Saturday, April 20, 2024
spot_imgspot_img
spot_imgspot_img

ಬದುಕಿಗೆ ಪಾಠವನ್ನು ಕಲಿಯುವ ಬಗೆ

- Advertisement -G L Acharya panikkar
- Advertisement -

✍️ ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು

ಬದುಕು ಬಂಗಾರವೆ; ನಿತ್ಯವೂ ಸ್ನೇಹದಿಂದ ಸದಾಚಾರದಿಂದ ಶುದ್ಧವಾಗಿಟ್ಟುಕೊಂಡರೆ ಬೇರೆ ಬಂಗಾರವೇ ಬೇಕಿಲ್ಲ. ಬಂಗಾರ ಎಂದಾಕ್ಷಣ ಮನಸ್ಸು ಸ್ನೇಹಪೂರ್ವಕ ನಿಸ್ವಾರ್ಥ ಅಭಿಮಾನ ದಯೆ, ಕರುಣೆ, ಸಹನೆ, ತಾಳ್ಮೆ ಇವೆಲ್ಲವುಗಳ ಎರಕಹೊಯ್ದ ಸರವೇ ಹೌದು. ಆ ಸರವು ಬಹಳ ಕಾಲ ಬಾಳಿಕೆ ಬರುವಂತಹದು. ಹೌದು ಇವೆಲ್ಲವುಗಳನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳುವುದು. ಅದಕ್ಕೆ ಯೋಗಮಾರ್ಗ ಎಂಬುದಿದೆ.

ಬ್ರಾಹ್ಮೀ ಮುಹೂರ್ತದ ಹೊತ್ತು ಸೂರ್ಯನು ಬರುವ ಮೊದಲೇ ಎದ್ದು ದೇಹವನ್ನು ದಂಡಿಸಿ ಸೂರ್ಯ ನಮಸ್ಕಾರ ಮಾಡಿದಾಗ ಹೊಸ ಚೈತನ್ಯ ಪ್ರವಹಿಸುತ್ತದೆ. ದೇಹದೊಳಗಿನ ಎಲ್ಲಾ ಜೀವಕೋಶಗಳು ವಿಕಾಸಗೊಳ್ಳುತ್ತದೆ. ಮನಸ್ಸನ್ನು ಉಲ್ಲಾಸವಾಗಿರಿಸುತ್ತದೆ. ನೋಡಿದ, ಕೇಳಿದ, ತಿಳಿದ, ಮಾತಾಡಿದ, ಅನುಭವಿಸಿದ ಮಾತುಗಳು ಅಕ್ಷರ ರೂಪ ಬರಲು ಆ ಸರಸ್ವತಿಯೊಲುಮೆ ಕೈಯ ಎರಡು ಬೆರಳಿನ ತುದಿಗೆ ಇಳಿದು ಬರಬೇಕು. ಲೇಖನಿಯನ್ನು ಪ್ರೀತಿಯಿಂದ ಮೈ ಸವರುತ್ತ ಹಾಗೆಯೇ ಹೆಬ್ಬೆರಳು ಮತ್ತು ತೋರು ಬೆರಳಿನ ನಡುವೆ ಸುಖಾಸೀನದಲ್ಲಿ ಒರಗಿಸಬೇಕು. ಬೆರಳ ತುದಿಗಳು ಮೃದುವಾಗಿ ಲೇಖನಿಯನ್ನು ಕೆಳಮುಖವಾಗಿ ಬರೆಯಲು ಪ್ರೇರೇಪಿಸಬೇಕು. ಆಗ ಸುಂದರ ಭಾವನೆಗಳ ಗುಚ್ಚ ಸೃಷ್ಟಿಯಾಗುತ್ತದೆ. ದಿಗ್ಗಜರು ಬೆರಗಾಗುವಂತಹ ಸಾಹಿತ್ಯ ಸೃಷ್ಟಿಯಾಗುತ್ತದೆ. ಅದು ಮೊಳಕೆಯೊಡೆದ ಬೀಜದ ರೀತಿ.

ಅದ್ಭುತ ಸೃಷ್ಟಿಯ ರಹದಾರಿಗೆ ಮನಸ್ಸು ಕೆಲವೊಮ್ಮೆ ಆಶ್ಚರ್ಯಗೊಳ್ಳುತ್ತದೆ. ನಾನು ಹೀಗೆ ಯೋಚಿಸಿದೆನಾ? ಅಥವಾ ನನ್ನೊಳಗೆ ಯಾವುದೋ ಕಾಣದ ಆ ಶಕ್ತಿ ಹಾಗೆ ಪ್ರೇರೇಪಿಸಿತಾ? ಎಂದು ಆಲೋಚನೆ ಮಾಡುವಂತೆ ಮಾಡುತ್ತದೆ. ಚಿತ್ರ ಪರದೆಯ ಹಿಂದೆ ಚಿತ್ರವನ್ನು ಬಿಟ್ಟಾಗ ತಾನೇ ಎದುರಿರುವ ಮಂದಿ ಕುಳಿತು ವೀಕ್ಷಿಸಲು ಸಾಧ್ಯವಾಗುವುದು. ಅದೇ ರೀತಿ ನಮ್ಮೊಳಗಿನ ಭಾವನೆಗಳಿಗೆ ಅಕ್ಷರ ರೂಪ ಕೊಡಲು ಕಾಣದ ನಿರಾಕಾರನಾದ ಆ ದೈವೀ ಶಕ್ತಿಯೇ ಕಾರಣ ಎನ್ನಲೇ ಬೇಕು. ಆ ಶಕ್ತಿಗೆ ದಿನವೂ ನಮಿಸಲೇಬೇಕು, ಪ್ರಾರ್ಥಿಸಲೇಬೇಕು, ಹಾಡಲು ಬೇಕು, ಕುಣಿದಾಡುತ ಅನುಭವಿಸಬೇಕು.

ಚಿಂತನಶೀಲ ಮನಸ್ಸು ಭಾವನೆಗಳನ್ನು ಪ್ರೀತಿಸುತ್ತದೆ. ಹಾಗೆಯೇ ನೋವಾದಾಗ ಕೊರಗುತ್ತದೆ. ಅದರ ಜೊತೆಗೆ ಕುಳಿತು ಮಾತಾಡಿದಾಗಲೇ ಕೆಲವೊಮ್ಮೆ ಬಾಹ್ಯದರಿವು ಮರೆತು ಹೋಗುವುದುಂಟು. ಹಸಿವು ಇಂಗಿ ಹೋಗುವುದುಂಟು. ಭಾವನೆಗಳ ಆರೈಕೆಯಲ್ಲಿ ಬಾಹ್ಯದ ಗೊಡವೆ ಯಾಕಯ್ಯ ಎನ್ನುವ ಪರಿಸ್ಥಿತಿ ಉದ್ಭವವಾಗುವುದು ಇದೇ ಸಂದರ್ಭದಲ್ಲಿ. ಹಾಗಾಗಿ ಭಾವನೆಗಳಿಗೆ ಸುದೃಢತೆ ಉಂಟಾಗಲು ಭಕ್ತಿಪೂರ್ವಕ ಯೋಗ್ಯವಾದ ಪುಸ್ತಕಗಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು ಒಳ್ಳೆಯ ಆಲೋಚನೆಗೆ ಇದು ಪ್ರೇರಣೆಯಾಗುತ್ತದೆ. ಸರಳ ಜೀವನಕ್ಕೆ ದಾರಿ ತೋರಿಸುತ್ತದೆ.

ಸಾದಾ ಆಹಾರ, ಸಾದಾ ಉಡುಗೆ-ತೊಡುಗೆ, ಇದ್ದದ್ದನ್ನು ಇದ್ದ ಹಾಗೆಯೇ ಸ್ವೀಕರಿಸುವುದು, ಬಾಹ್ಯದ ಅರಿವಿಗೆ ಪೋಷಾಕು ಹಾಕಿ ಇತರರ ಕಣ್ಣಿಗೆ ಶ್ರೀಮಂತರೆನಿಸಿಕೊಳ್ಳುವುದು ಸರ್ವದಾ ಅಗತ್ಯವೇ ಇಲ್ಲ. ಒಳಗಿನ ಅಂತರಾತ್ಮಕ್ಕೆ ನಾವು ಹೇಗೆ ಏನು ಎಂಬ ದಿವ್ಯಜ್ಞಾನ ತಿಳಿದೇ ಇರುತ್ತದೆ. ಮತ್ತೆ ಹೊರಗಿನ ಕಣ್ಣುಗಳಿಗೆ ಯಾಕೆ ಕೃತಕ ತೋರಿಕೆ ಬೇಕು. ಜೀವಿಸಲು ಸರಳವಾದ ಆಹಾರ ಸಾಕು. ಭೂರಿಭೋಜನ ಹೊಟ್ಟೆಯ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ನಿತ್ಯ ನಿಯಾಮಕನಿಗೆ ಸರಳವಾದ ಪ್ರಾರ್ಥನೆಯೇ ಸಾಕು. ಭಕ್ತಿಯ ಆಡಂಬರವೂ ಬೇಕಿಲ್ಲ. ದಾಸರು ಹೇಳಿರುವಂತೆ ನಿರಾಡಂಬರ ಭಕ್ತಿಯಿಂದ ಪೂಜೆಯನ್ನು ಮಾಡಿದರೆ ಒಲಿಯುತ್ತಾನೆ ಶ್ರೀಹರಿ.

ಮನದಲ್ಲಿ ನಿತ್ಯವೂ ಹರಿನಾಮಸ್ಮರಣೆ ಮನಸ್ಸಿಗೆ ಯೋಗ್ಯ ಆಹಾರವನ್ನು ಪೂರೈಸಿದಂತೆ. ಊಟಕ್ಕೆ ಹದಿನೈದು-ಇಪ್ಪತ್ತು ಬಗೆಯ ವಿವಿಧ ಪದಾರ್ಥಗಳು ಇದ್ದರೂ ರುಚಿ ಕೆಟ್ಟು ಹೋಗಬಹುದೇ ಹೊರತು ಎಲ್ಲದರ ಸ್ವಾದ ಅರಿವಿಗೆ ಬಾರದು. ಹಾಗೆಯೇ ಅಬ್ಬರದ ಸಂಗೀತ ಕರ್ಕಶಗೊಂಡು ಕಾದ ಎಣ್ಣೆಯನ್ನು ಕಿವಿಗೆ ಹಾಕಿದಂತೆ ಆಗಬಹುದು. ಮನದ ಭಕ್ತಿಗೆ ಯಾವುದೇ ಆಮಿಷಗಳು ಬೇಕಿಲ್ಲ.

ಊಟಕ್ಕೆ ಒಂದು ಚೂರು ಉಪ್ಪಿನಕಾಯಿ ಇದ್ದರೂ ಸಾಕಾಗುತ್ತದೆ. ಹೊಟ್ಟೆಗೆ ಎಷ್ಟು ಬೇಕು ಅದನ್ನು ಸೇವನೆ ಮಾಡಲು ಸಾಧ್ಯವಾಗುತ್ತದೆ. ಮದುವೆ ಹಬ್ಬ ಹರಿದಿನಗಳ ಭೂರಿ ಭೋಜನವೂ ಸಹ ಅಷ್ಟೇ. ಆದಿಯಲ್ಲಿ ತಿಂದ ಆಹಾರದ ರುಚಿ ಮಾತ್ರ ಸವಿಯಾಗಿರುತ್ತದೆ. ಮತ್ತಿನವು ತೋರಿಕೆಗಷ್ಟೇ ಹೊರತು ಯಾವ ಪ್ರಯೋಜನವೂ ಆಗದು. ಬರಿದೇ ಹೊಟ್ಟೆಯ ಹಸಿವು ಮಾತ್ರ ಅಗತ್ಯ ಅಲ್ಲ. ಮನಸ್ಸಿನ ಯೋಜನೆಯ ಹಸಿವಿಗೆ ಸದಾಕಾಲ ಪುಸ್ತಕಗಳು ಅತ್ಯಗತ್ಯ. ಓದುವಿಕೆಗಿಂತ ಮಿಗಿಲಾದ ಅನ್ಯ ತಪವು ಇಲ್ಲ.

ಬುದ್ಧಿ ಎಷ್ಟೇ ಚೆನ್ನಾಗಿದ್ದರೂ ಮನಸ್ಸು ಇಲ್ಲದಿದ್ದರೆ ಅದು ನಿರರ್ಥಕ. ಹಾಗಾಗಿ ಮನಸ್ಸಿನ ಅನುಕೂಲಕ್ಕೆ ತಕ್ಕಂತೆ ಬುದ್ಧಿಯನ್ನು ಬಳಸಿಕೊಳ್ಳಬೇಕು. ಅಂತರಂಗದ ಸಾಧನೆಗಾಗಿ ಮೈಮನಗಳೆರಡನ್ನೂ ಜೊತೆಜೊತೆಯಾಗಿ ಸಾಗುವಂತೆ ಮಾಡಬೇಕು. ಸಾಧಿಸಿದರೆ ಸಬಳ ನುಂಗಬಹುದು ಎಂಬ ಮಾತಿನಂತೆ ದಿನದಿನವು ಮಾಡುವ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡುತ್ತಾ ಮುಂದುವರಿಯಬೇಕು. ಆಗ ಹಾದಿ ಯಶಸ್ಸಿನ ಕಡೆಗೆ ಮುಖ ಮಾಡುತ್ತದೆ.

ಮನಸ್ಸಿನ ಕನ್ನಡಿಯನ್ನು ಸ್ವಚ್ಛವಾಗಿರಿಸಿಕೊಂಡರೆ ಆಯಿತು. ಶುಭ್ರತೆ ತಾನಾಗಿ ಪ್ರತಿಫಲನಗೊಳ್ಳುತ್ತದೆ. ಬೆಳಕು ಅಂತರಂಗದಲ್ಲಿ ಹರಿದು ಹೊನಲಾಗಿ ಸಚೇತನಗೊಳ್ಳಲಾರಂಭಿಸುತ್ತದೆ. ಕರ್ತವ್ಯ ವಿಮುಖರಾಗದೇ ವಿಧಿ ನಿಯಾಮಕನ ಕರ್ತವ್ಯಪರತೆಯಂತೆ ಸದಾ ಸನ್ಮಾರ್ಗದ ಪಥದಲ್ಲಿ ಬೆಳದಿಂಗಳಾಗಿ ಸುಮಗ್ನರಾಗೋಣ. ಯಾರನ್ನೂ ನೋಯಿಸದೇ ಕೃತಜ್ಞತಾ ಮನೋಭಾವ ನಮ್ಮದಾಗಿಸೋಣ. ಭೂ ತಾಯಿಗೂ ಕೃತಜ್ಞರಾಗಿರೋಣ. ಅವಳಿರದೇ ನಾವು ಉಂಟೇ? ಹಿಡಿ ಮಣ್ಣಿಂದ, ಹಿಡಿ ಅನ್ನವೆಂಬುದ ಪ್ರತಿದಿನವೂ ಮರೆಯದಿರೋಣ. ಬಂದ ಪ್ರತಿ ಜೀವಗಳೆಲ್ಲವೂ ಮಣ್ಣಾಗುವುದು, ಮಣ್ಣಿಗೇ ಸೇರುವುದೆಂದು ಅರಿತು ಬದುಕಿದರೆ ಸಾರ್ಥಕವಾಗುವುದು ತನುಮನ.

ಬಾನ ಬೆಳಕಿನಲ್ಲಿ ಕಾಣುವ ಸೂರ್ಯನು ಕೂಡ ಕೆಲವೊಮ್ಮೆ ಏಕಕಾಲದಲ್ಲಿ ವಿವಿಧ ತೆರನಾಗಿ ಗೋಚರಿಸುತ್ತಾನೆ. ಅದು ಪ್ರಕೃತಿ ನಿಯಮಕ್ಕೆ ತಕ್ಕುದಾಗಿರುತ್ತದೆ ಆದರೆ ಮನುಷ್ಯನಿಗೆ ಸಮರ್ಪಕ ವಾಗಿರುವುದಿಲ್ಲ. ಹಾಗಾಗಿ ಯಾವೊಂದು ಕಾರ್ಯಗಳು ಮನುಷ್ಯನ ವರ್ತನೆಗೆ ನೇರವಾಗಿ ಇರುವುದಿಲ್ಲ ಎಂದು ಭಾವಿಸಬೇಕು. ಜೀವನದ ಅನುಭವಗಳು ಬದುಕನ್ನು ತತ್ವ ಆದರ್ಶಗಳಿಗೆ ನಡೆಸುವಂತೆ ಪ್ರೇರೆಪಿಸಬೇಕು.

ಆಗಲೇ ಹುಟ್ಟು ಪಡೆದ ಈ ಜನ್ಮವು ಸಾರ್ಥಕತೆಯನ್ನು ಪಡೆಯಬಹುದು. ಇತರರಿಗೆ ಉಪಕಾರ ಮಾಡದಿದ್ದರೂ ತೊಂದರೆಯಿಲ್ಲ. ಆದರೆ ಅಪಕಾರವನ್ನು ಎಂದಿಗೂ ಮಾಡಲೇಬಾರದು. ಹೇಗೆ ಪ್ರಕೃತಿ ಮನುಷ್ಯನಿಗೆ ಬಾಳಿನುದ್ದಕ್ಕೂ ಎರ ವಾಗಿರುತ್ತದೆಯೋ ಹಾಗೆ ಮನುಷ್ಯನು ಪ್ರಕೃತಿಗೆ ಹಾನಿ ಮಾಡದೆ ಬದುಕಲು ಕಲಿಯಬೇಕಾಗಿದೆ. ರಾಕ್ಷಸ ಪ್ರವೃತ್ತಿ ಬಿಟ್ಟು ಬಿಡಬೇಕಾಗಿದೆ.

mallikajrai8gmail.com

- Advertisement -

Related news

error: Content is protected !!