

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಠಾಣೆ ಮುಂಭಾಗ ನಡೆದ ಪ್ರತಿಭಟನೆಯ ವೇಳೆ ಇಬ್ಬರು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ ಬಗ್ಗೆ 10 ಮಂದಿ ಪಿಎಫೈ ಕಾರ್ಯಕರ್ತರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ. 14 ರಂದು ರಾತ್ರಿ ಉಪ್ಪಿನಂಗಡಿಯಲ್ಲಿ ಠಾಣೆ ಮುಂಭಾಗ ಈ ಘಟನೆ ನಡೆದಿದ್ದು, ಕೃತ್ಯ ಎಸಗಿದ ಆರೋಪಿಗಳು ಮೊಹಮ್ಮದ್ ತಾಹೀರ್, ಸ್ನಾಧಿಕ್, ಅಬ್ದುಲ್ ಮುಬಾರಕ್, ಅಬುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್ ಪೈಜಲ್, ಮೊಹಮ್ಮದ್ ಹನೀಫ್, ಎನ್ ಕಾಸಿಂ, ಮೊಹಮ್ಮದ್ ಆಸಿಫ್ ಹಾಗೂ ತುಪೈಲ್ ಮಹಮ್ಮದ್ ಕೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ.
ಈ ಆರೋಪಿಗಳು ಉಪ್ಪಿನಂಗಡಿಯ ಠಾಣೆಯ ಮುಂಭಾಗ ಅಕ್ರಮ ಕೂಟ ರಚಿಸಿ ಠಾಣೆಗೆ ಕಲ್ಲು ಬಿಸಾಡಿ ಠಾಣೆಯ ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ ಅಲ್ಲದೇ ಠಾಣೆ ಎದುರು ನಿಲ್ಲಿಸಿದ ಇಲಾಖಾ ವಾಹನಗಳನ್ನು ಜಖಂಗೊಳಿಸಿ ಹಾನಿಗೊಳಿಸಿ ಸರ್ಕಾರಿ ಸೊತ್ತುಗಳಿಗೆ ನಷ್ಟವುಂಟು ಮಾಡಿದ್ದಾರೆಂದು ಉಪ್ಪಿನಂಗಡಿ ಪಿಎಸೈ ಓಮನ ಎನ್ ಕೆ ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ದ ಪಿಸಿ ಕಲಂ 1860 ಮತ್ತು ನಷ್ಟ ಕಾಯ್ದೆ 1981ರಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

