Saturday, November 21, 2026
spot_imgspot_img
spot_imgspot_img

ಕೋರ್ಟ್‌ಗೆ ಕರೆತಂದಿದ್ದ ಕೊಲೆ ಆರೋಪಿಗೆ ಪ್ರೇಯಸಿ ಜೊತೆ ಲಾಡ್ಜ್‌ನಲ್ಲಿರಲು ವ್ಯವಸ್ಥೆ ಮಾಡಿದ ಬಳ್ಳಾರಿ ಪೊಲೀಸರು; ಕರ್ತವ್ಯ ಲೋಪವೆಸಗಿದ ನಾಲ್ವರು ಪೊಲೀಸರ ಅಮಾನತು

- Advertisement -
- Advertisement -

ನ್ಯಾಯಾಲಯಕ್ಕೆ ಕರೆತಂದಿದ್ದ ಕೊಲೆ ಆರೋಪಿಯೋರ್ವನಿಗೆ ಲಾಡ್ಜ್‌ವೊಂದರಲ್ಲಿ ಪೊಲೀಸರೇ ಪ್ರೇಯಸಿ ಜೊತೆ ಖಾಸಗಿ ಸಮಯ ಕಳೆಯಲು ವ್ಯವಸ್ಥೆ ಮಾಡಿಕೊಟ್ಟಿರುವ ಆಘಾತಕಾರಿ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.

ಫ್ರೂಟ್ ಇರ್ಫಾನ್ ಎಂಬಾತನ ಕೊಲೆ ಪ್ರಕರಣದ ಆರೋಪಿ ಬಚ್ಚಾ ಖಾನ್‌ನನ್ನು ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿತ್ತು. ವಿಚಾರಣೆಗಾಗಿ ಆತನನ್ನು ಧಾರವಾಡದ ನ್ಯಾಯಾಲಯಕ್ಕೆ ಬಳ್ಳಾರಿಯ ಪೊಲೀಸರು ಶನಿವಾರ ಕರೆತಂದ ವೇಳೆ ಸತ್ತೂರು ಬಳಿಯ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ.

ಆರೋಪಿಯು ಸತ್ತೂರಿನ ಲಾಡ್ಜ್‌ನಲ್ಲಿ ಯುವತಿ ಜೊತೆಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್‌ ಮತ್ತು ಇತರ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು ಎಂದು ತಿಳಿದುಬಂದಿದೆ.

‘ಬಚ್ಚಾ ಖಾನ್ ಬರುವ ಮೊದಲೇ ಯುವತಿ ಲಾಡ್ಜ್ ಕೋಣೆಯೊಳಗಿದ್ದಳು. ಪೊಲೀಸರು ಆತನನ್ನು ಅಲ್ಲಿಗೆ ಕರೆತಂದು ಬಿಟ್ಟರು. ಅಲ್ಲದೇ, ಪೊಲೀಸರು ಅಲ್ಲಿಯೇ ಕಾಯುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ವಿದ್ಯಾಗಿರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪ್ರತಿ ಬಾರಿ ವಿಚಾರಣೆಗೆ ಬರುವಾಗ ಈತ ನಗರದ ಸುತ್ತಮುತ್ತಲಿನ ಲಾಡ್ಜ್‌ಗಳನ್ನು ಮೊದಲೇ ಕಾಯ್ದಿರಿಸಿ, ಖಾಸಗಿ ಸಮಯ ಕಳೆಯುತ್ತಿದ್ದ ಎಂಬ ಮಾಹಿತಿಯನ್ನೂ ಧಾರವಾಡ ಪೊಲೀಸರು ಕಲೆ ಹಾಕಿದ್ದಾರೆ.

ಸದ್ಯ ಆರೋಪಿಗೆ ಪ್ರೇಯಸಿ ಜೊತೆ ಅನುಮತಿ ಕೊಟ್ಟ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಕರ್ತವ್ಯ ಲೋಪವೆಸಗಿದ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಬಳ್ಳಾರಿಯ ಓರ್ವ ಹೆಡ್ ಕಾನ್​ಸ್ಟೇಬಲ್, ಮೂವರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬಳ್ಳಾರಿ ಎಸ್ ಪಿ ಸೈದುಲು ಅದಾವತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಬಳ್ಳಾರಿಯ ಹೆಡ್ ಕಾನ್ಸ್​ಸ್ಟೇಬಲ್ ಯೋಗೇಶಾಚಾರ್, ಪೇದೆಗಳಾದ ಎಸ್.ಶಶಿಕುಮಾರ್, ರವಿಕುಮಾರ್ ಹಾಗೂ ಸಂಗಮೇಶ್ ಎಂಬವರನ್ನು ಸಸ್ಪೆಂಡ್ ಮಾಡಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಚ್ಚಾಖಾನ್‌ಗೆ ಸಹಾಯ ಮಾಡಿದ್ದ ಮೈನೂದ್ದಿನ್ ಪಟೇಲ್, ಮೊಹ್ಮದ್ ಯೂನೂಸ್ ಹಾಗೂ ಫಝಲ್ ಕುಂದಗೋಳ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ಬಚ್ಚಾ ಖಾನ್ ಹಲವಾರು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಬೆಂಗಳೂರಿನ ಬಿಲ್ಡರ್ ಸುಬ್ಬಾರೆಡ್ಡಿ ಕೊಲೆ ಕೇಸಿನಲ್ಲಿ ಎರಡನೇ ಆರೋಪಿಯಾಗಿದ್ದ ಬಚ್ಚಾಖಾನ್ ಅಪರಾಧಿ ಅಂತಾ ಸಾಬೀತಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಈ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

- Advertisement -

Related news

error: Content is protected !!