
ಭಾರತದಲ್ಲಿ ಕೊವಿಡ್ 19 ಪ್ರಕರಣಗಳ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ದಿನದ ಪಾಸಿಟಿವಿಟಿ ರೇಟ್ ಕೂಡ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಇಂದು ಪ್ರಧಾನಿ ಮೋದಿಯವರು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಇಂದು ಸಂಜೆ 4.30ಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ದೇಶದ ಕೊವಿಡ್ 19 ಪರಿಸ್ಥಿತಿ ಪರಿಶೀಲನೆ ನಡೆಯಲಿದೆ. ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಲಿದೆ ಎಂದು ಎಎನ್ಐ ವರದಿ ಮಾಡಿದೆ.
ಇಂದು ದೇಶದಲ್ಲಿ 1,59,632 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷ ಮೀರಿದೆ. ದಿನದಿನವೂ ಕೊವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಒಂದೊಂದೇ ರಾಜ್ಯಗಳು ವೀಕೆಂಡ್ ಕರ್ಫ್ಯೂ, ಶೇ.50ರ ಸಾಮರ್ಥ್ಯದ ಅವಕಾಶಗಳಂಥ ನಿರ್ಬಂಧ ವಿಧಿಸುತ್ತಿವೆ. ಇನ್ನೊಂದೆಡೆ ಒಮಿಕ್ರಾನ್ ಸೋಂಕಿನ ಸಂಖ್ಯೆಯೂ ಕೂಡ ಏರುತ್ತಿದ್ದು, ಸದ್ಯ 3623 ಮಂದಿ ಒಮಿಕ್ರಾನ್ ಸೋಂಕಿತರಿದ್ದಾರೆ.

ನಾಳೆಯಿಂದ ಇನ್ನೊಂದು ಹಂತದ ಲಸಿಕೆ ಅಭಿಯಾನ
ಭಾರತದಲ್ಲಿ ನಾಳೆಯಿಂದ ಮೂರನೇ ಡೋಸ್ ಲಸಿಕೆ ಅಭಿಯಾನ ನಡೆಯಲಿದೆ. ಸದ್ಯ ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರು ಮತ್ತು 60 ವರ್ಷ ಮೇಲ್ಪಟ್ಟು ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. 18 ವರ್ಷ ಮೇಲ್ಪಟ್ಟವರಿಗೆ ಕಳೆದ ವರ್ಷ ಜನವರಿಯಿಂದಲೇ ಕೊರೊನಾ ಲಸಿಕೆ ನೀಡಲಾಗುತ್ತಿತ್ತು. ಒಟ್ಟಾರೆ ಸದ್ಯ ದೇಶದಲ್ಲಿ 150 ಕೋಟಿಗೂ ಅಧಿಕ ಡೋಸ್ ನೀಡಲಾಗಿದ್ದು, ಜನವರಿ 3ರಿಂದ 15-18ವರ್ಷದವರಿಗೆ ಕೊರೊನಾ ಲಸಿಕೆ ನಿಡಲಾಗುತ್ತಿದೆ. ಶುರುವಾದ ಒಂದೇ ವಾರದಲ್ಲಿ ಈ ವಯಸ್ಸಿನ 2 ಕೋಟಿಗೂ ಅಧಿಕ ಹೆಚ್ಚಿನ ಜನರು ಕೊರೊನಾ ಲಸಿಕೆ ಪಡೆದಿದ್ದಾರೆ. ಸದ್ಯ ದೇಶದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಸಾಯುವವರ ಪ್ರಮಾಣ ಕಡಿಮೆ ಇದೆ. ಇದೆಲ್ಲದರ ಮಧ್ಯೆ ಇಂದು ಪ್ರಧಾನಿ ಮೋದಿ ಕರೆದಿರುವ ಸಭೆಯ ಬಗ್ಗೆ ಸಹಜವಾಗಿಯೇ ಕುತೂಹಲ ಹೆಚ್ಚಿದೆ.


