Saturday, November 21, 2026
spot_imgspot_img
spot_imgspot_img

ಮನೆಯಲ್ಲಿ ತಯಾರಿಸಿದ ನೂಡಲ್ಸ್ ಸೇವಿಸಿ ಏಳು ವರ್ಷದ ಬಾಲಕಿ ಸಾವು

- Advertisement -
- Advertisement -

ಜೈಪುರ: ಮನೆಯಲ್ಲಿ ತಯಾರಿಸಿದ ನೂಡಲ್ಸ್ ಸೇವಿಸಿ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಆಕೆಯ ಅಕ್ಕ ಅಸ್ವಸ್ಥಳಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಪ್ರಾಥಮಿಕ ತನಿಖೆಯಲ್ಲಿ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ನವೆಂಬರ್ 19ರಂದು ಈ ಘಟನೆ ನಡೆದಿದ್ದು, ಪಿಹು ಕುಮಾವತ್ ಮತ್ತು ದಿವ್ಯಾಂಶಿ ಎಂಬ ಇಬ್ಬರು ಸಹೋದರಿಯರು ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾವೇ ನೂಡಲ್ಸ್ ತಯಾರಿಸಿಕೊಂಡು ಸೇವಿಸಿದ್ದಾರೆ. ಬಳಿಕ ಇಬ್ಬರೂ ನಿದ್ರೆಗೆ ಜಾರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ ಸುಮಾರು 3 ಗಂಟೆಗೆ ತಾಯಿ ಮನೆಗೆ ಬಂದಾಗ, ಅಕ್ಕ ದಿವ್ಯಾಂಶಿ ಎಚ್ಚರಗೊಂಡು ಅಸ್ವಸ್ಥಳಾಗಿದ್ದಾಳೆ. ಆದರೆ, ತಂಗಿ ಪಿಹು ಮಾತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಕೂಡಲೇ ಕುಟುಂಬಸ್ಥರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಪಿಹು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮತ್ತೊಂದೆಡೆ, ಅಸ್ವಸ್ಥಗೊಂಡಿದ್ದ ದಿವ್ಯಾಂಶಿಗೆ ಚಿಕಿತ್ಸೆ ನೀಡಲಾಗಿದ್ದು, ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷವಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಬಾಲಕಿಯ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ. ಈ ಸಂಬಂಧ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕರಧನಿ ಪೊಲೀಸರು ನೂಡಲ್ಸ್ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ.

ಇನ್ನು ಮೃತ ಬಾಲಕಿಯ ಸಹೋದರ ಗೋವಿಂದ್ ಅನಾರೋಗ್ಯದ ಕಾರಣ ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!