

ಕೋಟ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಕಾರು ಮತ್ತು ಮೀನು ಸಾಗಾಟದ ಮಿನಿ ಪಿಕಪ್, ಬೈಕ್ ನಡುವೆ ಸರಣಿ ಅಪಘಾತ ನಡೆದು ಮಿನಿ ಪಿಕಪ್ ಚಾಲಕ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ಸಾೖಬ್ರಕಟ್ಟೆ ಹೈಸ್ಕೂಲ್ ಸಮೀಪ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ನಡೆದಿದೆ.
ಸಾವನ್ನಪ್ಪಿದವರು ಮಿನಿ ಪಿಕಪ್ ಚಾಲಕ ಮಧುವನ ಅಚ್ಲಾಡಿ ನಿವಾಸಿ ಸುರೇಶ್ ಮರಕಾಲ (40) ಎಂದು ತಿಳಿದು ಬಂದಿದೆ. ಸಹಸವಾರ ರಾಜು ಮರಕಾಲ (60) ಬೈಕ್ ಸವಾರ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್ (42) ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೃತಪಟ್ಟ ಸುರೇಶ್ ಹಾಗೂ ರಾಜು ಮರಕಾಲ ಪ್ರತಿದಿನ ಮಲ್ಪೆಯಲ್ಲಿ ಮೀನು ಖರೀದಿಸಿ ಪಿಕಪ್ ನಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಎಂದಿನಂತೆ ಇಂದೂ ಕೂಡ ಮಲ್ಪೆಯಲ್ಲಿ ಮೀನು ಖರೀದಿಸಿ ಸಾಹೇಬ್ರಕಟ್ಟಗೆ ಮರಳುವಾಗ ಮಾರುತಿ ಸ್ವಿಫ್ಟ್ ಕಾರು ಅತೀ ವೇಗವಾಗಿ ಬಂದು ಬೈಕು ಹಾಗೂ ಮಿನಿ ಪಿಕಪ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಸರಣಿ ಅಪಘಾತದ ತೀವ್ರತೆಗೆ ಸುರೇಶ್ ಹಾಗೂ ರಾಜು ಮರಕಾಲ ಪಿಕಪ್ ಒಳಗಡೆ ಸಿಲುಕಿ ಹಾಕಿಕೊಂಡಿದ್ದರು. ಅವರನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು. ನಂತರ ಅಂಬ್ಯಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಮರಕಾಲ ಆಸ್ಪತ್ರೆಗೆ ಕೊಂಡೋಯ್ಯುವ ವೇಳೆಗೆ ಮೃತ ಪಟ್ಟಿದ್ದರು ಎಂದು ತಿಳಿಯಲಾಗಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.












