Tuesday, April 16, 2024
spot_imgspot_img
spot_imgspot_img

ನವರಾತ್ರಿ ಹಬ್ಬ ಪ್ರತೀ ಮನೆ – ಮನಗಳನ್ನೂ ಶುದ್ದೀಕರಿಸಲಿ

- Advertisement -G L Acharya panikkar
- Advertisement -
driving

ಯಾ ದೇವಿ ಸರ್ವ ಭೂತೇಷು, ಮಾ ಶೈಲ ಪುತ್ರಿ ರೂಪೇಣ ಸಂಸ್ಥಿತಾ /
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ //

ಸಂಖ್ಯೆಗಳಲ್ಲಿ ದೊಡ್ಡದು ಒಂಬತ್ತು. ಅದಕ್ಕೆ ವಿಶೇಷ ಸ್ಥಾನಮಾನ ಕೂಡ ಇದೆ. ನವ ಎಂದು ಕರೆಸಿಕೊಳ್ಳುವ ಮೂಲಕ ಹೊಸತನದ ಹರಿಕಾರ ಎಂದೂ ಬಣ್ಣಿಸಬಹುದು. ನವಧಾನ್ಯ, ನವಗ್ರಹ, ನವರಸ, ನವಲಾಸ್ಯ, ನವರತ್ನ ಅಷ್ಟೇ ಏಕೆ ಮನುಷ್ಯನ ದೇಹದಲ್ಲಿಯೂ ನವ ರಂಧ್ರಗಳು ತುಂಬಿವೆ. ಒಂಬತ್ತು ನೆನಪಿಡಲು ಬಲು ಸೊಗಸು.

ಏನೇ ಇರಲಿ ಎಲ್ಲರ ನೆನಪುಗಳ ಮೂಟೆಯಲ್ಲಿ ಅಚ್ಚಳಿಯದೇ ಇರಬಲ್ಲ ಸಂಗತಿ ಎಂದರೆ ನವರಾತ್ರಿ ಹಬ್ಬ. ಹಿರಿಯರು ಕಿರಿಯರು ಯಾರೇ ಆಗಲಿ ಜಾತಿ ಮತ ಭೇದವಿಲ್ಲದೇ ಸೇರುವ ಸಡಗರವು ಈ ಹಬ್ಬದಲ್ಲಿದೆ. ಒಂಬತ್ತು ದಿನಗಳ ಸುದೀರ್ಘ ರಾತ್ರಿಗಳoದು ಒಂಬತ್ತು ವಿಧಗಳಲ್ಲಿ ಲೋಕಮಾತೆಯನ್ನು ಪೂಜಿಸುತ್ತ ಮನಸ್ಸಿನ ಸಫಲತೆ ಸಾಧಿಸುವುದೆಂದರೂ ತಪ್ಪಾಗಲಾರದು.

ನವ ದಿನಗಳoದು ಪ್ರತೀ ದಿನವೂ ಒಂದೊಂದು ರೂಪದಿಂದ ದೇವಿಯನ್ನು ಆರಾಧಿಸುವ ಪರಿಪಾಠ ಪುರಾಣಕಾಲದಿಂದಲೇ ಬಂದಂತಹ ಶ್ರದ್ದಾಕಾರ್ಯ ವೇ ಹೌದು. ನವ ದೇವಿಯರ ಬಗೆಗೆ ನಮ್ಮೊಳಗಿನ ಭಾವನೆಗೆ ದೈವಿಸ್ವರೂಪ ಹಚ್ಚುತ್ತ ಮನಸ್ಸನ್ನು ದುಷ್ಟ ಆಲೋಚನೆಗಳಿಂದ ದೂರವಿರಿಸಿಕೊಳ್ಳುವ ಮೂಲಕ ಭ್ರಾತ್ರಪ್ರೇಮ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಇನ್ನೊಬ್ಬರ ಬಗ್ಗೆ ಅಸೂಯೆ, ಮತ್ಸರ ಪಡದೇ ಲೋಕದಲ್ಲಿ ಒಂದಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಕಾಯಾ ವಾಚಾ ಮನಸಾ ಭೂಮಿ ತಾಯಿಯನ್ನು ನವದುರ್ಗೆಯರಂತೆ ಪರಿಗಣಿಸಿ ಬದುಕುವ ನಿಟ್ಟಿನಲ್ಲಿ ಎಲ್ಲರ ಚಿತ್ತ ಸ್ವಾಸ್ತ್ಯ ಅಡಗಿದೆ.

ನವರಾತ್ರಿಯ ಮೊದಲ ಮೂರು ದಿನಗಳು ತಮೋಗುಣ ಕಡಿಮೆಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳoದು ರಜೋಗುಣ ವೃದ್ಧಿಸಲು ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಕಡೆಯ ಮೂರು ದಿನಗಳಲ್ಲಿ ಸಾಧನೆಗಾಗಿ ಸತ್ವ ಗುಣಿ ಮಹಾ ಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.

ನವರಾತ್ರಿ ಹಬ್ಬ ಪ್ರಾರಂಭವಾಗಿದೆ . ಮೊದಲ ದಿನ ದೇವಿ ಶೈಲ ಪುತ್ರಿಯಾಗಿ ಎಲ್ಲರಿಗೂ ಅನುಗ್ರಹ ನೀಡುತ್ತಾಳೆ. ಶೈಲಪುತ್ರಿ ಆರಾಧನೆಯಿಂದ ಸಾಧಕನಿಗೆ ಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿಯನ್ನು ಪಡೆಯಬಹುದು. ನವ ಎಂದರೆ 9. 9 ರಾತ್ರಿ ಆಚರಿಸುವ ಪ್ರಮುಖ ಹಬ್ಬ ನವರಾತ್ರಿಯೇ ಆಗಿದೆ. ಶೈಲಪುತ್ರಿ ಪರ್ವತಗಳ ತಾಯಿ. ಹಳದಿ ಬಣ್ಣದ ಪ್ರತಿನಿಧಿಯಾಗಿ ನಿಂತಿದ್ದಾಳೆ. ಈಕೆ ಪರಿಸರದ ತಾಯಿ ಶಕ್ತಿ ಸ್ವರೂಪಿಣಿ. ಅಲ್ಲದೆ ಹಳದಿ ಉಜ್ವಲ, ಖುಷಿ, ಉತ್ಸಾಹದ ಸಂಕೇತ. ಹಾಗೆಯೇ ಚಾಲನ ಶಕ್ತಿಯೂ ಹೌದು. ಅದಕ್ಕೂ ಮೊದಲು ವಿಘ್ನ ನಿವಾರಕ ಗಣೇಶನನ್ನು ಪೂಜಿಸುವುದು.

ಶೈಲ ಪುತ್ರಿ:
ಶೈಲಪುತ್ರಿದೇವಿಗೆ ಮಲ್ಲಿಗೆ ಎಂದರೆ ಅಚ್ಚುಮೆಚ್ಚು. ಹಾಗೂ ಶುಭ್ರತೆಯ ಸಂಕೇತವೂ ಹೌದು. ಮೊದಲ ದಿನವೇ ಆಂತರ್ಯವನ್ನು ಶುಭ್ರವಾಗಿರಿಸುವುದು ಇದರ ಮೂಲ ಉದ್ದೇಶ. ದೇವಿಗೆ ಬಿಳಿಬಣ್ಣದ ಆಹಾರ ಅಥವಾ ಖೀರು ತಯಾರಿಸುತ್ತಾರೆ. ನವರಾತ್ರಿಯ ಒಂಬತ್ತು ದಿನಗಳಲ್ಲೂ ವ್ರತವನ್ನು ಪಾಲಿಸುವವರು ಅನೇಕರಿದ್ದಾರೆ.

ಬ್ರಹ್ಮಚಾರಿಣಿ:
ಎರಡನೇ ದಿನದ ಆರಾಧನೆಯಾಗಿ ಬ್ರಹ್ಮಚಾರಿಣಿ ದೇವಿ ಆಧ್ಯಾತ್ಮಿಕ ಜ್ಞಾನ ನೀಡುವ ಮೂಲಕ ಇಂದ್ರಿಯ ನಿಗ್ರಹ ಶಕ್ತಿ ಒದಗಿಸುತ್ತಾಳೆ. ಪುರಾಣದ ಉಲ್ಲೇಖಗಳ ಪ್ರಕಾರ ಪಾರ್ವತಿ ತಪಸ್ಸು ಮಾಡಲು ವರ್ಧಂತ ಬೆಟ್ಟಕ್ಕೆ ಹೋಗುತ್ತಾಳೆ. ಅಲ್ಲಿ ಶಿವನು ಆಕೆಯನ್ನು ಸಂಧಿಸುತ್ತಾನೆ. ಹಸಿರು ಬಣ್ಣದಿಂದ ಕಂಗೊಳಿಸುವ ಈ ದೇವಿ ಬೆಳವಣಿಗೆ, ಪ್ರಕೃತಿ, ಶಕ್ತಿ ಹಾಗೂ ಪರಿಸರದ ಸಂಕೇತವಾಗಿದ್ದಾಳೆ.

ಚಂದ್ರಘಂಟಾ:
ಮೂರನೇ ದಿನದoದು ಚಂದ್ರಘಂಟಾ ದೇವಿಯ ರೂಪದಲ್ಲಿ ಪೂಜಿಸಲ್ಪಡುವ ಈಕೆ ಬೂದು ಬಣ್ಣದಿಂದ ಆಕರ್ಷಿತಳಾಗುತ್ತಾಳೆ. ಅಲ್ಲದೇ ತಾಯಿಯು ಅರ್ಧಚಂದ್ರಾಕೃತಿ ತಿಲಕ ಹಣೆಯಲ್ಲಿರಿಸಿ ರಾರಾಜಿಸುತ್ತಾಳೆ. ಬೂದು ಬಣ್ಣ ಮನಸ್ಸಿನ ಭಾವನೆಗಳ ಸಂಕೇತವೂ ಹೌದು. ಮನಸ್ಸಿನ ಕೆಟ್ಟ ವಿಷಯಗಳನ್ನು ತೊಡೆದುಹಾಕುವ ರೂಪವು ಚಂದ್ರಘಂಟಾದೇವಿಯದು.

ಕೂಷ್ಮಾಂಡ:
ನವರಾತ್ರಿಯ 4 ನೇ ದಿನ ಕೂಷ್ಮಾoಡ ದೇವಿಗೆ ಮೀಸಲು. ಪ್ರಕಾಶಮಾನವಾದ ನಗುವು ಸೂರ್ಯನಿಗೆ ಭೂಮಿಯನ್ನು ಬೆಳಗುವ ಶಕ್ತಿ ನೀಡುತ್ತದೆ. ಸೂರ್ಯ ಜೀವಂತವಾಗಿರುವಂತೆ ಕೂಷ್ಮಾಂಡ ತಾಯಿ ನೋಡಿಕೊಳ್ಳುವಳೆoದು ಪುರಾಣಗಳು ತಿಳಿಸುತ್ತವೆ. ಕೇಸರಿಬಣ್ಣ ಪ್ರಿಯಳಾದ ಕೂಷ್ಮಾoಡ ದೇವಿ ಖುಷಿ ಮತ್ತು ಶಕ್ತಿ ರೂಪಗಳ ಸಂಕೇತವಾಗಿ ಪೂಜಿಸಲ್ಪಡುತ್ತಾಳೆ.

ಸ್ಕಂದ ಮಾತೆ:
ಸ್ಕಂದ ಅಥವಾ ಕಾರ್ತಿಕೇಯನ ತಾಯಿ ಸ್ಕಂದಮಾತೆ. ಯುದ್ಧದ ಸಮಯದಲ್ಲಿ ಪೂಜನೀಯ ಳಾಗುವ ದೇವಿ ಈಕೆ. ತೊಡೆಯ ಮೇಲೆ ಸ್ಕಂದನನ್ನು ಕುಳ್ಳಿರಿಸಿದ ಭಂಗಿ ತಾಯಿ-ಮಗುವಿನ ಪವಿತ್ರ ಪ್ರೇಮ ಸಂಕೇತವೂ ಆಗಿದೆ. ಶಾಂತಿ ಪಾವಿತ್ರ್ಯತೆ ಹಾಗೂ ದೈವಭಕ್ತಿಯನ್ನು ಸೂಚಿಸುವುದರಿಂದ ಶ್ವೇತವರ್ಣಿಕೆಯಾಗಿ ಕಾಣಿಸಿಕೊಳ್ಳುತ್ತಾಳೆ.

ಕಾತ್ಯಾಯನಿ:
ಉಗ್ರ ಸ್ವರೂಪಿಣಿಯ ಅವತಾರವಾಗಿ ದೇವಿಯು ಪೂಜಿಸುವ ರೂಪವೇ ಕಾತ್ಯಾಯನಿ ರೂಪ. ದೇವತೆಗಳ ಕೋಪದ ಕಾರಣದಿಂದ ಹುಟ್ಟಿದಾಕೆ ಎಂದು ಪ್ರತೀತಿ.ಈಕೆ ಕೆಂಪು ವರ್ಣ ಪ್ರಿಯೆ. ಹಾಗಾಗಿ ಕೋಪಕ್ಕೆ ಇನ್ನೊಂದು ಹೆಸರು ಕೆಂಪು. ಕ್ರಿಯೆ ಮತ್ತು ಸಿಟ್ಟಿನ ಸಂಕೇತವೂ ಹೌದು. ಋಣಾತ್ಮಕ ಅಂಶಗಳನ್ನು ತೊಡೆದುಹಾಕಲು ಕಾತ್ಯಾಯನಿ ರೂಪವನ್ನು ಪೂಜಿಸಬೇಕು.

ಕಾಳಿ:
ನವರಾತ್ರಿ ಹಬ್ಬದ ಸಪ್ತ ದಿನವೇ ಕಾಳರಾತ್ರಿ ಸ್ವರೂಪಿಗೆ ಅಂದರೆ ಕಾಳಿ ದೇವಿಗೆ ಸಮರ್ಪಿತ. ಕಾಳಿಯ ಸ್ವರೂಪ ಉಗ್ರರೂಪದಿಂದ ನೀಲಿಯಾಗಿ ಇರುವ ಕಾರಣ ಈಕೆ ನೀಲಲೋಚನೆ. ನೀಲಿ ಬಣ್ಣವು ಶಕ್ತಿಯ ಪ್ರತಿನಿಧಿತ್ವವಾಗಿದೆ. ಕಾಳರಾತ್ರಿಯ ಬೀಜ ಮಂತ್ರ ಪಠಿಸಿ ಏಳನೆಯ ದಿನ ವಿಜಯಿಗಳಾಗಿ ಆನಂದದಿಂದ ಇರಬಹುದು.

ಮಹಾಗೌರಿ:
ನವರಾತ್ರಿಯ ಅಷ್ಟಮ ದಿನ ತಾಯಿ ಮಹಾಗೌರಿಗೆ ಮೀಸಲು. ಮನುಷ್ಯನ ಅಂದುಕೊಳ್ಳುವoತಹ ಆಸೆಗಳನ್ನು ನೆರವೇರಿಸುವಾಕೆ. ಆದರೆ ಇಲ್ಲಿ ಲೋಕೋಪಕಾರದ ಆದ್ಯತೆಯೂ ಇದೆ. ಲೋಕಕಂಟಕ ಎಂದಾದರೆ ಬಗೆಹರಿಸಲು ಅಸಾಧ್ಯವೇ! ಪುರಾಣಗಳು ಸತ್ಯಧರ್ಮದ ಉದ್ದೇಶಕ್ಕೆ ಪ್ರೇರಕವಾದವುಗಳು. ಹಾಗಾಗಿ ಈಕೆ ತಿಳಿ ಕೆಂಪು ಬಣ್ಣದಿಂದ ಕೂಡಿದ್ದು ನಂಬಿಕೆ ಮತ್ತು ಹೊಸ ದೃಷ್ಟಿಕೋನಗಳ ಸಂಕೇತವೂ ಆಗಿದ್ದಾಳೆ. ಹಾಗಾಗಿ ಆಂತರಿಕ ಶಾಂತಿ ಸಂತಸಕ್ಕೆ ಮಹಾಗೌರಿಯನ್ನು ಪೂಜಿಸಬೇಕು.

ಸಿದ್ಧಿದಾತ್ರಿ:
ನವರಾತ್ರಿಯ ಒಂಬತ್ತನೆಯ ಹಾಗೂ ಕೊನೆಯ ದಿನ ಪೂಜಿಸುವ ಸಿದ್ಧಿದಾತ್ರಿ ಜ್ಞಾನವನ್ನು ಕರುಣಿಸುವಾಕೆ. ಸಿದ್ಧಿದಾತ್ರಿ ಮಾತೆ ನಿಶ್ಚಿತವಾದ ಗುರಿಯನ್ನಿಟ್ಟು ಕೊಂಡವರಿಗೆ ದಾರಿದೀಪವಾಗಿರುತ್ತಾಳೆ. ನೇರಳೆ ಬಣ್ಣದಿಂದ ಪೂಜಿಸುವ ದೇವಿಯು ಎಲ್ಲರ ಆಕಾಂಕ್ಷೆಗಳ ಹಾಗೂ ಶಕ್ತಿಯ ಕೇಂದ್ರ ಬಿಂದುವಾಗಿರುತ್ತಾಳೆ.

ಜೀವನದಲ್ಲಿ ಕಷ್ಟಗಳು ಬರುತ್ತವೆ ಹೋಗುತ್ತವೆ. ಬಂದು ಹೋಗುವ ನಡುವೆ ಹೇಗೆ ವರ್ತಿಸುತ್ತೇವೆ ಅನ್ನುವುದು ಮುಖ್ಯವಾಗುತ್ತದೆ. ಒಬ್ಬರು ಏನೋ ಅಂದ್ರು ಅಂತ ಬೇಜಾರು ಮಾಡೋ ಹಾಗಿಲ್ಲ. ಮಾಡಿಕೊಂಡರೆ ಕೇಳುವವರೂ ಇಲ್ಲ. ಅಂಥ ಕಾಲ ಘಟ್ಟದಲ್ಲಿದ್ದೇವೆ . ಮದುವೆ ಮನೆಯಲ್ಲಿ ಉಂಡವನೇ ಜಾಣ ಅನ್ನೋ ಗಾದೆಯಂತೆ ಇದು. ಅದೂ ಅಲ್ಲದೇ ಬೇಜಾರು, ಮಾತು ಇವೆಲ್ಲಾ ಆಂತರ್ಯದ ಭಾವನೆಗಳ ಮೇಲೆ ಅವಲಂಬಿತವಾಗಿರುತ್ತವೆ.

ಹಾಗಾಗಿ ಮನಸ್ಸು ಹಾಗೂ ಭಾವನೆಗಳು ಋತುಮಾನಕ್ಕನುಗುಣವಾಗಿ ಪ್ರಕೃತಿ ಹೇಗೆ ಬದಲಾಗುತ್ತದೋ ಹಾಗೇ ಆಯಾಯ ಕಾಲಕ್ಕನುಗುಣವಾಗಿ ಬದಲಾಗುತ್ತಿರುತ್ತದೆ. ಮಾನವನ ನಡವಳಿಕೆ ಮನುಷ್ಯತ್ವವೂ ಕೆಲವೊಮ್ಮೆ ಸುಪ್ತಾವಸ್ಥೆಯಲ್ಲಿ ಕಮರಿರುತ್ತದೆ. ಅದಕ್ಕೆ ಸರಿಯಾದ ದಾರಿ ದೊರಕಿದಾಗ ಅಥವಾ ಬೆಳಕಿನ ರೇಖೆ ಚಿಗುರಿನ ಸಂದೇಶವನ್ನು ಬೀರಲಾರಂಭಿಸುತ್ತದೆ.

ಆ ಚಿಗುರು ನವಿರಾಗಿ ಬೆಳೆಯುತ್ತ ಹತ್ತು ಹಲವು ಕನಸುಗಳೊಂದಿಗೆ ಸೇರಿಕೊಂಡು ಗುರಿಯತ್ತ ಸಾಗುವ ಮೂಲಕ ಬದುಕಿನ ಸಾರ್ಥಕ್ಯ ಕಾಣುವಂತಾಗುತ್ತದೆ. ಭಾವನೆಗಳು ಆಂತರ್ಯದಲ್ಲಿದ್ದಾಗ ಚೆನ್ನಾಗಿರುತ್ತವೆ. ತಿಂದುಂಡು ಕೊಬ್ಬಿದ ಗೂಳಿ ಹಂಗೆ ಅಂತಾರಲ್ಲ. ಕಾದಾಡುವಾಗಲೇ ಅದರ ಪರಿಣಾಮ ಅನುಭವಕ್ಕೆ ಮಾತ್ರ ಸಿಗುವುದು. ಇಲ್ಲದಿದ್ದರೆ ಬರಿಯ ಉತ್ಪ್ರೇಕ್ಷೆ ಅಂದರೂ ಒಪ್ಪಿಕೊಳ್ಳಬೇಕು.ಎಲ್ಲರೂ ಸಡಗರ ಸಂಭ್ರಮದಿಂದ ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ನವರಾತ್ರಿ ಹಬ್ಬವನ್ನು ಸರಳವಾಗಿ ಆಚರಿಸುವ. ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯಗಳು.

✍️ ಮಲ್ಲಿಕಾ ಜೆ. ರೈ ಪುತ್ತೂರು ಅಂಕಣಕಾರರು

- Advertisement -

Related news

error: Content is protected !!