Wednesday, May 22, 2024
spot_imgspot_img
spot_imgspot_img

ಜಮ್ಮು ಕಾಶ್ಮೀರ ಸಮಸ್ಯೆಗೆ ಇಸ್ರೇಲ್​ ಮಾದರಿ ಮದ್ದು: ಚುನಾವಣೆ ಪ್ರಯತ್ನವೇ ಪರಿಹಾರ

- Advertisement -G L Acharya panikkar
- Advertisement -

ಜಮ್ಮು ಕಾಶ್ಮೀರದ ಭಯೋತ್ಪಾದನೆ, ಪ್ರತೇಕತಾವಾದ, ಕಾನೂನು ಸುವ್ಯವಸ್ಥೆಯ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗೆ ಇಸ್ರೇಲ್‌ನ ಗಾಜಾಪಟ್ಟಿಯ ಪಶ್ಚಿಮ ದಂಡೆ ಮಾದರಿಯಲ್ಲಿ ಪರಿಹಾರ ಕಂಡುಕೊಳ್ಳುವ ಹಾದಿ ಈಗ ತೆರೆದುಕೊಂಡಿದೆ. ಜಮ್ಮು ಕಾಶ್ಮೀರದ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, ಈ ವೇಳೆ ಸುಮಾರು 25 ಲಕ್ಷ ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆ ಆಗುವರು. ಇದು ಈಗ ಜಮ್ಮು ಕಾಶ್ಮೀರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇಸ್ರೇಲ್‌ನ ಗಾಜಾ ಪಟ್ಟಿಯ ಪಶ್ಚಿಮ ದಂಡೆಯಲ್ಲಿ ಯಶಸ್ವಿಯಾಗಿದ್ದ ಮಾದರಿಯೊಂದನ್ನು ಸದ್ದಿಲ್ಲದೇ, ಜಮ್ಮು ಕಾಶ್ಮೀರದಲ್ಲಿ ಜಾರಿಗೊಳಿಸಲಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಜಾರಿಯಾಗುತ್ತಿರುವ ಇಸ್ರೇಲ್ ಮಾದರಿಯ ಸಲಹೆಯನ್ನ ಈ ಹಿಂದೆಯೇ ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತಾನ್ಯುಹು ಭಾರತದ ಪ್ರಧಾನಿ ಮೋದಿಗೆ ನೀಡಿದ್ದರು ಎನ್ನುವುದು ವಿಶೇಷ.

ಇಸ್ರೇಲ್‌ನ ಪಶ್ಚಿಮ ದಂಡೆಯಲ್ಲಿ ಪ್ಯಾಲಸ್ತೀನ್ ಅರಬ್ಬರು ವಾಸ ಮಾಡುತ್ತಿದ್ದರು. ಅರಬ್ಬರಿಗೂ ಇಸ್ರೇಲ್ ಸರ್ಕಾರಕ್ಕೂ ಪಶ್ಚಿಮ ಬ್ಯಾಂಕ್ ಜಾಗದ ಮೇಲೆ ಹಿಡಿತ ಸಾಧಿಸಲು ಕಿತ್ತಾಟ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಇಸ್ರೇಲ್‌ ಸರ್ಕಾರ ಚಾಣಾಕ್ಷ ನಡೆ ಮುಂದಿಟ್ಟಿತು. ವಿವಾದಿತ ಪಶ್ಚಿಮ ಬ್ಯಾಂಕ್​ನಲ್ಲಿ ಇಸ್ರೇಲ್‌ ಬೆಂಬಲಿಸುವ ಯಹೂದಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದರೆ ಸ್ಥಳೀಯರ ಬೆಂಬಲದೊಂದಿಗೆ ಆ ಪ್ರದೇಶದ ಮೇಲೆ ಹಿಡಿತ ಸಾಧಿಸುವುದು ಸುಲಭವಾಗಲಿದೆ ಎಂದು ಯೋಜಿಸಿತು. ಈ ಯೋಜನೆಯ ಪ್ರಕಾರ ಪಶ್ಚಿಮ ದಂಡೆಗೆ ಇಸ್ರೇಲ್ ಸರ್ಕಾರವೇ ತನ್ನ ದೇಶದ ಜನರನ್ನು ಕಳಿಸಿತು.

ಪಶ್ಚಿಮ ದಂಡೆಗೆ ಹೋದ ಯಹೂದಿಗಳು ತಮ್ಮ ವಾಸಕ್ಕಾಗಿ ಕಾಲೊನಿ ನಿರ್ಮಿಸಿಕೊಂಡರು. ಈ ಮೂಲಕ ಇಸ್ರೇಲ್ ಬೆಂಬಲಿಸುವ ಜನರ ಸಂಖ್ಯೆ ಹೆಚ್ಚಾಗುವಂತೆ ಮಾಡಿದರು. ಸಂಖ್ಯಾಬಲದಲ್ಲಿ ಪ್ಯಾಲಸ್ತೀನ್ ಅರಬ್ಬರಿಗೆ ಸರಿಸಮಾನವಾಗಿ ಇಸ್ರೇಲ್ ಜನರೂ ಇರುವಂತೆ ನೋಡಿಕೊಂಡರು. ಪಶ್ಚಿಮ ಬ್ಯಾಂಕ್‌ನಲ್ಲಿ ಇಸ್ರೇಲ್‌ನ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ, ಇಸ್ರೇಲ್‌ ಸರ್ಕಾರದ ಪರವಾಗಿರುತ್ತಾರೆ. ಇಸ್ರೇಲ್‌ ಸೇನೆಯನ್ನು ಬೆಂಬಲಿಸುತ್ತಾರೆ. ಇದರಿಂದ ಇಸ್ರೇಲ್‌ ಸರ್ಕಾರ ಹಾಗೂ ಇಸ್ರೇಲ್ ಸೇನೆಗೆ ಆ ವಿವಾದಿತ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಅನುಕೂಲವಾಯಿತು.

ಭಾರತದಲ್ಲೂ ಕಾಶ್ಮೀರದ್ದು ಇದೇ ಮಾದರಿಯ ಸಮಸ್ಯೆ. ಈ ಸಮಸ್ಯೆಗೂ ಇಸ್ರೇಲ್‌ ಹಾಗೂ ಪ್ಯಾಲೇಸ್ತೀನ್ ನಡುವಿನ ಪಶ್ಚಿಮ ಬ್ಯಾಂಕ್‌ ಮಾದರಿಯ ಪರಿಹಾರವನ್ನು ಕಂಡಕೊಳ್ಳಬಹುದೆಂದು 2016-17ರ ಅವಧಿಯಲ್ಲೇ ಇಸ್ರೇಲ್‌ ಪ್ರಧಾನಿಯಾಗಿದ್ದ ಬೆಂಜಮಿನ್ ನೇತಾನ್ಯುಹು ಅವರೇ ಖುದ್ದಾಗಿ ಭಾರತದ ಪ್ರಧಾನಿ ಮೋದಿಗೆ ಸಲಹೆ ನೀಡಿದ್ದರು. ಆ ಸಲಹೆ ಏನೆಂದರೇ, ಭಾರತದ ಕಾಶ್ಮೀರದಲ್ಲಿ ಭಯೋತ್ಪಾದನೆ, ಪ್ರತೇಕತಾವಾದದ ಸಮಸ್ಯೆ ಇದೆ. ಕಾಶ್ಮೀರಕ್ಕೆ ಭಾರತದ ಉಳಿದ ಭಾಗದ ಜನರು ಹೋಗಿ ವಾಸಿಸುವಂತೆ ಮಾಡಬೇಕು. ಆಗ ಅಲ್ಲಿರುವ ಮುಸ್ಲಿಂ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತದೆ. ಕಾಶ್ಮೀರಕ್ಕೆ ಹೋದ ಉಳಿದ ಭಾಗದ ಜನರು ಭಾರತ ಸರ್ಕಾರ, ಭಾರತೀಯ ಸೇನೆಯನ್ನು ಬೆಂಬಲಿಸುವಂತೆ ಇರಬೇಕು. ಇದರಿಂದ ಭಯೋತ್ಪಾದನೆ, ಪ್ರತೇಕತಾವಾದ ಬೆಂಬಲಿಸುವ ಜನರ ಸಂಖ್ಯೆ ಕಡಿಮೆಯಾಗುತ್ತೆ ಎಂದು ಹೇಳಿದ್ದರು.

ಆಗ ಜಮ್ಮು ಕಾಶ್ಮೀರದಲ್ಲಿ ಈ ಸಲಹೆಯನ್ನು ಜಾರಿಗೊಳಿಸಲು ಸಾಧ್ಯವಿರಲಿಲ್ಲ. ಏಕೆಂದರೇ, ಆಗ ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಇತ್ತು. ಈ ವಿಶೇಷ ಸ್ಥಾನಮಾನದಿಂದಾಗಿ ಜಮ್ಮು ಕಾಶ್ಮೀರದಲ್ಲಿ ಹೊರಗಿನವರು ಹೋಗಿ ವಾಸ ಮಾಡಿ ಯಾವುದೇ ಹಕ್ಕು, ಸೌಲಭ್ಯ ಪಡೆಯಲು ಸಾಧ್ಯವೇ ಇರಲಿಲ್ಲ. ಸ್ಥಳೀಯರಲ್ಲದವರಿಗೆ ಜಮ್ಮು ಕಾಶ್ಮೀರದಲ್ಲಿ ಮತದಾನದ ಹಕ್ಕು ಇರಲಿಲ್ಲ. ಸ್ಥಳೀಯರಲ್ಲದವರು ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಅವಕಾಶ ಇರಲಿಲ್ಲ. ಸರ್ಕಾರಿ ಉದ್ಯೋಗವಂತೂ ಮೊದಲೇ ಸಿಗುತ್ತಿರಲಿಲ್ಲ. ಹೊರಗಿನವರು ಕಾಶ್ಮೀರಕ್ಕೆ ಹೋಗಿ ಕೈಗಾರಿಕೆ ಆರಂಭಿಸುವುದು, ಬ್ಯುಸಿನೆಸ್ ನಡೆಸುವುದು ಅಷ್ಟೂ ಸುಲಭವೂ ಆಗಿರಲಿಲ್ಲ. ಈ ಎಲ್ಲವನ್ನೂ ಇಸ್ರೇಲ್‌ನ ಹಿಂದಿನ ಪ್ರಧಾನಿ ಬೆಂಜಮಿನ್ ನೇತಾನ್ಯುಹು ಅವರಿಗೆ ಭಾರತದ ಪ್ರಧಾನಿ ಮೋದಿ ವಿವರಿಸಿದ್ದರು.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನೇ ರದ್ದುಪಡಿಸಿದರೆ ಮಾತ್ರ ಈ ಸಲಹೆಯನ್ನು ಜಾರಿಗೊಳಿಸಬಹುದು ಎಂಬುದು ಪ್ರಧಾನಿ ಮೋದಿ ಅವರಿಗೂ ಗೊತ್ತಿತ್ತು. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ವಿಷಯವೂ ದಶಕಗಳಿಂದ ಬಿಜೆಪಿಯ ಅಜೆಂಡಾದಲ್ಲಿದ್ದ ವಿಷಯವೇ ಆಗಿತ್ತು. ಹೀಗಾಗಿ ನರೇಂದ್ರ ಮೋದಿ 2ನೇ ಬಾರಿ ಪ್ರಧಾನಿಯಾದ ಬಳಿಕ 2019ರ ಆಗಸ್ಟ್ 5 ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದರು. ಆದಾದ ಬಳಿಕ ಈಗ ಜಮ್ಮು ಕಾಶ್ಮೀರದಲ್ಲಿ ಸದ್ದಿಲ್ಲದೇ, ಇಸ್ರೇಲ್‌ ಪಶ್ಚಿಮ ಬ್ಯಾಂಕ್‌ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಇದಕ್ಕೆ ಈಗ ಕಾಶ್ಮೀರದ ನ್ಯಾಷನಲ್ ಕಾನ್ಪರೆನ್ಸ್ ಹಾಗೂ ಪಿಡಿಪಿ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಜಮ್ಮು ಕಾಶ್ಮೀರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ 76.7 ಲಕ್ಷ ಮತದಾರರಿದ್ದರು. ಈಗ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಕನಿಷ್ಠ 25 ಲಕ್ಷ ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆ ಆಗುವರು. 25 ಲಕ್ಷ ಹೊಸ ಮತದಾರರು ಸೇರ್ಪಡೆಯಾದರೆ, ಶೇ 33ರಷ್ಟು ಹೊಸ ಮತದಾರರು ಸೇರ್ಪಡೆ ಆದಂತೆ ಆಗಲಿದೆ. ಜಮ್ಮು ಕಾಶ್ಮೀರದಲ್ಲಿ ಈ ಹಿಂದಿನಿಂದಲೂ ವಾಸ ಇದ್ದರೂ, ಮತದಾನದ ಹಕ್ಕು ಇಲ್ಲದೇ ಇದ್ದವರಿಗೂ ಈಗ ಮತದಾನದ ಹಕ್ಕು ಸಿಗಲಿದೆ. ದೇಶದ ಉಳಿದ ಭಾಗಗಗಳಿಂದ ಜಮ್ಮು ಕಾಶ್ಮೀರಕ್ಕೆ ಬಂದು ಸಾಮಾನ್ಯ ನಾಗರಿಕರಂತೆ ಬದುಕುತ್ತಿರುವವರಿಗೂ ಜಮ್ಮು ಕಾಶ್ಮೀರದಲ್ಲಿ ಮತದಾನದ ಹಕ್ಕು ಸಿಗಲಿದೆ.

ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ಡೊಮಿಸಿಲ್ ಸರ್ಟಿಫಿಕೇಟ್ ಅಂದರೆ, ಸ್ಥಳೀಯ ನಿವಾಸಿ ಪ್ರಮಾಣಪತ್ರ ಹೊಂದಿದವರು ಮಾತ್ರವೇ ಜಮ್ಮು ಕಾಶ್ಮೀರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇತ್ತು. ಜೊತೆಗೆ ಡೊಮಿಸಿಲ್ ಸರ್ಟಿಫಿಕೇಟ್ ಹೊಂದಿದವರಿಗೆ ಮಾತ್ರವೇ ಜಮ್ಮು ಕಾಶ್ಮೀರದಲ್ಲಿ ಭೂಮಿ ಖರೀದಿಗೆ ಅವಕಾಶ ಇತ್ತು. ಆದರೇ, ಈಗ ಈ ಯಾವುದೇ ನಿರ್ಬಂಧಗಳಿಲ್ಲ. ಕಾನೂನುಬದ್ದವಾಗಿ ಜಮ್ಮು ಕಾಶ್ಮೀರದಲ್ಲಿ ಉದ್ಯೋಗ, ಬ್ಯುಸಿನೆಸ್, ಶಿಕ್ಷಣದ ಉದ್ದೇಶಕ್ಕಾಗಿ ವಾಸ ಮಾಡುತ್ತಿರುವವರನ್ನೆಲ್ಲಾ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಜಮ್ಮು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಹಿರದೇಶ್ ಕುಮಾರ್ ಹೇಳಿದ್ದಾರೆ.

ಬೇರೆ ರಾಜ್ಯದಿಂದ ಬಂದು ಜಮ್ಮು ಕಾಶ್ಮೀರದಲ್ಲಿ ವಾಸ ಮಾಡುತ್ತಿರುವವರ ಹೆಸರನ್ನು ಮತದಾರರ ಪಟ್ಚಿಗೆ ಸೇರ್ಪಡೆ ಮಾಡಲಾಗುವುದು. ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದರಿಂದಾಗಿ ಈಗ ಬೇರೆ ರಾಜ್ಯದಿಂದ ಬಂದವರಿಗೂ ಕಾಶ್ಮೀರದಲ್ಲಿ ಮತದಾನದ ಹಕ್ಕು ನೀಡಲಾಗುತ್ತಿದೆ. ಇದರಿಂದಾಗಿ ಮತದಾರರ ಪಟ್ಟಿಗೆ 20ರಿಂದ 25 ಲಕ್ಷ ಹೊಸ ಮತದಾರರು ಸೇರ್ಪಡೆ ಆಗುವರು ಎಂದು ಅವರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ ವಿಶೇಷ ಸ್ಥಾನಮಾನ ರದ್ದಾಗುವ ಮುನ್ನ ಪಶ್ಚಿಮ ಪಾಕ್ ನಿರಾಶ್ರಿತರು, ವಾಲ್ಮೀಕಿ ಸಮುದಾಯ ಹಾಗೂ ಗೂರ್ಖಾ ಸಮುದಾಯದ ಜನರಿಗೆ ಮತದಾನದ ಹಕ್ಕಿರಲಿಲ್ಲ. ಆದರೆ, ಈಗ ಪಶ್ಚಿಮ ಪಾಕ್ ನಿರಾಶ್ರಿತರು, ವಾಲ್ಮೀಕಿ ಸಮುದಾಯ, ಗೂರ್ಖಾ ಸಮುದಾಯಕ್ಕೂ ಮತದಾನದ ಹಕ್ಕು ಸಿಗಲಿದೆ. ಸರ್ಕಾರಿ ಸೇವೆಯಲ್ಲಿರುವವರು ಮತದಾನದ ಹಕ್ಕು ಪಡೆಯುವರು. ಕಾಶ್ಮೀರಿ ಪಂಡಿತರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

ಈ ಬೆಳವಣಿಗೆಯು ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳ ಆಕ್ಷೇಪಕ್ಕೆ ಕಾರಣವಾಗಿದೆ. ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಓಮರ್ ಅಬ್ದುಲ್ಲಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಜೆಪಿಯು ಜಮ್ಮು ಕಾಶ್ಮೀರದ ನಿಜವಾದ ಮತದಾರರ ಬೆಂಬಲದ ಬಗ್ಗೆ ಅಭದ್ರತೆ ಹೊಂದಿದೆ, ಹೀಗಾಗಿ ಸೀಟುಗಳನ್ನು ಗೆಲ್ಲಲು ತಾತ್ಕಾಲಿಕವಾಗಿ ಮತದಾರರನ್ನು ಅಮದು ಮಾಡಿಕೊಳ್ಳುತ್ತಿದೆ. ಈ ಯಾವುದರಿಂದಲೂ ಅನುಕೂಲವಾಗುವುದಿಲ್ಲ ಎಂದು ಹೇಳಿದ್ದಾರೆ. ಇತರ ರಾಜ್ಯದವರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುತ್ತಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಬೇರೆ ರಾಜ್ಯದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ಚುನಾವಣೆ ಮುಂದೂಡುವ ಮೂಲಕ ಬಿಜೆಪಿ ಪರ ವಾಲುವಂತೆ ಮಾಡಲಾಗುತ್ತಿದೆ. ಈಗ ಸ್ಥಳೀಯರಲ್ಲದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲಾಗುತ್ತಿದೆ. ಸ್ಥಳೀಯರನ್ನು ದುರ್ಬಲರನ್ನಾಗಿಸಿ ಆಡಳಿತ ಮುಂದುವರಿಸುವುದು ನಿಜವಾದ ಗುರಿಯಾಗಿದೆ ಎಂದು ಮೆಹಬೂಬ್ ಮುಫ್ತಿ ಟ್ವೀಟ್ ಮಾಡಿದ್ದಾರೆ.

ಈ ಇಬ್ಬರ ಹೇಳಿಕೆಗಳನ್ನು ಗಮನಿಸಿದರೆ, ಇಸ್ರೇಲ್​ನ ಪಶ್ಚಿಮ ದಂಡೆಯಲ್ಲಿ ವಿವಾದ ಪರಿಹರಿಸಿಕೊಳ್ಳಲು ಅಲ್ಲಿನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಂಡುಕೊಂಡ ಪರಿಹಾರವನ್ನೇ ಕಾಶ್ಮೀರದಲ್ಲೂ ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತದೆ. ಜಮ್ಮು ಕಾಶ್ಮೀರದಲ್ಲಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯದ ಸಾಕಷ್ಟು ಸಂಖ್ಯೆಯ ವಲಸಿಗ ಕಾರ್ಮಿಕರು ಜಮ್ಮು ಕಾಶ್ಮೀರದಲ್ಲಿದ್ದಾರೆ. ಇವರೆಲ್ಲರಿಗೂ ಈಗ ಅಲ್ಲಿ ಉದ್ಯೋಗ ಮಾಡುತ್ತಿರುವ ಕಾರಣದಿಂದ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಅವಕಾಶ ಸಿಗಲಿದೆ. ಪಿಎಂ ಪ್ಯಾಕೇಜ್​ನಡಿ ಸಾವಿರಾರು ಮಂದಿ ಜಮ್ಮು ಕಾಶ್ಮೀರದಲ್ಲಿ ಉದ್ಯೋಗ ಪಡೆದಿದ್ದಾರೆ. ಅವರೆಲ್ಲರಿಗೂ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಅವಕಾಶ ಸಿಗಲಿದೆ.

ರಾಜ್ಯ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣಾ ಆಯೋಗದ ಶಿಫಾರಸ್ಸಿನ ಪ್ರಕಾರ, ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. 2019ರ ಜನವರಿ ನಂತರ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತೆ. ಈಗಾಗಲೇ 19 ವರ್ಷದಿಂದ 22 ವರ್ಷ ವಯಸ್ಸಾಗಿರುವವರಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಸಿಗಲಿದೆ. ಮತದಾರರ ಪಟ್ಟಿ ಸೇರ್ಪಡೆಗಾಗಿಯೇ ಬೂತ್ ಮಟ್ಟದ ಅಧಿಕಾರಿ, ಎಲೆಕ್ಟ್ರೋರಲ್ ರಿಜಿಸ್ಟ್ರೇಷನ್ ಆಫೀಸರ್, ಅಸಿಸ್ಟೆಂಟ್ ಎಲೆಕ್ಟ್ರೋರಲ್ ರಿಜಿಸ್ಟ್ರೇಷನ್ ಆಫೀಸರ್​ಗಳನ್ನು ನೇಮಿಸಲಾಗಿದೆ.

ಆಕ್ಟೋಬರ್ 1ಕ್ಕಿಂತ ಮುಂಚಿತವಾಗಿ 18 ವರ್ಷ ದಾಟಿದವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಹರು ಎಂದು ಸಿಇಒ ಹಿರದೇಶ್ ಕುಮಾರ್ ಹೇಳಿದ್ದಾರೆ. ಸೆಪ್ಟೆಂಬರ್ 15ರಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತೆ. ಆಕ್ಟೋಬರ್ 25ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. 90 ವಿಧಾನಸಭಾ ಕ್ಷೇತ್ರಗಳಿಗೂ ನವಂಬರ್ 25ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತೆ. ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆಗಿರುವುದರಿಂದ 600 ಹೊಸ ಮತಗಟ್ಟೆ ಸ್ಥಾಪಿಸಲಾಗುತ್ತೆ. ಒಟ್ಟಾರೆ ಮತಗಟ್ಟೆಗಳ ಸಂಖ್ಯೆ 11,370ಕ್ಕೆ ಏರಿಕೆಯಾಗಲಿದೆ.

- Advertisement -

Related news

error: Content is protected !!