Thursday, April 25, 2024
spot_imgspot_img
spot_imgspot_img

ಒಳನೋಟದೊಳಗೊಂದು ಸುತ್ತು

- Advertisement -G L Acharya panikkar
- Advertisement -

ದುಡ್ಡಿದ್ರೆ ಯರ್ರಾಬಿರ್ರೀ ಖರ್ಚು ಮಾಡೋ ಮನಸ್ಸು! ದುಡ್ಡಿಲ್ಲಾಂದ್ರೆ ಇದ್ದುದರಲ್ಲೇ ಹೊಂದಿಕೊಂಡು ಹೋಗೋ ಜಾಣ್ಮೆ! ಇತರರ ದುಡ್ಡಿನ ಹಂಗೇ ಬೇಡ ಎಂಬ ಸ್ವಾಭಿಮಾನದ ಬದುಕು ಶಿಸ್ತಿನಿಂದ ಬೆಳೆಯಲು ಕಾರಣವಾಗುತ್ತದೆ. ದುಡ್ಡಿದ್ರೇನೇ ನೆಮ್ಮದಿ ಅಂತ ಅಂದ್ಕೊಳ್ಳೋರು ಕೆಲವರಾದರೆ, ಒಪ್ಪತ್ತು ಊಟವೇ ರುಚಿಯಾಗಿ ಮೃಷ್ಟಾನ್ನ ಭೋಜನವೇ ಆಗುವಂತಹ ಮನಸ್ಸು ವಾಹ್ ಮೆಚ್ಚಲೇಬೇಕು. ಅಲ್ಲಾ ಈ ನಾಲಿಗೆಗೋಸ್ಕರ ತಾನೇ ರುಚಿರುಚಿಯಾಗಿ ಮಾಡಿ ಹಾಕುವುದು. ಹೊಟ್ಟೆಯೇನೂ ಇಂತದ್ದೇ ಬೇಕು ಅಂತ ಕೇಳಲ್ಲ. ಆದರೆ ನಾಲಿಗೆ ಕೇಳ್ಬೇಕಲ್ಲ! ಎಂದು ಅಲವತ್ತುಕೊಳ್ತಾ ಅದು ಚೆನ್ನಾಗಿಲ್ಲ ,ಇದಕ್ಕೆ ಸಿಹಿ ಕಡಿಮೆಯಾಯ್ತು, ಅದಕ್ಕೆ ಕೊಂಚ ಉಪ್ಪು ಜಾಸ್ತಿ ಆಯ್ತು ಅಂತ ತಗಾದೆ ಎಳೆಯುವವರೇ ಜಾಸ್ತಿ. ಹೊಂದಿಕೊಂಡು ಹೋಗೋದನ್ನು ನಾಲಿಗೆಗೆ ಕಲಿಸಿಕೊಡ್ಬೇಕಪ್ಪಾ ಅಂತನ್ನಿಸದೇ ಇರಲಾರದು.

driving

ಹೊಂದಿಕೊಂಡು ಬಾಳ್ತಾ ಇಲ್ವೇ ಅದು ಅಂತನ್ನಿಸೋದೂ ಸಹಜ. ಮೂವತ್ತೆರಡು ಮಂದಿ ಸೈನಿಕರೊಂದಿಗೆ ಅಷ್ಟು ಜಾಗ್ರತೆಯಾಗಿ ಪ್ರತಿಕ್ಷಣ ಹೋರಾಡೋದು ಗೊತ್ತೇ ಇದೆ ತಾನೇ? ಆದರೂ ಕೆಲವೊಮ್ಮೆ ಅನಾಹುತ ಸೃಷ್ಟಿಸಿ ಬಿಡುವುದುಂಟು. ಮತ್ತೆ ಆರಿಸಲು ಏಳೇಳು ಜನ್ಮ ಇದ್ದರೂ ಸಾಕಾಗದು! ಅದಿರಲಿ, ವಿಪರೀತ ಹಸಿವಾದಾಗ ಮುಷ್ಟಿ ಅನ್ನ ಅಥವಾ ಗಂಜಿ ಮೃಷ್ಟಾನ್ನವಾಗಿ ದೇವರಿಗೆ ನೈವೇದ್ಯ ಒದಗಿಸಿದಂತೆಯೇ ಪರಮಾನ್ನವಾಗುತ್ತದೆ. ಹೌದಲ್ಲ ನಮ್ಮೊಳಗಿನ ಆ ಪರಮಾತ್ಮನಿಗೆ ಅದು ನೈವೇದ್ಯವೇ ತಾನೇ.

ಕೆಲವೊಂದು ಸಲ ಒತ್ತಡದಲ್ಲಿ ಮನಸ್ಸು ಮುದುಡಿ ಖಾಲಿಯಾಗಿ ಎಲ್ಲೋ ಮೂಲೆಯಲ್ಲಿ ಬಿದ್ದುಕೊಳ್ಳುತ್ತದೆ. ಆಗಲೇ ಬದುಕು ಅದರ ದಾರಿಯ ಕುರಿತು ಯೋಚಿಸತೊಡಗುತ್ತದೆ. ಅಲೌಕಿಕ ದಾರಿ ಹೇಗೆ ಹೊರಗೆ ಕಾಣಲಾರದೋ ಹಾಗೆಯೇ ನಡೆಯುವ ಅಥವಾ ಸಾಗುವ ದಾರಿಯೂ ಕೂಡ ಅಸ್ಪಷ್ಟವೇ ಆಗಿರುತ್ತದೆ. ಬರಿದೇ ಹಾಗೆ ಹೀಗೆ ಎಂದು ಊಹೆ ಮಾಡಲಷ್ಟೇ ಸರಿ. ಅದರಿಂದ ಮೀರಿ ಏನೂ ಆಗದು. ದಾರಿಗನೆಂದರೆ ನಮ್ಮೊಳಗಿರುವ ಆ ಉಸಿರೇ ಹೌದು. ಸರಿಯಾಗಿ ಉಸಿರಾಡಿದೆವೆಂದಾದರೆ ಸರಿಯಾದ ಕ್ರಮದಲ್ಲಿ ಸಾಗುವೆವೆಂದಾಗಿರಬಹುದು.

ಯಾವುದೋ ಒಳ್ಳೆಯ ವಿಷಯದಲ್ಲಿ ಮಾತು ಆಡಿ ಬಳಿಕ ಆ ವಿಷಯ ಬಿಟ್ಟು ಬೇರೆ ವಿಷಯಾಂತರವಾಗುವುದಿದೆ. ನಿಗದಿತ ಮಾರ್ಗದಲ್ಲಿ ಹೊರಟಂತಹ ಬಸ್ಸು ಅಥವಾ ಯಾವುದೇ ವಾಹನವಾಗಿರಲಿ ಮಧ್ಯದಲ್ಲಿ ರಸ್ತೆಯಲ್ಲಿ ಅಡಚಣೆಯಿದ್ದರೆ ಅಡ್ಡರಸ್ತೆಯಿಂದಾಗಿ ತನ್ನ ನಿಗದಿತ ನಿಲ್ದಾಣ ಸೇರಲು ಸಾಗಲೇ ಬೇಕಾಗುತ್ತದೆ. ಆದರೆ ಕೊನೆಗೆ ತನ್ನ ಮೂಲ ಸ್ವಸ್ಥಾನಕ್ಕೆ ಸೇರುವಂತಿರುತ್ತದೆ. ಹಾಗೆಯೇ ಈ ಮಾತಿನ ಮಂಟಪವು ಕೂಡ. ಸುತ್ತು ಬಳಸಿ ಹೇಗೆ ಸಾಗಿದರೂ ಮೂಲ ಉದ್ಧೇಶವನ್ನು ಮರೆಯದೇ ಪಾಲಿಸಬೇಕು. ಸೀತೆಯನ್ನು ಕಾಣಲು ಲಂಕೆಗೆ ಪ್ರಪಥಮವಾಗಿ ಬಂದ ಹನುಮನು ಸೀದಾ ಹೋಗಿ ಸೀತೆಯನ್ನು ಕಂಡು ಮಾತಾಡಲಿಲ್ಲ. ಹುಡುಕುತ್ತ ಹುಡುಕುತ್ತ ಸೀತಾಮಾತೆ ಹೇಗಿರಬಹುದು ಎಂದು ಕಲ್ಪಿಸಿಕೊಳ್ಳುತ್ತ ಸಾಗಿದ ಹನುಮಂತ ಕೊನೆಗೆ ಒಬ್ಬಳೇ ನಿಸ್ತೇಜಳಾಗಿ ಕುಳಿತ ಸೀತಾಮಾತೆಯನ್ನು ಕಾಣುತ್ತಾನೆ. ಆದರೆ ಯೊಚನೆ ಮಾಡಿ ಅವಕಾಶ ಬಳಸಿಕೊಂಡು ಸುತ್ತೆಲ್ಲ ವೀಕ್ಷಿಸಿ ನಿಧಾನವಾಗಿ ಹೇಗೆ ಸೀತೆಯ ಬಳಿಗೆ ಬರುವಂತೆಯೇ ಈ ಮಾತು ಸಾಧನೆಗೆಂದೇ ಮೂಲವಾಗಬೇಕು. ಹೊರತು ಕಾಲಹರಣವಾಗಬಾರದು. ಬದುಕು ಯೋಚಿಸಿದಷ್ಟೂ ಯೋಚನಾತೀತವಾಗಿ ಮುಂದುವರಿಯುತ್ತದೆ. ಆ ದೇವರ ಸ್ಮರಣೆಯಿಂದ ಮಾತ್ರ ಬದುಕಿನ ದಾರಿ ಬೆಳಕಾಗುತ್ತದೆ. ದಿನಗಳು ಸಾಗುತ್ತಿರುತ್ತವೆ. ಬೆಳಕು ಮಸುಕಾದಾಗ ಮಬ್ಬು ಆವರಿಸುತ್ತದೆ. ಹಾಗೆಂದು ಬೆಳಕು ಓಡಿಹೋಗುವುದುಂಟೇ? ದಾರಿಗನ ನೋಟದ ಬೆಳಕು ಯಾವಾಗಲೂ ಮುಂದೆಯೇ ಸಾಗುತ್ತಿರುತ್ತದೆ. ಕಾಲುಗಳು ಚಲಿಸುವ ಕಾಲದಂತೆ, ರಾತ್ರಿಯಾಗಿ ಹಗಲಾಗುವಂತೆ ನಿರಂತರ ಚಲಿಸುತ್ತಲಿರಬೇಕು. ನಿಲ್ಲುವ ಪ್ರಸಂಗ ಎಲ್ಲೂ ಇರದು. ಗುರಿಯೆಡೆಗಿನ ನೋಟ ಕಾರ್ಯತತ್ಪರನನ್ನಾಗಿಸಿ ಬದುಕಿನ ಹಾದಿಯ ಸೌಂದರ್ಯಕ್ಕೆ ಸಾಕ್ಷಿಯಾಗುತ್ತದೆ.

ತೆಂಗಿನ ಮರ ಕಾಣದವರು ಅತಿ ವಿರಳ. ಅದುವೇ ಕಲ್ಪವೃಕ್ಷ ಆರೋಗ್ಯದ ಮೂಲವೂ ಹೌದು. ಅದು ಬಿಡುವ ಒಂದೊಂದು ಗರಿಗಳ ಹೆಜ್ಜೆ ಗುರುತು ಗರಿಗಳು(ಮಡಲು) ಉದುರಿ ಬಿದ್ದ ಮೇಲೂ ಅಚ್ಚಳಿಯದೇ ನಿಲ್ಲುವಂತೆ ಮನುಷ್ಯರ ಒಳಿತಿನ ದಾರಿಯ ಹೆಜ್ಜೆ ಗುರುತು ಸಮಾಜದಲ್ಲಿ ಕಾಣಬೇಕಾದರೆ ಸ್ವಾಮಿ ವಿವೇಕಾನಂದರ ವಾಕ್ಯವು ಪ್ರತಿಯೊಬ್ಬರ ಮನಗಳಲ್ಲೂ ಸದಾ ಪ್ರತಿಧ್ವನಿಸುತ್ತಿರಬೇಕು. ಆಗಲೇ ಜೀವನದ ಎಲ್ಲಾ ಕಷ್ಟಗಳು, ಸಾಗುವ ನೀರಿನಲ್ಲಿ ಸಕಲ ಕಶ್ಮಲ ಕೊಳೆಗಳು ಸರಾಗವಾಗಿ ಕೊಚ್ಚಿಹೋಗುವಂತೆ ಹೋಗುತ್ತದೆ. ಸ್ವಚ್ಛ ಮನಸ್ಸು ಪುನರಾವಲೋಕನೆ ಮಾಡುತ್ತ ತನ್ನ ಒಳಿತಿನ ಕಾರ್ಯ ಮುಂದುವರಿಸಲು ಅನುವಾಗುತ್ತದೆ.

ವಿದ್ಯುತ್ ಒಂದು ದಿನ ಪೂರ್ತಿ ನಿಲುಗಡೆಯಾಗುವುದೆಂದು ಹಿಂದಿನ ದಿನವೇ ಗೊತ್ತಾದಾಗ ಮರುದಿನದ ಎಲ್ಲಾ ಕಾರ್ಯಗಳನ್ನು ವಿದ್ಯುತ್ ಕಡಿತವಾಗುವ ಮೊದಲೇ ಮಾಡಿ ಮುಗಿಸುವುದು ಸರ್ವೇ ಸಾಮಾನ್ಯ. ಹಾಗೆಯೇ ಬದುಕಿನ ಬಂಡಿಯ ಅನಿಶ್ಚಿತತೆಯ ಪರಿಣಾಮ ಮಾಡಬೇಕಾದ ಕಾರ್ಯಗಳನ್ನು ಶೀಘ್ರವಾಗಿ ಮಾಡಿ ಮುಗಿಸಿದಾಗ ಬದುಕಲ್ಲಿ ಹೊರೆ ಕಡಿಮೆಯಾಗುವುದು ಸಹಜ. ಹಾಗೆಂದು ಒಂದು ವಾರಕ್ಕಾಗುವಷ್ಟು ಊಟ ಮಾಡುವುದು ಉಚಿತವಲ್ಲ! ಹೊಟ್ಟೆಗೆ ಸೇವಿಸುವ ಆಹಾರವು ಕೇವಲ ಹಸಿವನ್ನು ನೀಗಿಸಲಿಕ್ಕೆ ಸಾಕು. ಮೃಷ್ಟಾನ್ನ ಭೋಜನವನ್ನುಂಡಾಗ ಮಾಡಬೇಕಾದ ಕಾರ್ಯಗಳು ನಿಧಾನವಾಗಿ ಆರೋಗ್ಯದ ಮೇಲೂ ಪರಿಣಾಮವಾಗುವುದುಂಟು. ಹಾಗಾಗಿ ಮಿತ ಆಹಾರ ಆರೋಗ್ಯದ ಸರದಾರ ಎನ್ನಲಡ್ಡಿಯಿಲ್ಲ. ಅಥವಾ ಉಪವಾಸವೇ ಇದ್ದಾಗ ದೇವರು ಸನಿಹವೇ ಇರುವಂತೆ ಭಾಸವಾಗುವುದುಂಟು. ಕಾಣುವ ಕಣ್ಣಿದ್ದರೂ ನೋಡುಗನ ನೋಟ ಮುಖ್ಯವಾಗುತ್ತದೆ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದಂತೆ ದೇವರ ರೂಪ ಮನದೊಳಗಿಳಿದಾಗ ಒಳನೋಟದ ದೃಷ್ಟಿ ಆ ರೂಪದಲ್ಲೇ ತಲ್ಲೀನವಾಗುವ ಸಮಯವೇ ಅತ್ಯಂತ ಶ್ರೇಷ್ಠ ಕ್ಷಣ. ಆ ಕ್ಷಣ ಅಮೂಲ್ಯವಾದುದು. ಪ್ರಯತ್ನ ಮಾತ್ರದಿಂದ ಮಾತ್ರ ಆ ಕ್ಷಣ ಸದಾ ಸಿಗಬಹುದಷ್ಟೆ.


ಮನವೆಂಬ ಒಳಪ್ರಪಂಚದೊಳಗೆ ಸುತ್ತು ಹಾಕಿ ಪ್ರತೀ ಕ್ಷಣವನ್ನು ದೇವರ ಸ್ತುತಿಯನ್ನಾಗಿ ಪರಿವರ್ತಿಸಿ ಪೂಜೆ ಮಾಡಿ ಸನ್ನದ್ಧರಾದೆವೋ ಅಂದೇ ಸಾಧನೆಯ ಮೆಟ್ಟಿಲು ಹತ್ತುತ್ತಿದ್ದೇವೆ ಎಂದರ್ಥ. ಇಲ್ಲವಾದಲ್ಲಿ ಬರಿಯ ಢಾಂಬಿಕತನದ ಭಕ್ತಿಯಾಗಿ ಎಣ್ಣೆಯಿರದ ಬೆಳಕಾಗಿ ಕ್ಷಣಮಾತ್ರದಲ್ಲಿ ಬದುಕು ನಶ್ವರತೆಯ ಕಗ್ಗತ್ತಲೆಯಾಗಿ ಬರಿದೇ ವ್ಯರ್ಥವಾಗಬಹುದು. ಹಾಗಾಗಿ ಒಳನೋಟದಲ್ಲಿ ದೇವರ ದರ್ಶನ ಸದಾ ಕಾಣುತ್ತಿರಲಿ.

*ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು

- Advertisement -

Related news

error: Content is protected !!