Wednesday, August 5, 2026
spot_imgspot_img
spot_imgspot_img

ಚುಚ್ಚುಮದ್ದಿನ ಸೂಜಿ ದೇಹದಲ್ಲೇ ಉಳಿದು ಅವಾಂತರ-ಮನೆಗೆ ಕಳುಹಿಸಿದ ಆಸ್ಪತ್ರೆ ಸಿಬ್ಬಂದಿ -ನೋವಿನಿಂದ ಬಳಲಿದ ಮಗುವಿಗೆ ಶಸ್ತ್ರಚಿಕಿತ್ಸೆ- ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

- Advertisement -
- Advertisement -

ಮುಂಬೈ: ನಾಯಿ ಕಡಿತಕ್ಕೆ ಒಳಗಾಗಿದ್ದ ಎರಡೂವರೆ ವರ್ಷದ ಮಗುವಿಗೆ ರೇಬಿಸ್ ನಿರೋಧಕ ಲಸಿಕೆ ನೀಡುವ ವೇಳೆ ಚುಚ್ಚುಮದ್ದಿನ ಸೂಜಿ ಮುರಿದು ದೇಹದಲ್ಲೇ ಉಳಿದಿದ್ದರೂ, ಅದನ್ನು ಗುರುತಿಸದೆ ಮನೆಗೆ ಕಳುಹಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಬಳಿಕ ಮಗು ತೀವ್ರ ನೋವಿನಿಂದ ಬಳಲಿದ ಕಾರಣ ಮತ್ತೊಂದು ಆಸ್ಪತ್ರೆಗೆ ದಾಖಲಿಸಿ ಕಿರು ಶಸ್ತ್ರಚಿಕಿತ್ಸೆ ಮೂಲಕ ಸೂಜಿಯನ್ನು ಹೊರತೆಗೆಯಲಾಗಿದೆ.

ಪೂರ್ವ ಕಲ್ಯಾಣ ನಿವಾಸಿಗಳಾದ ಸೂರ್ಯಭಾನ್ ಮತ್ತು ಕಾಜಲ್ ದಂಪತಿಯ ಪುತ್ರ ಕಾವೇಶ್ ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಯಿ ಕಚ್ಚಿತ್ತು. ಕೂಡಲೇ ಪೋಷಕರು ಆತನನ್ನು ಕಲ್ಯಾಣ್‌-ದೊಂಬಿವಿಲಿ ಮಹಾನಗರ ಪಾಲಿಕೆಯ ರುಕ್ಕಿಣಿಬಾಯಿ ಆಸ್ಪತ್ರೆಗೆ ಕರೆದೊಯ್ದಿದ್ದರು.

,ಪರಿಶೀಲಿಸಿದ ವೈದ್ಯರು ರೇಬಿಸ್ ನಿರೋಧಕ ಲಸಿಕೆ ನೀಡಲು ಸೂಚಿಸಿದ್ದರು. ಮೊದಲಿಗೆ ಶುಶೂಷಕಿಯೊಬ್ಬರು ತೋಳಿಗೆ ಒಂದು ಹಾಗೂ ಸೊಂಟದ ಭಾಗಕ್ಕೆ ಎರಡು ಸೇರಿ ಮೂರು ಚುಚ್ಚುಮದ್ದುಗಳನ್ನು ನೀಡಿದರು. ಬಳಿಕ ಮತ್ತೊಂದು ಚುಚ್ಚುಮದ್ದು ನೀಡಲು ಪೃಷ್ಠದ ಭಾಗದಲ್ಲಿ ಗುರುತು ಹಾಕಲಾಗಿತ್ತು ಎಂದು ಮಗುವಿನ ತಾಯಿ ಕಾಜಲ್ ತಿಳಿಸಿದ್ದಾರೆ.

ಸುಮಾರು ಅರ್ಧ ಗಂಟೆಯ ಬಳಿಕ ಮತ್ತೊಬ್ಬ ವೈದ್ಯರು ಬಂದು ಮಗುವಿಗೆ ಚುಚ್ಚುಮದ್ದು ನೀಡಲು ಮುಂದಾದರು. ಆ ವೇಳೆ ಮಗು ಅಲುಗಾಡಿದ್ದರಿಂದ ಚುಚ್ಚುಮದ್ದಿನ ಸೂಜಿ ಮುರಿದು ದೇಹದೊಳಗೇ ಉಳಿಯಿತು ಎಂದು ವೈದ್ಯರು ತಿಳಿಸಿದರು ಎಂದು ಕಾಜಲ್ ಹೇಳಿದ್ದಾರೆ.

ನಾನು ಮಗುವಿನ ಕಾಲುಗಳನ್ನು ಹಿಡಿದುಕೊಂಡಿದ್ದೆ. ವೈದ್ಯರು ಬಲವಾಗಿ ಚುಚ್ಚುಮದ್ದು ನೀಡಿದಾಗ ಸೂಜಿ ಮುರಿದು ದೇಹದೊಳಗೆ ಉಳಿಯಿತು. ‘ಮಗು ಅಲುಗಾಡಿದ್ದರಿಂದ ಹೀಗಾಗಿದೆ’ ಎಂದು ವೈದ್ಯರು ಹೇಳಿದರು. ಬಳಿಕ ಎಕ್ಸ್-ರೇ ಮಾಡಿದಾಗ ಸೂಜಿ ದೇಹದೊಳಗೆ ಬಾಗಿರುವುದು ಕಂಡುಬಂತು” ಎಂದು ಅವರು ತಿಳಿಸಿದ್ದಾರೆ.

ಘಟನೆ ಬಗ್ಗೆ ಕೂಡಲೇ ವೈದ್ಯರಿಗೆ ತಿಳಿಸಿದರೂ, “ಸೂಜಿ ನೆಲದ ಮೇಲೆ ಬಿದ್ದಿರಬಹುದು” ಎಂದು ಅವರು ಹೇಳಿದ್ದರು. “ನಾನು ಎಲ್ಲೆಡೆ ಹುಡುಕಿದರೂ ಸೂಜಿ ಸಿಗಲಿಲ್ಲ. ನಾನು ಒತ್ತಾಯಿಸಿದ ಬಳಿಕ ಇನ್ನಿಬ್ಬರು ಸಿಬ್ಬಂದಿ ಬಂದು ಪರಿಶೀಲಿಸಿ, ಸೂಜಿ ದೇಹದೊಳಗೇ ಇರಬಹುದೆಂದು ಹೇಳಿದರು” ಎಂದು ಕಾಜಲ್ ಆರೋಪಿಸಿದ್ದಾರೆ.

ಇಷ್ಟಾದರೂ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಮನೆಗೆ ಕಳುಹಿಸಿದರು. ಆದರೆ ಕೆಲವೇ ಗಂಟೆಗಳಲ್ಲಿ ಕಾವೇತ್ತೆ ತೀವ್ರ ನೋವು ಕಾಣಿಸಿಕೊಂಡಿತು. ಕೂಡಲೇ ಆತನನ್ನು ಮುಂಬೈನ ಸಿಯೋನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ದಾಖಲಾತಿಗಾಗಿ ಕುಟುಂಬ ಹಲವು ಗಂಟೆಗಳ ಕಾಲ ಕಾಯಬೇಕಾಯಿತು.

ಎಕ್ಸ್-ರೇ ಪರೀಕ್ಷೆಯಲ್ಲಿ ಮುರಿದ ಸೂಜಿ ಮಗುವಿನ ದೇಹದೊಳಗೇ ಇರುವುದನ್ನು ವೈದ್ಯರು ದೃಢಪಡಿಸಿದರು. ನಂತರ ಕಿರು ಶಸ್ತ್ರಚಿಕಿತ್ಸೆ ನಡೆಸಿ ಸೂಜಿಯನ್ನು ಹೊರತೆಗೆಯಲಾಯಿತು.

ಮಂಗಳವಾರ ಕಾಜಲ್ ಮತ್ತೆ ರುಕ್ಕಿಣಿಬಾಯಿ ಆಸ್ಪತ್ರೆಗೆ ತೆರಳಿ, ವೈದ್ಯರ ನಿರ್ಲಕ್ಷ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಅದಕ್ಕೆ ತಗುಲಿದ ವೆಚ್ಚಕ್ಕೆ ಪರಿಹಾರ ನೀಡಬೇಕು. ಇಂತಹ ಘಟನೆ ಮತ್ತಾರಿಗೂ ಆಗಬಾರದು ಎಂದು ಒತ್ತಾಯಿಸಿದರು.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆಯ ಸ್ಥಳೀಯ ಮುಖಂಡ ಅಮಿತ್ ಕೊಥೇಕ‌ರ್, “ಮಗುವಿನ ದೇಹದಲ್ಲೇ ಸೂಜಿ ಉಳಿದಿರುವುದು ವೈದ್ಯರಿಗೆ ಗೊತ್ತಾಗದಿರುವುದು ಗಂಭೀರ ನಿರ್ಲಕ್ಷ್ಯದ ಸೂಚನೆಯಾಗಿದೆ.

ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ತರಬೇತಿ ಪಡೆಯುತ್ತಿದ್ದ ವೈದ್ಯರೊಬ್ಬರು ಚುಚ್ಚುಮದ್ದು ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆಯಬೇಕು” ಎಂದು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!