



ವಿಟ್ಲ ಪೊಲೀಸರ ತಂಡ ಉಕ್ಕುಡ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಜೀತೋ ವಾಹನದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆಯಾಗಿದ್ದು ವಾಹನ ಸಹಿತ ಓರ್ವನನ್ನು ಬಂಧಿಸಿದ್ದಾರೆ. ಜೀತೋ ವಾಹನದ ಚಾಲಕ ಕುದ್ದುಪದವು ಸುರುಳಿಮೂಲೆ ನಿವಾಸಿ ಅಲಿ ಎಂಬಾತನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಂತೆ ಪಡಿತರ ಮಾಫಿಯಾ ದಂಧೆ ಬಯಲಾಗಿದೆ.
ಆರೋಪಿಯನ್ನು ವಿಚಾರಣೆ ನಡೆಸಿ ಆ ಬಳಿಕ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಅಡ್ದೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಅಡ್ಯನಡ್ಕ ಸಮೀಪದ ಮರಕ್ಕಿಣಿ ನಿವಾಸಿ JSW ಸಿಮೆಂಟ್ ಏಜೆಂಟ್ ಹನೀಫ್ ಎಂಬಾತನಿಗೆ ಸೇರಿದ ಗೋದಾಮಿನಿಂದ 220 ಗೋಣಿ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಣಿ ಚೀಲ ಬದಲಿಸಿ ಪಡಿತರ ಅಕ್ಕಿ ಮಾರಾಟ ಮಾಡಲು ಯತ್ನ ನಡೆಸಿದ್ದಾಗಿ ತಿಳಿದುಬಂದಿದೆ. ವಿಟ್ಲದ ದಿನಸಿ ವ್ಯಾಪಾರಿಯೇ ಕಿಂಗ್ ಪಿನ್ ಎನ್ನಲಾಗಿದೆ.

ವಿಟ್ಲ ಇನ್ಸ್ಪೆಕ್ಟರ್ ಹೆಚ್.ಇ.ನಾಗರಾಜ್, ಎಸೈ ಸಂದೀಪ್ ಕುಮಾರ್ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ 220 ಗೋಣಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದೆ. ಪಡಿತರ ಮಾಫಿಯಾದ ವಿರುದ್ಧ ನಡೆದ ವಿಟ್ಲ ಪೊಲೀಸರ ಕಾರ್ಯಾಚರಣೆ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.