Tuesday, April 30, 2024
spot_imgspot_img
spot_imgspot_img

ವಿಟ್ಲ: ಗ್ರಾಮ ಸಭೆಯಲ್ಲಿ ಸಿಡಿದೆದ್ದ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಕ್ಲಾಸ್.! ಕಂದಾಯ ಇಲಾಖೆ, PWD ಮತ್ತು ಕಾಲೇಜಿನ ಅವ್ಯವಸ್ಥೆ ವಿರುದ್ಧ ಕಿಡಿ

- Advertisement -G L Acharya panikkar
- Advertisement -

ವಿಟ್ಲ: ಕೊಳ್ನಾಡು ಗ್ರಾಮ ಸಭೆಯು ಸಾಲೆತ್ತೂರಿನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ನೋಡಲ್ ಅಧಿಕಾರಿಯಾಗಿ ಬಂಟ್ವಾಳ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಆಗಮಿಸಿದ್ದರು.

ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಸರಕಾರಿ ಪ್ರಾಥಮಿಕ ಶಾಲೆಗೆ ಸೇರಿದ ಸರಕಾರಿ ಭೂಮಿಯನ್ನು ಸ್ಥಳೀಯ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿ ಎರಡು ವರ್ಷ ಕಳೆದಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಅತಿಕ್ರಮಣ ತೆರವು ಮಾಡುವಲ್ಲಿ ವಿಫಲರಾಗಿದ್ದಾರೆ. ಸರಕಾರಿ ಶಾಲೆಗೂ ಇಂಥಾ ಗತಿ ಬಂದರೆ ಇನ್ಯಾರಿಗೆ ದೂರು ನೀಡಬೇಕೆಂದು ಗ್ರಾಮಸ್ಥರು ಗ್ರಾಮಕರಣಿಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಗ್ರಾಮಕರಣಿರಾದ ಮನೋಹರ್ ಅವರು ಉತ್ತರಿಸುತ್ತಾ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ ನಾನು ಅಳತೆ ಕಾರ್ಯ ನಡೆಸುವಂತೆ ತಹಶೀಲ್ದಾರರಿಗೆ ವಿನಂತಿಸಿದ್ದೇನೆ. ಅತಿಕ್ರಮಣ ಮಾಡಿದ್ದಾರೆಂಬ ಖಾಸಗಿ ವ್ಯಕ್ತಿಯು ಸದ್ರಿ ಸ್ಥಳದಲ್ಲಿ ಕೃಷಿ ಮಾಡಿದ್ದು ಅದಕ್ಕಾಗಿ ಅಳತೆ ಕಾರ್ಯ ಮಾಡಿದ ಬಳಿಕ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆಂದು ಹೇಳಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಕರಣಿಕರನ್ನು ಹಿಗ್ಗಾಮುಗ್ಗಾ ಝಾಢಿಸುತ್ತಾ ಅತಿಕ್ರಮಣ ಮಾಡಿದ ವ್ಯಕ್ತಿ ಸಾಕಷ್ಟು ಹಣವಂತನಾಗಿದ್ದು ರಾಜಕೀಯ ಪ್ರಭಾವ ಹೊಂದಿದ್ದಾರೆ. ಅದಕ್ಕಾಗಿ ನೀವು ಮೃದು ನಿಲುವು ತಳೆದಿದ್ದೀರಲ್ಲವೇ.? ಎಂದು ಪ್ರಶ್ನಿಸುತ್ತಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದಾದ ಬಳಿಕ ನಾರ್ಶ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿನ ಉಪನ್ಯಾಸಕರೊಳಗಿನ ಬಣ ರಾಜಕೀಯದ ವಿಚಾರವಾಗಿ ಜನ ಆರೋಪಗಳ ಸುರಿಮಳೆಗೈದರು. ಕಾಲೇಜಿನ ಪ್ರಾಂಶುಪಾಲೆಯ ಬೇಜವಾಬ್ದಾರಿ ಬಗ್ಗೆ ಆರೋಪಿಸಿದ ಶಿಕ್ಷಣ ಪ್ರೇಮಿಗಳು, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮತ್ತು ಉಪನ್ಯಾಸಕ ವರ್ಗ ಸ್ಥಳೀಯ ಜನಪ್ರತಿನಿಧಿಗಳನ್ನು, ಸ್ಥಾಪಕ ಸದಸ್ಯರನ್ನು ಕಡೆಗಣಿಸುತ್ತಿದೆ. ಉಪನ್ಯಾಸಕರ ಬಣ ರಾಜಕೀಯದಿಂದಾಗಿ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ. ಕಾಲೇಜು ಪರಿಸರ ದೊಡ್ಡಿಯಂತಾಗಿದ್ದು ಸರಿಯಾದ ಶೌಚಾಲಯ ವ್ಯವಸ್ಥೆಯೂ ಇಲ್ಲವಾಗಿದೆ. ಅಭಿವೃದ್ಧಿ ಸಮಿತಿಯೆಂಬುದು ಕೆಲವು ವರ್ಷಗಳಿಂದ ನಿರ್ಲಿಪ್ತವಾಗಿದ್ದು ಇದಕ್ಕೆಲ್ಲ ಪ್ರಾಂಶುಪಾಲೆ ಹಾಗೂ ಉಪನ್ಯಾಸಕ ವರ್ಗದ ಬೇಜವಾಬ್ದಾರಿ ಮತ್ತು ಸೋಗಲಾಡಿತನವೇ ಕಾರಣವೆಂದು ಆರೋಪಗಳ ಸುರಿಮಳೆಗೈದರು.

ಇದಕ್ಕೆ ಪಂ.ಉಪಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟರು ಉತ್ತರಿಸುತ್ತಾ, ಕಾಲೇಜಿನ ಅವ್ಯವಸ್ಥೆ ಮತ್ತು ಪ್ರಾಂಶುಪಾಲೆ ಹಾಗೂ ಉಪನ್ಯಾಸಕರ ಮೇಲಿನ ಆರೋಪದ ಬಗ್ಗೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ ಮನವಿ ನೀಡುತ್ತೇವೆಂದು ಹೇಳಿದರಲ್ಲದೇ ಈ ಬಗ್ಗೆ ನಿರ್ಣಯವನ್ನೂ ಕೈಗೊಂಡರು. ಗ್ರಾಮ ಸಭೆಗೆ ಹಾಜರಾಗುವಂತೆ ಪ್ರಾಂಶುಪಾಲೆಗೆ ಮುಂಚಿತವಾಗಿ ತಿಳಿಸಿದ್ದರೂ ಹಾಜರಾಗಿಲ್ಲ ಎಂದು ಹೇಳಿದರು.

ಗ್ರಾಮ ಸಭೆಗೆ ಹಾಜರಾಗದ ಪ್ರಾಂಶುಪಾಲ ವಿರುದ್ಧ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಬಳಿಕ ಮೆಸ್ಕಾಂ ಲೈನ್ ಮ್ಯಾನುಗಳು ಹಾಗೂ ಇಲಾಖೆಯ ಬೇಜವಾಬ್ದಾರಿ ವಿರುದ್ಧ ಗ್ರಾಮಸ್ಥರು ಸಾಲೆತ್ತೂರು ವಲಯ ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ರಸ್ತೆಯಂಚಿನಲ್ಲಿ ಚರಂಡಿಗಳಿಲ್ಲದೇ ಮಳೆ ನೀರೆಲ್ಲಾ ರಸ್ತೆಯಲ್ಲೇ ಹರಿಯುತ್ತಾ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಲೆಹಾಕುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಇದಕ್ಕೆ ಉತ್ತರಿಸಿದ ಪಂ.ಉಪಾಧ್ಯಕ್ಷರು ಪಿಡಬ್ಯ್ಲುಡಿ ಮತ್ತು ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುವ ಬಗ್ಗೆ ಒಕ್ಕೊರಲ ನಿರ್ಣಯ ಕೈಗೊಂಡರು.

- Advertisement -

Related news

error: Content is protected !!