Thursday, July 23, 2026
spot_imgspot_img
spot_imgspot_img

ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತ ಪ್ರಕರಣ– ಆರೋಪಿ ಬಂಧನ

- Advertisement -
- Advertisement -

ಬೆಂಗಳೂರು: ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಪ್ರಮುಖ ಆರೋಪಿ ಪುಣ್ಯೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿ ಒಂದು ಬಾಕ್ಸ್‌ನಲ್ಲಿ ಮೊಟ್ಟೆಗಳನ್ನು ತಂದು ಘಟನೆ ನಡೆಸಿರುವುದು ಬೆಳಕಿಗೆ ಬಂದಿದ್ದು, ಈ ಕೃತ್ಯದ ಹಿಂದೆ ಇನ್ನೂ ಕೆಲವರು ಇದ್ದಾರೆಯೇ ಎಂಬ ಅನುಮಾನವೂ ಪೊಲೀಸರಿಗೆ ಮೂಡಿದ್ದು, ಆ ದಿಕ್ಕಿನಲ್ಲೂ ತನಿಖೆ ಮುಂದುವರಿದಿದೆ.

ಮೊಟ್ಟೆಗಳನ್ನು ಎಲ್ಲಿಂದ ತಂದಿದ್ದ, ಘಟನೆ ಪೂರ್ವನಿಯೋಜಿತವಾಗಿತ್ತೇ, ಮೊಟ್ಟೆ ಎಸೆಯಲು ಯಾರಾದರೂ ಸೂಚನೆ ನೀಡಿದ್ದರೇ ಹಾಗೂ ಪುಣ್ಯೇಶ್ ಜೊತೆಗೆ ಇದ್ದವರು ಯಾರು ಎಂಬ ಬಗ್ಗೆ ಪೊಲೀಸರು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಪ್ರಕರಣ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಿನ್ನೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು.

ಈ ವೇಳೆ ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಲೊಕೇಶನ್‌ ಕಳುಹಿಸಲಾಗಿತ್ತು. ಕ್ವೀನ್ಸ್‌ ರೋಡ್‌ ಬಳಿ ಕಾರಿನಿಂದ ಇಳಿದ ತಕ್ಷಣ ಅಲ್ಲಿದ್ದ ಕೆಲ ಕಾಂಗ್ರೆಸ್‌ ಕಾರ್ಯಕರ್ತರು ಅವರ ಮೇಲೆ ಮೊಟ್ಟೆ ಎಸೆದು, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಶಾಸಕರನ್ನು ಸುರಕ್ಷಿತವಾಗಿ ಸ್ಥಳದಿಂದ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!