
ಪಲ್ವಾಲ್: ದೇವಸ್ಥಾನದ ಅರ್ಚಕರೊಬ್ಬರನ್ನು ತ್ರಿಶೂಲದಿಂದ ಇರಿದು, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಅರ್ಚಕರನ್ನು ಕೊಲೆ ಮಾಡಿ, ಅವರ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದ್ದು, ದೇಗುಲದ ಆವರಣದಲ್ಲಿ ಅವರ ಅರೆ ಸುಟ್ಟ ಶವ ಪತ್ತೆಯಾಗಿದೆ. ಈ ಭಯಾನಕ ಘಟನೆಗೆ ಇಡೀ ಹರಿಯಾಣವೇ ಬೆಚ್ಚಿ ಬಿದ್ದಿದೆ.
ಪಲ್ವಾಲ್ ಜಿಲ್ಲೆಯ ಬಂಚಾರಿ ಗ್ರಾಮದಲ್ಲಿ ಗುರುವಾರ ಮುಂಜಾನೆ 7 ಗಂಟೆಗೆ ಈ ದುರ್ಘಟನೆ ನಡೆದಿದೆ. ಅರ್ಚಕನನ್ನು ಕೊಲೆ ಮಾಡಿ, ಮೃತದೇಹವನ್ನು ಸುಟ್ಟುಹಾಕಲು ಪ್ರಯತ್ನಿಸಿದ ಹಂತಕರು ಶವಕ್ಕೆ ದೇವಾಲಯದ ಆವರಣದಲ್ಲಿ ಬೆಂಕಿ ಹಚ್ಚಿದ್ದಾರೆ. ಆದರೆ, ಆ ಹೆಣ ಅರೆಬರೆ ಸುಟ್ಟು ಹೋಗಿದ್ದು, ಬೆಳಗ್ಗೆ ಗ್ರಾಮಸ್ಥರು ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತಪಟ್ಟ ಅರ್ಚಕರನ್ನು ಚರಣಗಿರಿ ಮಹಾರಾಜ್ ಎಂದು ಗುರುತಿಸಲಾಗಿದೆ. ಬೆಡ್ಶೀಟ್ನಲ್ಲಿ ಸುತ್ತಲಾಗಿದ್ದ ಅರ್ಚಕನ ಶವಕ್ಕೆ ಬೆಂಕಿ ಹಚ್ಚಲಾಗಿದೆ. ಅರ್ಚಕನ ಎದೆ ಭಾಗಕ್ಕೆ ತ್ರಿಶೂಲದಿಂದ ಇರಿದಿರುವ ಗುರುತುಗಳು ಪತ್ತೆಯಾಗಿವೆ. ಆ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
20 ವರ್ಷಗಳಿಂದ ಆ ಗ್ರಾಮದಲ್ಲಿ ವಾಸವಾಗಿದ್ದ ಚರಣಗಿರಿ ಮಹಾರಾಜ್ ಅವರನ್ನು ಭೇಟಿಯಾಗಲು ಅವರ ಸ್ನೇಹಿತ ಮೋನಿ ಮಹಾರಾಜ್ ಬಂದಿದ್ದ. ಗೆಳೆಯ ಬಂದು ಮಾತನಾಡಿ ಹೋದ ಮರುದಿನವೇ ಚರಣಗಿರಿ ಮಹಾರಾಜ್ ಕೊಲೆಯಾಗಿದೆ. ಈ ಕೊಲೆ ನಡೆದ ಬಳಿಕ ಮೋನಿ ಮಹಾರಾಜ್ ನಾಪತ್ತೆಯಾಗಿದ್ದಾನೆ. ಆತನೇ ಈ ಕೊಲೆ ಮಾಡಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಗುರುವಾರ ಮಧ್ಯಾಹ್ನದ ವೇಳೆ ಗ್ರಾಮಸ್ಥರು ದೇವಸ್ಥಾನಕ್ಕೆ ಬಂದಾಗ ಅಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಅರ್ಚಕರ ಮೃತದೇಹ ಕಂಡುಬಂದಿದೆ.












