Thursday, April 18, 2024
spot_imgspot_img
spot_imgspot_img

ಧ್ಯಾನಕ್ಕೆ ಬಡವ ಬಲ್ಲಿದರೆಂಬುದಿಲ್ಲ

- Advertisement -G L Acharya panikkar
- Advertisement -

✍️ ಮಲ್ಲಿಕಾ ಜೆ ರೈ, ಪುತ್ತೂರು ದ. ಕ ಜಿಲ್ಲೆ. ಕರ್ನಾಟಕ
ಅಂಕಣಕಾರರು

ಕೆಲವರಿಗೆ ದುಃಖ ಅಥವಾ ಖುಷಿಯಾಗುವ ಭರದಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೇ ಆಗುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಹವ್ಯಾಸಗಳು ಬದುಕಿನ ಪಯಣಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಒಳ್ಳೆಯ ಹವ್ಯಾಸಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಗುರಿಯನ್ನು ತಲುಪಿಸಲು ಸಾಧ್ಯವಾಗುತ್ತದೆ. ತಿಂದುಂಡು ತೇಗಿ ಬದುಕು ನಡೆಸುವ ಮಂದಿ ತಿನ್ನುವುದರ ಬಗೆಗೇ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ಹೊಟ್ಟೆಗೆ ಮಾತ್ರ ತಿನ್ನುವುದು ಅಲ್ಲದೇ ಇತರರ ಪಾಲಿಗೆ ಬರುವಂತಹದನ್ನು ತಾನೇ ಕಬಳಿಸುವುದು ಅತೀ ದೊಡ್ಡ ದುರ್ಗುಣವೇ ಹೌದು.

ಈ ಲೋಕದಲ್ಲಿ ಸಣ್ಣವರಿರುವಾಗ ಇರುವಂತಹ ಪ್ರೀತಿ, ವಿಶ್ವಾಸದ ಭ್ರಾತೃತ್ವತೆ ದೊಡ್ಡವರಾಗುತ್ತಾ ಹೋದಂತೆ ಸಂಕುಚಿತಗೊಳ್ಳುತ್ತದೆ. ಕೆಲವೊಮ್ಮೆ ಹೇಳ ಹೆಸರಿಲ್ಲದೆ ಮಾಯವಾಗುತ್ತದೆ. ಕೆಲವರು ಸ್ವಾರ್ಥದ ಮೊಟ್ಟೆಗಳೇ ಆಗಿ ಎಲ್ಲವನ್ನೂ ತಾವೊಬ್ಬರೇ ಕಬಳಿಸುವ ಮಹಾನ್ ರಾಕ್ಷಸರೇ ಆಗುತ್ತಾರೆ. ದೇವರು ಎಲ್ಲವನ್ನೂ ನೋಡಿ ಪಟ್ಟಿ ಮಾಡುತ್ತಿರುವನೆಂಬ ಅರಿವು ಕೊಂಚವೂ ಇರದಂತೆ ಬದುಕು ನಡೆಸುತ್ತಾರೆ. ಇದು ಮಾಯಾ ಮೋಡಿಯಂತೂ ಅಲ್ಲವೇ ಅಲ್ಲ. ದುಡ್ಡು ಆಡಿಸುವ ಆಟಕ್ಕೆ ನವಗ್ರಹಗಳoತೆ ವರ್ತಿಸಿ ಬಿಟ್ಟು ಆಮೇಲೆ ಎಲ್ಲವೂ ಕೊನೆಯಾಗುತ್ತದೆ. ಸ್ವಾರ್ಥ ಮಹಾನ್ ಆಟವಾಡುತ್ತದೆ. ತುಂಬಾ ಮಂದಿ ತಾವೇ ಮಹಾ ಜನಗಳ ಹಾಗೆ ವರ್ತಿಸುತ್ತಾರೆ. ಪ್ರಕೃತಿಗೆ ಪೂರಕವಾಗಿ ಬದುಕು ನಡೆಸಬೇಕು. ಆಗ ನಿರ್ಮಲ ಚಿತ್ತ ಮನೋಭಾವ ಮೂಡುತ್ತದೆ. ಇನ್ನೊಬ್ಬರ ಬಗೆಗೆ ಕರುಬದೇ ತನ್ನೊಳಗೆ ಆತ್ಮವಿಶ್ವಾಸ ಬೆಳೆಸಿಕೊಂಡು ತನ್ನಂತೆ ಇತರರು ಎಂದು ಭಾವಿಸುತ್ತ ಕಾಲಚಕ್ರದೊಂದಿಗೆ ಜೀವನ ಸಾಗಿಸಬೇಕು.

ನಂಬಿ ಕೆಟ್ಟವರಿಲ್ಲವೋ ಮನುಜ ಅಂಬುಜನ ಬಿಡದೆ ಜಪಿಸೋ ಅನವರತವು ಎಂದು ದಾಸರೇ ಹಾಡಿರುವಂತೆ ಯಾವ ಯಾವ ಕಾಲಕ್ಕೆ ಏನೇನು ಆಗಬೇಕೋ ಅದೆಲ್ಲ ಕರುಣಿಸುವ ಆ ದೇವ. ಆದರೆ ನಾಲಿಗೆ ಹರಿತ ಇರುವವರಿಗೆ ಇತರರಿಗೆ ದೊರಕುವ ಪಾಲನ್ನು ಕಸಿದು ತಿಂದು ಜೀರ್ಣಿಸದ ಹೊರತು ಗರ ಬಡಿದವರಂತೆ ವರ್ತಿಸುತ್ತಾರೆ. ಅದು ಜೀವನ ಪೂರ್ತಿ ನೆನಪಿನಲ್ಲಿ ಉಳಿದು ಮರದಲ್ಲಿರುವ ಬಂದನಿಕೆಯಂತೆ ಕಾಡುತ್ತಿರುತ್ತದೆ. ಹಾಗಾಗಿ ಇನ್ನೊಬ್ಬರ ಗಳಿಕೆ ಅಥವಾ ಪಾಲನ್ನು ಒಪ್ಪಿಸದ ಹೊರತು ಜೀವನ ಮುಕ್ತಿ ಹೊಂದಲು ಸಾಧ್ಯವಿಲ್ಲ.

ಪ್ರತಿಯೊಬ್ಬರ ಆತ್ಮದಲ್ಲಿ ಜೀವಾತ್ಮನಿರುತ್ತಾನೆ, ಪವಿತ್ರವಾದ ಪರಮಾತ್ಮನ ಸಾನ್ನಿಧ್ಯ ಆತ್ಮದಲ್ಲಿ ಅನುಭವಕ್ಕೆ ಬರಲು ಆಕಾಶ ತತ್ವದಿಂದ ಆನಂದ ಕೋಶಮಯಕ್ಕೆ ತಲುಪಬೇಕು. ಆಗ ಆತ್ಮದರ್ಶನವಾಗುವುದು. ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ. ನಮ್ಮೊಳಗಿರುವ ಆಸೆಯೇ ಮಾಯೆ. ಆಸೆಗಳ ದಾಸರಾದ ಮೇಲೆ ಉಳಿದವುಗಳು ಬರಿ ನೆಪ ಮಾತ್ರ. ಇನ್ನೊಬ್ಬರಲ್ಲಿ ಇರುವುದು ತನ್ನಲ್ಲಿ ಇಲ್ಲವೆಂದರಿತಾಗ ಹೊಟ್ಟೆಕಿಚ್ಚಿನ ಆಸೆ ಸರ್ವಥಾ ಒಳ್ಳೆಯದಲ್ಲ. ಒಳಿತಾಗುವಂತ ಆಸೆಗೂ, ಮಾತ್ಸರ್ಯಕ್ಕೂ ಆನೆಗೂ ಇರುವೆಗೂ ಇರುವಷ್ಟು ಅಂತರವಿದೆ. ಸಂಸಾರದಲ್ಲಿದ್ದು ಜಾಗೃತರಾಗಿ ಬದುಕುವುದು ಅಧ್ಯಾತ್ಮ. ಅದಕ್ಕೆ ಹೊರಗಿನ ವೇಷ ಭೂಷಣಗಳ ಅಗತ್ಯವಿಲ್ಲ. ಸರಳತೆ ಅದರ ಹೆದ್ದಾರಿ.

‘ನಾನು’ ಎಂಬ ಭಾವ ಹೋದರೆ ನನ್ನೊಳಗೆ ದೇವರು ವಾಸಿಸುತ್ತಾನೆ. ನಾನು ಇಲ್ಲವಾಗುವುದೇ ದೈವತ್ವಕ್ಕೆ ಅಡಿಪಾಯ. ಆಗ ಸುಖವೂ ಇಲ್ಲ ದುಃಖವೂ ಇಲ್ಲ. ಭ್ರಮಾಲೋಕ ನಮ್ಮಿಂದ ತೊಲಗಬೇಕು. ನಮ್ಮೊಳಗಿನ ಆತ್ಮದ ಜಾಗೃತ ಬೆಳಕು ಬೀರಿದಾಗ ನಿತ್ಯ ಸಂತೋಷವಾಗುತ್ತದೆ. ಹೊರಗಿನ ಬದುಕನ್ನು ಇನ್ನೊಬ್ಬರ ಪ್ರಶಂಸೆಗೋಸ್ಕರ ಬದುಕಿದಾಗ ನೋವು ಸಹಜ. ಹುಟ್ಟು ಆಕಸ್ಮಿಕ, ಬೆಳೆಯುತ್ತ ಸತ್ಯ, ನ್ಯಾಯದಿಂದ ಹೃದಯಪೂರ್ವಕ ಸೇವೆ ಮಾಡಿದಾಗ ಆತ್ಮ ಪರಿಪೂರ್ಣಗೊಳ್ಳುತ್ತದೆ. ಏನೂ ಅಪೇಕ್ಷೆಯಿಲ್ಲದೆ ಪ್ರೀತಿಸಬೇಕು ಆಗ ಮನೆಗೆ ಒಳಿತಾಗಿ ಮನಸ್ಸು ವಿಕಾಸವಾಗುತ್ತದೆ.

ಹಳ್ಳಿ, ಊರು, ತಾಲೂಕು, ದೇಶ, ಪ್ರಪಂಚ ಆದಾಗ ಬುದ್ಧಿ ಬಲಿಯುತ್ತದೆ. ಬುದ್ಧಿ ಬಂದಾಗ ಬುದ್ಧನಾಗಬಹುದು. ಧ್ಯಾನ ಮಾಡುವುದು ಮನಸ್ಸಿನ ಶುಭ್ರತೆಗಾಗಿ. ಯಾವ ವಿಷಯಗಳಿಗೂ ಅಂಟಿಕೊಳ್ಳಬಾರದು. ಬಟ್ಟೆಗೆ ಕೊಳೆ ಅಂಟಿಕೊಂಡಾಗ ನೀರಿನಲ್ಲಿ ತೊಳೆದು ಸ್ವಚ್ಛ ಮಾಡುವಂತೆ, ಕೆರೆಯಲ್ಲಿ ತಾವರೆ ನೀರಿಗೆ ಅಂಟಿಕೊಳ್ಳದೆ ಹೇಗೆ ಇರುವುದೋ ಅದೇ ರೀತಿ. ಹೇಗೆ ನಿರಾಸೆಯಲ್ಲಿರುವಾಗ ಯಾವುದೂ ಬೇಡವಾಗುತ್ತದೋ ಆಸೆಯಲ್ಲಿಯೂ ಅದೇ ಭಾವ ಸ್ಥಿತಿ ಕಾಯ್ದುಕೊಳ್ಳುವುದು ಒಳಿತು. ಜಗತ್ತಲ್ಲಿ ಇದ್ದರೂ ಭಾವದೊಳಗೆ ಜಗತ್ತಿಗೆ ಅಂಟದ ಹಾಗಿರಬೇಕು. ವಿವೇಕವೇ ವ್ಯಾವಹಾರಿಕ ಜ್ಞಾನವಾಗಿರಬೇಕು. ಆಗ ಬದುಕು ಸುಕ್ಷೇಮವಾಗುತ್ತದೆ.

ನಿತ್ಯವೂ ಉದ್ವೇಗದಲ್ಲಿ ಬದುಕುವುದೇ ಸ್ಮಶಾನ. ಜೀವನದ ಪ್ರತೀ ಕ್ಷಣ ಅಥವಾ ಇಂಚನ್ನು ಪರಿಪೂರ್ಣತೆಗೆ ತರಬೇಕು. ಜೀವನವನ್ನು ಸತ್ಯಕ್ಕೆ ತಂದು ನಿಲ್ಲಿಸಿದಾಗ ದುಃಖ ಕಡಿಮೆಯಾಗುತ್ತದೆ. ನಮ್ಮೊಳಗೆ ನಾವೇ ಮಿತಿ ಹಾಕಿಕೊಂಡಾಗ ಮೋಹ ಉಂಟಾಗುತ್ತದೆ. ಭಗವಂತ ಎಲ್ಲರ ಕಡೆಗೆ ತನ್ನ ಚಿತ್ತ ಹರಿಸುತ್ತಿರುತ್ತಾನೆ. ಯೋಗ ಮೈಗೂಡಿಸಿಕೊಂಡಾಗ ಅದು ಅರಿವಿಗೆ ಬರುತ್ತದೆ. ಉಸಿರಿನ ನಿಯಂತ್ರಣ ನಮ್ಮಲ್ಲಿಲ್ಲ. ತಲೆನೋವು, ಹೊಟ್ಟೆನೋವು ಬಂದಾಗ ನೋವು ಹೋಗಿಸೋದಕ್ಕೂ ನಮ್ಮೊಳಗೆ ನಿಯಂತ್ರಣವಿಲ್ಲ. ಹಾಗಾಗಿ ಆ ದೇವರಲ್ಲಿ ಬೇಡಬೇಕು.

ಪ್ರಪಂಚದಲ್ಲಿ ಚೆನ್ನಾಗಿ ಬಾಳಬೇಕು. ಪಾರದರ್ಶಕ ಅಂದರೆ ಸತ್ಯವನ್ನು ಅರಿಯಲು ಮನಸ್ಸು ಬೆತ್ತಲಾಗಬೇಕು. ಗಾಜಿನ ಮನೆಯಲ್ಲಿ ಹೇಗೆ ಒಳ ಹೊರಗು ತಿಳಿಯುವುದೋ ಅದೇ ರೀತಿ ಮನಸ್ಸು ಗಾಜಿನಂತೆ ಆದಾಗ ಜೀವನ ಸಾಕ್ಷಾತ್ಕಾರಗೊಳ್ಳುತ್ತದೆ. ಆನಂದ ಪಡೆಯುತ್ತದೆ. ಯಾರೋ ಸುಳ್ಳು ಹೇಳ್ತಾರೆ. ನೋವಾಗುತ್ತೆ. ವೈಮನಸ್ಸು ಮೂಡುತ್ತೆ. ಸುಳ್ಳು ಹೇಳೋದು ಸೌಂದರ್ಯ, ಉಡುಗೆ ಹಾಗೂ ದುಡ್ಡು (ಆಸ್ತಿ, ಬಂಗಾರ ) ಇದು ಮೂರರ ಮೇಲೆ ನಿಂತಿರುತ್ತೆ.

ಸರಳವಾಗಿ ಬದುಕುವುದನ್ನು ಕಲಿಯಬೇಕು. ಒಬ್ಬ ಮನುಷ್ಯನಿಗೆ ಅವಶ್ಯಕತೆ ಏನಿದೆ?-ಸಮಾಧಾನ ಸಿಗಬೇಕು. ಸಾಲವಾಗಿ ಬದುಕಿದರೆ ಋಣ ಮುಗಿಯುವುದೇ ಇಲ್ಲ. ಸಮಾಧಾನ ಇಲ್ಲದ ಮೇಲೆ ಸೌಂದರ್ಯ ಇದ್ದೇನು ಪ್ರಯೋಜನ? ಸವಲತ್ತುಗಳು ಯಾಕೆ? ಅದರಿಂದೇನು ಪ್ರಯೋಜನ? ಎದುರು ಬೆಳ್ಳಿತಟ್ಟೆಯಲ್ಲಿ ಭೂರಿಭೋಜನ, ಕುಳಿತುಕೊಳ್ಳಲು ದುಬಾರಿ ಸೋಫಾ ಸೆಟ್ಟು, ಕೈಯಲ್ಲಿ, ಜೇಬಲ್ಲಿ ಹಾಗೂ ಟೀಪಾಯಿಯಲ್ಲಿ ಮೂರ್ನಾಲ್ಕು ಮೊಬೈಲು, ಸೇವೆಗೆoದು ನಾಲ್ಕೈದು ಸೇವಕರು, ಟಿ ವಿ ಅದೂ ಇದೂ ಎಲ್ಲವೂ ಇದೆ.

ಸಮಾಧಾನದ ಮನಸ್ಸು ಹೇಗಿರಲು ಸಾಧ್ಯ? ಅದಕ್ಕೆ ಇದ್ಯಾವುದರ ಅಗತ್ಯವೂ ಇಲ್ಲ. ಪ್ರಾಮಾಣಿಕ, ನಿಷ್ಕಲ್ಮಶ, ಸ್ವಚ್ಛ ಸುಂದರ ಮನಸ್ಸು ಸಾಕು. ಆಗ ಇಡೀ ಜಗತ್ತು ಗೆಲ್ಲುವ ಹುಮ್ಮಸ್ಸು ಬರುತ್ತದೆ. ಒಂದು ಸುಳ್ಳು ಹೇಳುವ ಮೊದಲು ನೂರು ಸಾರಿ ಯೋಚಿಸಬೇಕು. ಸತ್ಯ ಹೇಳಿ ಆಗೋ ಪರಿಣಾಮ ಸೂಜಿ ಚುಚ್ಚಿದ ನೋವಿನಂತೆ ಕ್ಷಣಿಕ. ಸುಳ್ಳು ಹೇಳಿ ಬದುಕೋ ಜೀವನ ಕಡೆಗೆ ಸತ್ಯದರ್ಶನವಾದಾಗ ಕೊಡಲಿಯ ಏಟಿನಂತೆ ಆಗುವುದು. ಆ ಏಟು ಅಷ್ಟು ಸುಲಭದಲ್ಲಿ ಮಾಯಲ್ಲ. ಹಾಗಾಗಿ ಗುಣವಾಗೋದು ಅನುಮಾನ. ಬೇಕೇ ಇಂತಹ ಬದುಕು? ಜೀವನ ಎಷ್ಟು ದಿನ ಎಂದು ಯಾರೂ ಅರಿತವರಿಲ್ಲ. ನಂಬಿಕೆಗೆ ಕೊಡಲಿ ಪೆಟ್ಟು ಹಾಕಿ ನೆಮ್ಮದಿಯಾಗಿರೋದು ಕನಸಿನ ಮಾತು.

ಬಡವನಾದರೆ ಏನು ಪ್ರಿಯೆ ಕೈತುತ್ತು ತಿನಿಸುವೆ ಈ ರೀತಿ ಜೀವನಾನುಭವ ಹೊಂದಿರುವವರೇ ನಿಜದಲ್ಲಿ ಭಾಗ್ಯವಂತರು. ಹೊರಗಿನ ಸಿರಿವಂತಿಕೆ ಯಾಕೆ? ಹೋಗುವಾಗ ಕೊಂಡು ಹೋದವರಿಲ್ಲ. ವಾಪಸ್ಸು ಬಂದು ಪುನಃ ಅನುಭವಿಸಿದವರಿಲ್ಲ! ದೇವರಿರುವನೆಂಬ ಆ ಒಲವಿನ ಸಿರಿವಂತಿಕೆ ಒಳಗಿರಲು ಎಲ್ಲವೂ ತೃಣ ಸಮಾನ. ಧ್ಯಾನದ ಜೊತೆ ಮನಸ್ಸಿನ ವರ್ಚಸ್ಸು ಹೆಚ್ಚಾಗುತ್ತಾ ಹೋಗುತ್ತದೆ. ಧ್ಯಾನಕ್ಕೆ ಬಡವ ಬಲ್ಲಿದರೆಂಬುದಿಲ್ಲ.

- Advertisement -

Related news

error: Content is protected !!