Thursday, May 2, 2024
spot_imgspot_img
spot_imgspot_img

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ; ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಈಶ್ವರಪ್ಪ

- Advertisement -G L Acharya panikkar
- Advertisement -

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್‌ ಈಶ್ವರಪ್ಪ ದೀಢೀರ್‌ ಪತ್ರಿಕಾಗೋಷ್ಠಿ ಕರೆದು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ಗುರುವಾರ ಸಂಜೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ತಮ್ಮ ರಾಜೀನಾಮೆಯನ್ನು ಘೊಷಿಸಿದ ಅವರು, “ಭಾರತೀಯ ಜನತಾ ಪಕ್ಷದ ಬೊಮ್ಮಾಯಿ ಅವರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ ಸಚಿವನಾಗಿ ಇಂದಿನವರೆಗೆ ಕೆಲಸ ಮಾಡಿದ್ದೇನೆ. ನಾಳೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರವನ್ನು ನೀಡುತ್ತೇನೆ” ಎಂದು ಹೇಳಿದರು.

ಮುಖ್ಯಮಂತ್ರಿಗಳಿಗೆ ಹಾಗೂ ಹೈಕಮಾಂಡ್‌ ನಾಯಕರಿಗೆ ಮುಜುಗರ ತರುವುದಿಲ್ಲ. ನಾಳೆ ಸಂಜೆಯೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುತ್ತೇನೆ. ನಾನು ಸಚಿವನಾಗಿ ಕೆಲಸ ಮಾಡಲು ಸಹಕರಿಸಿದ ಪಕ್ಷದ ಮುಖಂಡರಿಗೆ ಹಾಗೂ ಸಂಪುಟದ ಸಹೋದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ” ತಿಳಿಸಿದರು.

“ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ನನ್ನದು ಶೇ.1ರಷ್ಟು ತಪ್ಪಿಲ್ಲ. ಆ ಬಗ್ಗೆ ನನಗೆ ವಿಶ್ವಾಸವಿದೆ. ನಾನು ತಪ್ಪು ಮಾಡಿದ್ದರೆ ದೇವರು ನನಗೆ ಶಿಕ್ಷೆ ನೀಡಲಿ, ನಾನು ಅನುಭವಿಸಲು ಸಿದ್ಧ” ಎಂದು ಹೇಳಿದರು.

“ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದೇವೆ. ʼಜಲಧಾರೆʼ, ʼನರೇಗಾʼ, ʼಮನೆ-ಮನೆಗೆ ಗಂಗೆʼ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೀವಿ. ನರೇಗಾದಲ್ಲೂ ಸಾಕಷ್ಟು ಸಾಧನೆ ಮಾಡಿದ್ದೇವೆ. ನಾನು ಈ ಇಲಾಖೆ ಸಚಿವನಾಗಿ ಕೆಲಸ ಮಾಡಿದ್ದಕ್ಕೆ ಸಂತಸವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉತ್ತಮ ಕೆಲಸ ಮಾಡಲು ಬೆಂಬಲಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

“ನನ್ನ ರಾಜೀನಾಮೆಗೆ ಪಕ್ಷದ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ನಿನ್ನೆಯೇ ನಾನು ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ಪಕ್ಷದ ಮುಖಂಡರು ತಾಳ್ಮೆ ವಹಿಸುವಂತೆ ಸೂಚಿಸಿದ್ದರು. ಈ ಪ್ರಕರಣದಲ್ಲಿ ನಾನು ಬಲಿಪಶುವಾಗುವ ಪ್ರಶ್ನೆಯೇ ಇಲ್ಲ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ. ತನಿಖೆ ನಂತರ ನಾನು ಆರೋಪಮುಕ್ತನಾಗುವ ವಿಶ್ವಾಸವಿದೆ” ಎಂದು ಪತ್ರಿಕಾಗೋಷ್ಠಿಯಿಂದ ಹೊರ ನಡೆದರು.

vtv vitla
vtv vitla
- Advertisement -

Related news

error: Content is protected !!