Thursday, June 18, 2026
spot_imgspot_img
spot_imgspot_img

ಕಾಲ್ನಡಿಗೆಯಲ್ಲೇ ಹಜ್ ಯಾತ್ರೆಗೆ ಹೊರಟ ಶಿಹಾಬ್‌.! 9 ತಿಂಗಳ ಅವಧಿ – 8,600ಕ್ಕೂ ಅಧಿಕ ಕಿ.ಮೀ

- Advertisement -
- Advertisement -

ಮಲಪ್ಪುರಂನಿಂದ ಸುಮಾರು 8,600ಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ಮಕ್ಕಾವನ್ನು 9 ತಿಂಗಳ ಅವಧಿಯ ಕಾಲ್ನಡಿಗೆಯಲ್ಲೇ ಕ್ರಮಿಸಿ ಹಜ್ ಯಾತ್ರೆಗೆ ಹೊರಡಲು ಸಂಕಲ್ಪ ಮಾಡಿರುವ ಮುಸ್ಲಿಂ ಯುವಕ ಶಿಹಾಬ್ ಚೊಟ್ಟೂರ್.

ಕೇರಳದ ಮಲಪ್ಪುರಂ ಜಿಲ್ಲೆಯ ಕನಿಪುರದಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿರುವ ಶಿಹಾಬ್ ಚೊಟ್ಟೂರ್ (30) ಹಜ್ ಯಾತ್ರೆಗೆ ಹೊರಟಿರುವ ಯುವಕ. ಗುರುವಾರ ಮಧ್ಯಾಹ್ನ ಕೇರಳದ ಹೊಸಂಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಶಿಹಾಬ್ ಕೆಲವು ಹೊತ್ತು ವಿಶ್ರಾಂತಿ ಪಡೆದು ಬಳಿಕ ಯಾತ್ರೆ ಮುಂದುವರಿಸಿದರು.

ಪಾದಯಾತ್ರೆ ಮೂಲಕ ಹಜ್ ಯಾತ್ರೆಗೆ ಹೊರಡಬೇಕೆಂದು ಸುಮಾರು 8 ತಿಂಗಳಿಂದ ಸಿದ್ಧತೆ ಮಾಡಿಕೊಂಡ ಶಿಹಾಬ್‌ಗೆ ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಎಲ್ಲ ಅನುಮತಿ ಪಡೆದುಕೊಳ್ಳಲು ಕೇಂದ್ರ ಸಚಿವ ವಿ. ಮುರುಳೀಧರನ್ ಸಹಿತ ಹಲವರು ನೆರವಾಗಿದ್ದಾರೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ್, ಹರಿಯಾಣ, ಪಂಜಾಬ್, ವಾಘಾ ಗಡಿ ಮೂಲಕ ಪಾಕಿಸ್ತಾನ, ಇರಾಕ್, ಇರಾನ್, ಕುವೈಟ್ ಮತ್ತು ಸೌದಿ ಅರೇಬಿಯಾ ತೆರಳುವ ಅವರು, ಆಯಾ ವಿವಿಧ ದೇಶಗಳ ಗಡಿ ದಾಟಲು ವೀಸಾ ಹಾಗೂ ರಾಯಭಾರ ಕಚೇರಿಗಳಿಂದ ಅನುಮತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ.

ಈ ಯಾತ್ರೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಶಿಹಾಬ್ ‘ಒಟ್ಟು 8640ಕಿ,ಮೀ ಹಾದಿಯನ್ನು 280 ದಿನಗಳಲ್ಲಿ ತಲುಪುವುದು ನನ್ನ ಗುರಿ. ಪ್ರತಿದಿನ 25ಕಿ.ಮೀ ನಡೆಯುತ್ತಿದ್ದೇನೆ. ಒಂಭತ್ತು ತಿಂಗಳು 10 ದಿನಕ್ಕಿಂತ ಹೆಚ್ಚಿನ ದಿನದ ಪ್ರಯಾಣದ ಬಳಿಕ ಸೌದಿ ಅರೇಬಿಯಾ ತಲುಪಿ, 2023ನೇ ಸಾಲಿನ ಹಜ್‌ಗೆ ಅರ್ಜಿ ಹಾಕಿ ಹಜ್ ಪ್ರಕ್ರಿಯೆ ನಡೆಸುವುದು ನನ್ನ ಉದ್ದೇಶ. ಇದಕ್ಕೆ ನನ್ನ ಕುಟುಂಬ, ಗೆಳೆಯರ ಸಹಕಾರವಿದೆ’ ಎಂದು ಹೇಳಿದ್ದಾರೆ. ತನ್ನ ಜೊತೆ 10 ಕೆ.ಜಿ ತೂಕದ ಬ್ಯಾಗ್‌ ಒಂದಿದೆ. ಅದರಲ್ಲಿ ಮಲಗಲು ಹಾಸುವ ಬಟ್ಟೆ, ನಾಲ್ಕು ಟೀ ಶರ್ಟ್ಸ್ ಮತ್ತು ಪ್ಯಾಂಟ್‌ಗಳು, ಕೈಯಲ್ಲೊಂದು ಉದ್ದದ ಕೊಡೆ ಇದೆ. ದಾರಿ ಮಧ್ಯೆ ರಾತ್ರಿ ಮಸೀದಿಗಳಲ್ಲಿ ತಂಗುತ್ತಿದ್ದಾರೆ. ಜನರು ಅವರಿಗೆ ಅನ್ನಾಹಾರ ಕೊಟ್ಟು ಸತ್ಕರಿಸಿ ಬೀಳ್ಕೊಡುತ್ತಿದ್ದಾರೆ. ನಿನ್ನೆ ಇವರು ನಗರದ ಕೋಟೆಕಾರ್ ಬೀರಿಯ ಹನಫಿ ಮಸ್ಜಿದ್‌ನಲ್ಲೇ ರಾತ್ರಿ ತಂಗಿದರು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!