
ಬೆಂಗಳೂರು: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ನ ಹಿರಿಯ ನಟ, ಅಶ್ವತ್ಥ್ ನಾರಾಯಣ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಹಿರಿಯ ನಟ ಅಶ್ವತ್ಥ್ ನಾರಾಯಣ ಸ್ವಂತ ಮಕ್ಕಳಿಂದಲೇ ದಬ್ಬಾಳಿಕೆಗೆ ಒಳಗಾಗಿದ್ದರು. ಊಟ , ಆಶ್ರಯ ನೀಡದೇ ಮಕ್ಕಳು ತೊಂದರೆ ಕೊಡುತ್ತಿದ್ದಾರೆ, ಅಷ್ಟೇ ಅಲ್ಲದೆ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ಹಲವಾರು ಪೌರಾಣಿಕ, ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದ ಅವರು ಡಾ. ರಾಜಕುಮಾರ್ ಹಾಗೂ ಅವರ ತಂದೆ ಪುಟ್ಟಸ್ವಾಮಿ ಅವರ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸಿ, ಚಿತ್ರರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದರು. ಇಲ್ಲಿಯವರೆಗೂ ಸುಮಾರು 300 ಚಿತ್ರಗಳಲ್ಲಿ ನಟಿಸಿದ ಅವರು ಶಂಕರ್ ನಾಗ್, ಅನಂತ್ ನಾಗ್, ವಿಷ್ಣುವರ್ಧನ್, ಅಂಬರೀಶ್, ಹಾಗೂ ಉಪೇಂದ್ರ ಅವರ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿಶೇಷ ಎಂಬಂತೆ ಸ್ಯಾಂಡಲ್ವುಡ್ನ ಒಂದೇ ಕುಟುಂಬದ ನಾಲ್ಕು ತಲೆಮಾರುಗಳ ಕಲಾವಿದರಾದ ಶಿವರಾಜ ಕುಮಾರ್, ರಾಘವೆಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಹಾಗೂ ವಿನಯ್ ರಾಜಕುಮಾರ್ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಹಿರಿಯ ಕಲಾವಿದನ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.











