Saturday, April 20, 2024
spot_imgspot_img
spot_imgspot_img

ಚೆಂಬೆಳಕಿನ‌ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ ವಿಧಿವಶ

- Advertisement -G L Acharya panikkar
- Advertisement -

ಧಾರವಾಡ: ಚೆಂಬೆಳಕಿನ‌ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ(93) ಅಸ್ತಂಗತರಾಗಿದ್ದಾರೆ. ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ ಧಾರವಾಡದ ಎಸ್​ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಣವಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಧಾರವಾಡದ ಎಸ್​ಡಿಎಂ ಆಸ್ಪತ್ರೆ ಈ ಹಿಂದೆ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಿತ್ತು. ಆ ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಕಣವಿಯವರ ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಎದೆ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿತ್ತು. ಶ್ವಾಸಕೋಶ ಉಸಿರಾಟದ ಶಕ್ತಿ ಕಳೆದುಕೊಂಡಿತ್ತು.

ಅಕ್ಯೂಟ್​ ರೆಸ್ಪಿರೇಟರಿ ಡಿಸ್ಟ್ರೆಸ್​ ಸಿಂಡ್ರೋಮ್​ನಿಂದ (ARDS) ಚೆನ್ನವೀರ ಕಣವಿ ಬಳಲುತ್ತಿದ್ದರು. ಸುಮಾರು ಒಂದು ತಿಂಗಳಿನಿಂದ ಎಸ್​ಡಿಎಂ ಆಸ್ಪತ್ರೆಯಲ್ಲಿ ಕಣವಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಮೊದಲು, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ, ಮತ್ತೆ ಆರೋಗ್ಯ ಕ್ಷೀಣಿಸಿತ್ತು. ಕಣವಿಯವರಿಗೆ ಕೊರೊನಾ ಸೋಂಕು ಕೂಡ ದೃಢಪಟ್ಟಿತ್ತು.

ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದು ಖ್ಯಾತರಾಗಿದ್ದ ಕಣವಿ ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ಧಾರವಾಡದಲ್ಲೇ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿ ಕಣವಿ 1952ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. 1956ರಲ್ಲಿ ಅದೇ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದರು.

ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಕಣವಿಯವರ ಕವನಗಳನ್ನು ನೋಡಿ ಡಿವಿಜಿ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದರು. ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವುವು ಸೂರ್ಯನ ಕಡೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಇವು ಕಣವಿಯವರ ಕೆಲವೊಂದು ಜನಪ್ರಿಯ ಕಾವ್ಯಗಳಾಗಿವೆ.

ಕವನ ಸಂಕಲನ:
ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತಿಕದ ಮೋಡ, ಜೀನಿಯಾ, ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ, ಸೇರಿ 15ಕ್ಕೂ ಹೆಚ್ಚು ಕವನ ಸಂಕಲನಗಳ ರಚನೆ.

ವಿಮರ್ಶಾ ಕೃತಿಗಳು
ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ ವಿಮರ್ಶಾತ್ಮಕ ಕೃತಿಗಳು

ಮಕ್ಕಳ ಕೃತಿ
ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಕವನ ಸಂಕಲನ

ಪ್ರಶಸ್ತಿ ಮತ್ತು ಪುರಸ್ಕಾರಗಳು

  • 1981ರಲ್ಲಿ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1996ರಲ್ಲಿ ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ
  • 2008ರ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ
  • ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿವೆ.
- Advertisement -

Related news

error: Content is protected !!