Friday, May 3, 2024
spot_imgspot_img
spot_imgspot_img

ನನ್ನ ಮುಂದಿನ ನಡೆ ಪಕ್ಷ ಶುದ್ದೀಕರಣ ಬಿಜೆಪಿ ತೊರೆಯುವುದಿಲ್ಲ ಕಾಂಗ್ರೆಸ್ ಸೇರುವುದಿಲ್ಲ; ಡಿ ವಿ ಸದಾನಂದ ಗೌಡ

- Advertisement -G L Acharya panikkar
- Advertisement -

ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿರುವ ಸಂಸದ ಡಿವಿ ಸದಾನಂದಗೌಡ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಬಿಜೆಪಿ ಶುದ್ದೀಕರಣ ಮಾಡುವುದಾಗಿ ಶಪಥ ಮಾಡಿದ್ದಾರೆ. ಸ್ಪರ್ಧೆ ಮಾಡಿ ಅಂತಾ ನನ್ನ ಆರತಿ ಮಾಡಿ ಕರೆದುಕೊಂಡು ಬಂದು ಮಂಗಳಾರತಿ ಮಾಡಿ ಹೊರಗೆ ಕಳುಹಿಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.

ಎನ್‌ಡಿಎಗೆ ಜೆಡಿಎಸ್ ಸೇರ್ಪಡೆ ಆಗಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ಪಕ್ಷಕ್ಕೆ ಜೀವ ತೇಯ್ದವರನ್ನು ಕಡೆಗಣಿಸಬಾರದು ಎಂದು ಹೇಳಿರುವ ಸದಾನಂದಗೌಡ, ನನ್ನ ಎಲ್ಲಾ ಮಾತುಗಳೂ ಕರ್ನಾಟಕ ಬಿಜೆಪಿಗೆ ಸೀಮಿತವಾಗಿದೆ. ನಾನೊಬ್ಬ ಕನ್ನಡಿಗನಾಗಿ ಮಾತಾಡುತ್ತಿದ್ದೇನೆ. ಬಿಜೆಪಿ ಶುದ್ದೀಕರಣ ಮಾಡುವವರೆಗೆ ನಾನು ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ. ಸ್ಪರ್ಧೆ ಮಾಡಿ ಅಂತಾ ನನ್ನ ಆರತಿ ಮಾಡಿ ಕರೆದುಕೊಂಡು ಬಂದು ಮಂಗಳಾರತಿ ಮಾಡಿ ಹೊರಗೆ ಕಳುಹಿಸಿದ್ದಾರೆ. ಚುನಾವಣೆ ಬಳಿಕ ಶುದ್ದೀಕರಣಕ್ಕೆ ವೇಗ ಕೊಡುತ್ತೇನೆ. ಸಮಾನ ಮನಸ್ಕರ ಸಭೆ ಕರೆಯುತ್ತೇನೆ ಎಂದು ಸದಾನಂದಗೌಡ ಹೇಳಿದ್ದಾರೆ.

ಡಿವಿಎಸ್ ಪರಿವಾರವಾದ, ಭ್ರಷ್ಟಾಚಾರವಾದ ಬಗ್ಗೆ ನಾನು ಪಲಾಯನವಾದ ಮಾಡಿದೆ ಅಂತಾ ಆಗುವುದು ಬೇಡ ಎಂದು ಇಂದು ಸುದ್ದಿಗೋಷ್ಠಿ ಮಾಡಿದ್ದೇನೆ ಎಂದು ಹೇಳಿದ ಸದಾನಂದಗೌಡ, ಶುದ್ದೀಕರಣಕ್ಕೆ ಯಾವುದೇ ಬೆಲೆ ತೆತ್ತಾದರೂ ಕೂಡಾ ಕಾರ್ಯಕರ್ತನಾಗಿ ನಿಮ್ಮ ಸದಾನಂದ ಗೌಡ ರೆಡಿ ಇದ್ದಾನೆ ಎಂದರು. ಅಲ್ಲದೆ, ಎರಡನೇ ಬಾರಿ ನಾನು ಸುದ್ದಿಗೋಷ್ಠಿ ಮಾಡಿ ವರಿಷ್ಠರು ನಡೆ ಬಗ್ಗೆ ಮಾತಾಡಿದ ಮೂರೇ ದಿನದಲ್ಲಿ ರಾಜ್ಯಾಧ್ಯಕ್ಷರ, ವಿಪಕ್ಷ ನಾಯಕರ ನೇಮಕ ಆಯಿತು ಎಂದು ಹೇಳಿದ್ದಾರೆ.

ನನಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ನನಗೆ ನೋವಾಗಿದೆ. ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ಸತ್ಯ ಎಂದು ಸದಾನಂದಗೌಡ ಹೇಳಿದರು. ಪಕ್ಷ ಶುದ್ದೀಕರಣ ನನ್ನ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ. ಮುಂದಿನ ನಡೆ ಏನು ಎಂದು ಹಲವರು ಕೇಳಿದ್ದಾರೆ. ನನ್ನ ಮುಂದಿನ ನಡೆ ಪಕ್ಷ ಶುದ್ದೀಕರಣ. ಬಿಜೆಪಿ ತೊರೆಯುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾವೇರಿ ವಿವಾದ ಆದಾಗ ರಾತ್ರೋ ರಾತ್ರಿ ಅಫಿಡವಿಟ್ ಹಾಕಿಸಿದ್ದು ಬೇರೆ ಲಾ ಮಿನಿಸ್ಟರ್ ಅಲ್ಲ, ಸದಾನಂದ ಗೌಡ. ಇದನ್ನು ನಮ್ಮ ಪಕ್ಷದವರು ತಿಳಿದುಕೊಳ್ಳಬೇಕು ಎಂದು ಅವರು ಆಕ್ರೋಶ ಹೊರಹಾಕಿದರು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ರಾಜ್ಯದಲ್ಲಿ ಬಿಜೆಪಿ ಜನರು ಒಪ್ಪಿಕೊಳ್ಳುವ ಪಕ್ಷ ಆಗಬೇಕು. ಮೋದಿ ಹೇಳಿದ ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಮೋದಿ ಹೇಳಿದ ಪರಿವಾರವಾದ ರಹಿತ, ಜಾತಿವಾದ ರಹಿತ ಭ್ರಷ್ಟಾಚಾರ ರಹಿತವಾದ ಪಕ್ಷ ರಾಜ್ಯದಲ್ಲಿ ಇರಬೇಕು. ಇದನ್ನು ಶುದ್ದೀಕರಣಕ್ಕೆ ನಿರಂತರವಾದ ಹೋರಾಟ ನಾನು ಮಾಡುತ್ತೇನೆ ಎಂದರು.

ಶುದ್ದೀಕರಣವಾಗಬೇಕು ಎಂಬ ಮಾನಸಿಕತೆ ಇರುವ ಒಂದಷ್ಟು ಜನ ಪಕ್ಷದಲ್ಲಿ ಇದ್ದಾರೆ. ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ಪಕ್ಷ ನನ್ನ ಮಕ್ಕಳಿಗೆ, ಮನೆಯವರಿಗೆ, ಜಾತಿಯವರಿಗೆ ಚೇಲಾಗಳಿಗೆ ಅಂತಾ ಅವರು ತಿಳಿದುಕೊಂಡಿದ್ದಾರೆ. ಕರ್ನಾಟಕದಲ್ಲಿ ಮನೆಯವರಿಗೆ, ಜಾತಿಯವರಿಗೆ ಪಕ್ಷ ಆಗಬಾರದು ಎಂದರು. ಮಾಜಿ ಸಿಎಂ, ಮಾಜಿ ಡಿಸಿಎಂ ಚುನಾವಣೆಗೆ ಸ್ಪರ್ಧೆಗೆ ಒತ್ತಾಯ ಮಾಡಿದ ವಿಚಾರವಾಗಿ ಮಾತನಾಡಿದ ಸದಾನಂದಗೌಡ, ಸುಳ್ಳು ಹೇಳುವ ನಾಯಕರು ಬಿಜೆಪಿಗೆ ಆಗಬಾರದು. ಆಡಳಿತ ಮಾಡುವವರು ಸತ್ಯವಂತರಾಗಬೇಕು. ನನ್ನ ಹೆಸರು ಒಂದೇ ಇದ್ದಾಗ ಅದನ್ನು ಕೇಂದ್ರದಲ್ಲಿ ಸಮರ್ಥವಾಗಿ ಮಂಡನೆ ಮಾಡದೇ. ಇದ್ದವರು ನಾಯಕರು ಆಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲ ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಹಾಗೂ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.

- Advertisement -

Related news

error: Content is protected !!