇ ನಿದ್ದೆಗಡೆಸಿತ್ತು. ಇದರಲ್ಲಿ ಶಾಮೀಲಾದ ಹಂತಕರು ಕೇರಳ ಮೂಲದವರು ಎಂಬ ಮಾಹಿತಿ ಇದೆ. ವಿಟ್ಲ ಪೊಲೀಸ್ ಠಾಣೆ ಕೇರಳಕ್ಕೆ ಹೊಂದಿಕೊಂಡಿದೆ. ಹೀಗಾಗಿ ಪೊಲೀಸರು ರಾತ್ರಿ ಹಗಲೆನ್ನದೆ ನಿಗಾ ವಹಿಸಬೇಕಾಗಿದೆ.ರಾತ್ರಿ ವೇಳೆಯಲ್ಲಿ ಏನಾದರೂ ಅನುಮಾನಾಸ್ಪದ ಓಡಾಟ ಕಂಡು ಬಂದಲ್ಲಿ ಪೊಲೀಸರ ತನಿಖೆ ಸುಲಭವಾಗಲಿದೆ.



