
ಇರಾನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲಿನ ಹೆಣ್ಣು ಮಕ್ಕಳು ಹಿಜಾಬ್ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಉಗ್ರ ರೂಪಿ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಎಚ್ಚರಿಕೆಯ ಕರೆಗಂಟೆ ಮೊಳಗಿಸಿದರೂ ಸ್ತ್ರೀ ಶಕ್ತಿ ಅದಕ್ಕೆ ಕಿಂಚಿತ್ತೂ ಕಿವಿಗೊಡುತ್ತಿಲ್ಲ. ಹಿಜಾಬ್ ಸರಿಯಾಗಿ ಧರಿಸಿರಲಿಲ್ಲ ಎಂಬ ಕಾರಣಕ್ಕೆ ಬಂಧಿತಳಾದ 22 ವರ್ಷದ ಯುವತಿ ಮೆಹ್ಸಾ ಅಮಿನಿ, ಪೊಲೀಸರ ವಶದಲ್ಲಿ ಮೃತಪಟ್ಟ ಬೆನ್ನಲ್ಲೇ ಆರಂಭಗೊಂಡ ಉಗ್ರ ಪ್ರತಿಭಟನೆಗಳು ಈಗ ಇರಾನ್ ದೇಶಾದ್ಯಂತ ವ್ಯಾಪಿಸಿವೆ.
ಪೊಲೀಸರ ನೈತಿಕಗಿರಿ ಖಂಡಿಸಿಸುತ್ತಿದ್ದಾರೆ ಅಲ್ಲಿನ ಮಹಿಳೆಯರು. ಒಗ್ಗಟ್ಟಾದ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಪ್ರಮುಖ 13 ನಗರಗಳಲ್ಲಿ ಪ್ರತಿಭಟನೆಗಳು ವ್ಯಾಪಿಸಿವೆ. ಈ ವೇಳೆ ಉಂಟಾದ ಹಿಂಸಾಚಾರದಲ್ಲಿ ಪೊಲೀಸರು ಸೇರಿ ಈವರೆಗೂ 50 ಮಂದಿ ಮೃತಪಟ್ಟರೆ ಅನೇಕ ಮಂದಿ ಗಾಯಗೊಂಡಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.
ತಮ್ಮ ಸ್ವಾತಂತ್ರ್ಯ ಮತ್ತು ಹಕ್ಕನ್ನು ಪ್ರತಿಪಾದಿಸಿ ಇರಾನ್ ಮಹಿಳೆಯರು ಹಿಜಾಬ್ ಸುಡುತ್ತಿದ್ದಾರೆ. ಪ್ರತಿಭಟನೆ ರೂಪವಾಗಿ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ. ಹಿಜಾಬ್ ಹಾಕದೇ ಬೀದಿಗೆ ಬರುತ್ತಿದ್ದಾರೆ. ಕೂದಲನ್ನು ಬಾವುಟದಂತೆ ಕೋಲಿಗೆ ಕಟ್ಟಿ ಪ್ರದರ್ಶಿಸುತ್ತಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನೇತೃತ್ವದ ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ಪ್ರತಿಭಟನೆಗಳು ಹೆಚ್ಚುತ್ತಿವೆ. ನಿಯಂತ್ರಣದ ಭಾಗವಾಗಿ ಅಲ್ಲಿನ ಸರ್ಕಾರ, ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಿವೆ. ಇರಾನ್‌ನಲ್ಲಿ ಆರಂಭವಾದ ಪ್ರತಿಭಟನೆ ಸಿರಿಯಾ ಸೇರಿದಂತೆ ಬೇರೆ ದೇಶಗಳಿಗೂ ಹಬ್ಬುತ್ತಿದೆ.
