Friday, April 26, 2024
spot_imgspot_img
spot_imgspot_img

ವರಮಹಾಲಕ್ಷ್ಮಿ- ಉತ್ತಮ ಸೊಸೆಗೆ ವರ

- Advertisement -G L Acharya panikkar
- Advertisement -

✍️ ರಾಧಾಕೃಷ್ಣ.ಎ

ಸೇವೆ ಮಾಡುವುದರಿಂದ ಮನಸ್ಸಿಗೆ ಸಮಾಧಾನ. ಅದು ದೇಶಸೇವೆಯೊ, ಈಶಸೇವೆಯೊ ಯಾವುದಾದರೂ ಆದೀತು, ಅದಿಲ್ಲಿ ಗೌಣವಾದ ವಿಚಾರ. ಪರಿಸ್ಥಿತಿಯ ನಿಲುಮೆಯಲ್ಲಿ ವಿಚಾರಗಳ ಸ್ಥಿತ್ಯಂತರವಾಗುವುದು ವಾಸ್ತವ ಮತ್ತು ಅಂತ್ಯಕ್ಕೆ ಎಲ್ಲರೂ ಒಪ್ಪಿ ಮುಂದಡಿಯಿಡುವುದು ಹೆಚ್ಚು. ವರ್ಷಂಪ್ರತಿಯಂತೆ ಶ್ರಾವಣ ಪ್ರಕ್ಷುಬ್ಧ ಸ್ಥಿತಿ ಮಧ್ಯೆಯೇ ಬರುವ ಹಾಗೇ ಬಂತು. ಶ್ರಾವಣ ಮಾಸ ಬಂತೆಂದರೆ ಹಬ್ಬ.

ಕೆಲವರು ಔದಸೀನ್ಯದಿಂದ ಹೇಳುವರು “ಖರ್ಚಿಗೆ ದಾರಿಯಾಯಿತು” ಎಂದು. ಜೀವ-ಜೀವನಕ್ಕೂ ಮಿಗಿಲಾದುದೇ ಈ ವ್ಯಯ ಎಂದು ಯೋಚಿಸಿದರೆ ಎಲ್ಲವೂ ಸಲಿಲ. ಆ ಅವಸರದಲ್ಲಿ ನೆನಪಿರಲಿ ಹಬ್ಬ-ಹರಿದಿನಗಳು, ಸರ್ವ ಪರ್ವಗಳು ಕೇವಲ ಆಡಂಬರದ ಭೋಜನ ತಯಾರಿಸಿ ಉಣ್ಣುವವರಿಲ್ಲದೆ ಚೆಲ್ಲುವುದಲ್ಲ. ಆಗ ನೀವೆಲ್ಲರೂ ರೈತನ ಬೆವರಿನ ಪ್ರತಿಫಲವನ್ನು ಮೆಲ್ಲದೆ ಅವನ ಶ್ರಮದ ವ್ಯರ್ಥತೆಯ ಪಾಪ ಕಟ್ಟಿಕೊಳ್ಳುವುದನ್ನು ನೆನಪಿಗೆ ತಂದುಕೊಳ್ಳಿ.

ಬದುಕು ಜೀವವಿರುವ ಪ್ರತಿಯೊಂದಕ್ಕೂ ಇದೆ. ಆಸ್ವಾದಿಸುವ ರೀತಿ ಮಾತ್ರ ವಿಭಿನ್ನ. ಅದನ್ನು ಮನುಕುಲದಿಂದ ಉಳಿದವುಗಳು ಕಲಿಯುತ್ತವೆ. ಬದುಕುವ ಕಲೆಯೊಳಗೆ ಆಚಾರ-ವಿಚಾರಗಳು ಬರುತ್ತವೆಯಲ್ಲವೇ? ಅಲ್ಲಿ ದೈವ-ದೇವರುಗಳ ಮದುವೆ-ಮುಂಜಿಗಳು ಜಾತ್ರೆ-ಆಯನಗಳು ಬರುತ್ತವೆ. ಪ್ರತಿಯೊಂದಕ್ಕೂ ಮೀಸಲಾದ ಮಾಸಗಳು “ಇದಮಿತ್ಥಂ” ಎನ್ನುವ ಹಾಗೆ ಹಿರಿಯರಿಂದ ನೀಡಲ್ಪಟ್ಟವುಗಳು.

ಆಷಾಡ ಮಾಸ (ಆಟಿ)ಸ್ವಲ್ಪ ಶುಭಕಾರ್ಯಕ್ಕೆ ಹಿತವಲ್ಲ ಎಂಬುದಾಗಿ ಇದ್ದರೂ ಈ ಬಾರಿ ಪರಿಸರ ಆರಾಧನೆ ನಾಗರಪಂಚಮಿಯ ಒತ್ತುತ್ತಿಗೇ ಬಂತು ಶ್ರಾವಣ ಮಾಸ. ಇದು ದೇವತಾರಾಧನೆಗೆ ಯೋಗ್ಯವಾದುದು, ಶುಭ ತಿಂಗಳುಗಳೆಂದು ವಾಡಿಕೆ. ಅವೆಲ್ಲವೂ ವ್ಯಕ್ತಿಗತ ನಂಬಿಕೆಯ ಹೂರಣದೊಳಗೆ ಬಿಡುವುದು ಒಳಿತು. ಯಾಕೆಂದರೆ ಉಳಿತಾಯ ಯೋಜನೆಗಳಿಗೆ ಅವನಿಗೆ ಬೇಕಾದಾಗ ಉಪಯೋಗಿಸುವ ಅನುಕೂಲ ಶಾಸ್ತ್ರ ಎಲ್ಲವನ್ನು ಸ್ವೇಚ್ಛೆಯಾಗಿಸಿದೆ.

ಜೀವ ಯಾ ಆತ್ಮವನ್ನು ತುಂಬಿದ ಶರೀರಕ್ಕೆ ಕ್ಷಣಕ್ಷಣದ ಬಡಿತದ ಅವಕಾಶ ನೀಡಿದ ಶಕ್ತಿಯನ್ನು ಆರಾಧಿಸಬೇಕು. ಅದಕ್ಕೆ ಒಂದೊಂದು ಹೆಸರಲ್ಲಿ ಆರಾಧನಾ ದಿನಗಳನ್ನು ಸೃಷ್ಟಿಸಿ ಕೊಟ್ಟವರು ನಮ್ಮವರು. ಶ್ರಾವಣ ಮಾಸದ ಪ್ರತಿ ಶನಿವಾರಗಳು ವಿಶೇಷ ಪವಿತ್ರತೆಯನ್ನು ಹೊಂದಿರುವ ದಿನಗಳು. ಅದರಲ್ಲೂ ಪ್ರಥಮ ಶುಕ್ರವಾರ ಅತಿ ಪವಿತ್ರ ವರಮಹಾಲಕ್ಷ್ಮಿ ವೃತ ಶುಕ್ರವಾರದಂದೇ ಆರಾಧಿಸಲ್ಪಡುವುದು. ತಮ್ಮ ಮನೆಗಳಿಗೆ ಸಂಪತ್ತು, ಧನಧಾನ್ಯ ಭಾಗ್ಯಗಳನ್ನೀಡೆಂದು ಕೇಳುವ ದಿನ. ಕಂಕಣಭಾಗ್ಯ ಪಡೆಯದ ಎಲ್ಲರಿಗೂ ವಿಶೇಷ ಪೂಜಾ ಸಲ್ಲಿಕೆ ಮಾಡುವ ಕನ್ಯಾ ಪೂಜನ ದಿನ. ಯೋಗ ದೊರಕಿದರೆ ಕಂಕಣ ಕೂಡಿ ಬಂದ ದಿನವೆಂದೇ ಹೇಳಬೇಕು.

ನೇರವಾಗಿ ಹೇಳುವುದಾದರೆ ಕಥಾನಕ ಸಮುದ್ರಮಥನದ ಲಕ್ಷ್ಮಿಯದ್ದು. ಅದೇ ಜಗದೋದ್ದಾರಕ ಈಶ್ವರ ತನ್ನ ಪತ್ನಿ ಪಾರ್ವತಿಗೆ ಸೂಚಿಸಿದ ಮಹಾಲಕ್ಷ್ಮಿ ವೃತ ಎಂಬಲ್ಲಿಗೆ ಪೂಜಾ ಮಹತ್ವ ಪಡೆದುಕೊಂಡಿದೆ. ಮುಂದಕ್ಕೆ ಇನ್ನೊಂದು ಕಡೆ ಪುರಾಣದ ಚಾರುಮತಿ ನೆನಪಾಗಬೇಕು. ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ – ಮಾವಂದಿರ ಸೇವೆ ಮಾಡಿದ್ದಕ್ಕಾಗಿ ಆಕೆಯ ಶ್ರದ್ದೆಗೆ ಒಲಿದ ಲಕ್ಷ್ಮಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು. ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಹಾಗೆ ಮಾಡಿದ ಚಾರುಮತಿಗೆ ತನ್ನ ಇಷ್ಟಾರ್ಥಗಳ ಅನುಗ್ರಹಿಸಿದ ಮಹಾಲಕ್ಷ್ಮಿ ವ್ರತ ದಿನ ಈ ವರ್ಷ ಆಗಸ್ಟ್ ಇಪ್ಪತ್ತರಂದು. ಸೊಸೆಯಂದಿರೇ “ದೇವತೆ ವರಮಹಾಲಕ್ಷ್ಮಿ ಖಂಡಿತ ವರವೀಯುತ್ತಾಳೆ, ಆದರೆ ಯಾವಾಗ ನಮ್ಮ ಅತ್ತೆ-ಮಾವಂದಿರು ನಮ್ಮ ಅಪ್ಪ-ಅಮ್ಮನ ಸ್ಥಾನವನ್ನು ಪಡೆದು ನಮ್ಮಿಂದ ಗೌರವಾದರಗಳನ್ನು ಸ್ವೀಕರಿಸುತ್ತಾರೆಯೋ ಅಂದು”. ಆವಾಗಲೇ ನಮ್ಮ ಮನೆ ಲಕ್ಷ್ಮೀನಾರಾಯಣ ದೇವಾಲಯವಾಗುತ್ತದೆ.

ವ್ರತ ಸುಲಭ
ಈ ಶುಭದಿನದಂದು ನಿತ್ಯ ಕರ್ಮಾದಿಗಳನ್ನು ಮುಗಿಸಿ ದೇವರ ಕೋಣೆ ಶುದ್ಧ ರಂಗೋಲಿಯಿಂದ ಶೃಂಗಾರ ಮಾಡಿ,ಬಾಳೆ ಎಲೆಯ ಮೇಲೆ ಬೆಳ್ತಿಗೆ ಅಕ್ಕಿ ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ ಕಲಶ ಮಾವಿನ ತುದಿ ಅಥವಾ ವೀಳ್ಯದೆಲೆಯಿಂದ ಜೋಡಿಸಿ, ಅರಶಿನ ಹಚ್ಚಿದ ತೆಂಗಿನಕಾಯಿ ಇಡುವುದು ಮತ್ತು ಅದನ್ನೇ ದೇವಿಯ ರೂಪದಲ್ಲಿ ಶೃಂಗರಿಸುವುದು.
ಈ ಹಬ್ಬದ ಅಲಂಕಾರ ಪೂಜಾಕಾರ್ಯದಲ್ಲಿ ಹೆಚ್ಚಾಗಿ ಕ್ರಿಯಾಶೀಲ ಮಹಿಳೆಯರ ಪಾತ್ರ ಕಾಣುತ್ತೇವೆ. ಕೆಲವೊಮ್ಮೆ ಶ್ರೀಮಂತಿಕೆಯ ಪ್ರತಿಫಲನ ದೇವಿಯ ಸೀರೆಯಲ್ಲೂ ಕಾಣಬಹುದು.ಇಲ್ಲಿ ದುಬಾರಿ ಅಥವಾ ಸಾಧಾರಣ ಸೀರೆ ಮುಖ್ಯವಲ್ಲ ದೇವಿಯ ಆರಾಧನೆಯಲ್ಲಿ ಶ್ರದ್ಧೆ ಭಕ್ತಿ ಮುಖ್ಯವಾಗುತ್ತದೆ. ಕಲಶದ ಮೇಲೆ ಕೆಲವೊಮ್ಮೆ ವಿಗ್ರಹವನ್ನು ಇಟ್ಟು ಪೂಜೆ ಮಾಡುತ್ತಾರೆ.

ಪೂಜಾ ಕ್ರಮ
ಮೊದಲಾಗಿ ವಿಘ್ನವಿನಾಶಕ ನ ಆರಾಧನೆ ಸ್ವಸ್ತಿಕ್ ಇಟ್ಟು, ಯಾ ರಂಗೋಲಿ ಮೂಡಿಸಿ ಪೂಜಿಸಲೇ ಬೇಕು.ಅನಂತರ ದೇವಿಯ ಧ್ಯಾನ. ಬಿಲ್ವ ವೃಕ್ಷದಲ್ಲಿ ದೇವಿಯ ನೆಲೆಯೆಂದು ಬಿಲ್ವಪತ್ರೆ ಬಳಸಿ ಅಲಂಕರಿಸಿ ಪಂಚಾಮೃತ ಅಭಿಷೇಕ (ಹಾಲು,ಮೊಸರು, ತುಪ್ಪ, ಜೇನು,ಸಕ್ಕರೆ) ಮಾಡುವುದು ಅಥವಾ ದೇವಿಯ ಬಲು ಪ್ರಿಯವಾದ ಕುಂಕುಮಾರ್ಚನೆ ಮಾಡಿ ಭಕ್ತಿಯಿಂದಲೂ ಧ್ಯಾನಿಸುತ್ತಾರೆ.

ಕೆಂಪು ದಾರ
ಕುಂಕುಮಾರ್ಚನೆ ಯೊಂದಿಗೆ ದೇವಿ ಆರಾಧನೆ ಬಳಿಕ 12 ಗಂಟು ಇರುವ ದಾರವನ್ನು ದೇವಿಗೆ ಅರ್ಪಿಸಿ, ಸುಮಂಗಲಿಯರು ತಮ್ಮ ತಾಳಿಗೋ ,ಕೈಗೊ ದಾರವನ್ನು ಕಟ್ಟಿಕೊಳ್ಳುತ್ತಾರೆ. ಹಂಚಿಕೊಳ್ಳುತ್ತಾರೆ. ವರ್ಷಪೂರ್ತಿ ಆ ಧಾರವನ್ನು ನಮಿಸಿ, ಪ್ರಾರ್ಥಿಸಿ ಒಂದು ವರ್ಷದ ಬಳಿಕ ದಾರದ ಬದಲಾವಣೆ ಮಾಡಿಕೊಳ್ಳುವರು.

ಪೂಜಾ ಪ್ರಸಾದ
ನೀರಿನ ಬೆಲ್ಲ ಮತ್ತು ತುಪ್ಪದಿಂದ ತಯಾರಿಸಿದ ತಿನಿಸು ಪ್ರಸಾದವಾಗುತ್ತದೆ. ಹಿರಿಯ ಮುತ್ತೈದೆಯರಿಗೆ ಬಾಗಿನ, ಅರಸಿನ ಕುಂಕುಮ ಹಚ್ಚಿ ದಾನ-ಧರ್ಮ ಮಾಡುವುದು ಊಟ ಹಾಕಿಸುವುದು ಶ್ರೇಷ್ಠವೆಂದು ಎಲ್ಲರ ನಂಬಿಕೆ. ಕೇವಲ ಮಹಾಲಕ್ಷ್ಮಿಯನ್ನು ಮಾತ್ರ ಆರಾಧಿಸುವುದು ಶ್ರೀಮನ್ನಾರಾಯಣನಿಗೆ ಮುನಿಸಾಗದೇ? ಆದ್ದರಿಂದ ಈರ್ವರನ್ನು ಆರಾಧಿಸೋಣ. ಸಮಾಜ, ಕುಟುಂಬವು ಒಂದಾಗಿ ಮನೆ ದೇವರ ಕೋಣೆ, ದೇವಾಲಯದಲ್ಲಿ,ಸಂಘ-ಸಂಸ್ಥೆಗಳ ಭವನದಲ್ಲಿ ಖಾಸಗಿ ಯಾ ಸಾರ್ವಜನಿಕವಾಗಿ ಆರಾಧನೆ ಮಾಡುತ್ತ ಸಹ ಜೀವನದಲ್ಲಿ ಆಧ್ಯಾತ್ಮಿಕ ಲೋಕದಲ್ಲಿ ಒಂದು ಸದಾವಕಾಶವನ್ನು ಕಲ್ಪಿಸೋಣ.

- Advertisement -

Related news

error: Content is protected !!