


ಹಾಸನ: ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ವಿಡಿಯೋ ಮಾಡಿಟ್ಟು, ಆಕೆಯನ್ನು ಹತ್ಯೆಗೈದು ಬಳಿಕ ಪತಿ ನೇಣಿಗೆ ಶರಣಾದ ಘಟನೆ ಬೇಲೂರು ತಾಲೂಕಿನ ಕೆಸಗೋಡು ಗ್ರಾಮದಲ್ಲಿ ನಡೆದಿದೆ.
ಗಗನ (38) ಪತಿಯಿಂದಲೇ ಕೊಲೆಯಾದ ಮಹಿಳೆ. ರಘು (41) ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಗಗನ ಹಳೇಬೀಡು ಹೋಬಳಿ ಸಾಣೇನಹಳ್ಳಿ ಗ್ರಾಮದವಳಾಗಿದ್ದು, ರಘು ಬಿಕ್ಕೋಡು ಹೋಬಳಿ ಕೆಸಗೋಡು ಗ್ರಾಮದವನಾಗಿದ್ದ. ಕಳೆದ 13 ವರ್ಷಗಳ ಹಿಂದೆ ಗಗನ-ರಘು ವಿವಾಹವಾಗಿದ್ದು, ದಂಪತಿಗೆ 12 ವರ್ಷದ ಹಾಗೂ 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬೇಕರಿ ಇಟ್ಟುಕೊಂಡು, ಅಲ್ಲೇ ವಾಸವಾಗಿದ್ದರು. ಶುಕ್ರವಾರ (ಜು.31) ಕಾರಿನಲ್ಲಿ ಪತ್ನಿ ಜೊತೆ ಕೆಸಗೋಡು ಗ್ರಾಮಕ್ಕೆ ಹೊರಟಿದ್ದ ರಘು, ಸಂಜೆ 6:30ಕ್ಕೆ ಗ್ರಾಮಕ್ಕೆ ಬಂದು, ನಂತರ ತನ್ನ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ ಪತ್ನಿಯನ್ನು ಕೊಂದಿರುವುದಾಗಿ ಹೇಳಿದ್ದ. ಕಾರಿನಲ್ಲೆ ಪತ್ನಿ ಕೊಲೆ ಮಾಡಿ ಶವ ಬಿಸಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಬಳಿಕ ಕಸೆಗೋಡು ಗ್ರಾಮಕ್ಕೆ ಬಂದ ರಘು ಕಾರು ನಿಲ್ಲಿಸಿ ರಸ್ತೆ ಬದಿಯ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಯಗಚಿ ನಾಲೆಗೆ ಪತ್ನಿ ಶವ ಬಿಸಾಡಿದ್ದಾನೆ ಎಂದು ಶಂಕಿಸಲಾಗಿದ್ದು, ಪೋಲಿಸರು ಗಗನ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.








