Sunday, April 28, 2024
spot_imgspot_img
spot_imgspot_img

ಪುತ್ತೂರು: ಹನಿಟ್ರ್ಯಾಪ್ ಗೆ ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವಕ; ಏಳು ಮಂದಿಯ ವಿರುದ್ಧ ದೂರು ದಾಖಲು, ಯುವತಿಯ ಬಂಧನ

- Advertisement -G L Acharya panikkar
- Advertisement -

ಪುತ್ತೂರು: ಫೇಸ್ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಬಳಿಕ ಮೊಬೈಲ್ ನಂಬರ್ ಪಡೆದು ಅಶ್ಲೀಲ ವರ್ತನೆಯ ವಿಡಿಯೋ ರವಾನೆ ಮಾಡಿ ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವುದಾಗಿ ನೆಟ್ಟಣಿಗೆಮುಡ್ನೂರು ನಿವಾಸಿ ಯುವಕನೋರ್ವ 7 ಮಂದಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಈ ಪೈಕಿ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ (25)ಎಂಬವರು ಹನಿಟ್ರ್ಯಾಪ್‌ಗೆ ಬಲಿಯಾಗಿ 30 ಲಕ್ಷ ರೂ. ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದವರು.

ತನ್ನ ಮೊಬೈಲ್ ನಂಬರಿಗೆ ಸುಮಾರು 5 ತಿಂಗಳ ಹಿಂದೆ ಯಾವುದೋ ಒಂದು ನಂಬರಿಂದ ಮೆಸೇಜ್ ಬಂದಿದ್ದು, ಯಾರು ಎಂದು ಕೇಳಿದಾಗ ರಾಂಗ್ ನಂಬರ್ ಎಂದು ಮೆಸೇಜ್ ಬಂದಿತ್ತು. ಅದಾದ ಸುಮಾರು 12 ದಿನಗಳ ಬಳಿಕ ಅದೇ ಮೊಬೈಲ್ ನಂಬರಿನಿಂದ ಮತ್ತೆ ಮೆಸೇಜ್ ಬಂದಿತ್ತು ನಾಸೀರ್ ಕೂಡ ಮರು ಮೆಸೇಜ್ ಮಾಡಿದ್ದಾರೆ. ಕೆಲವು ಗಂಟೆಗಳ ಬಳಿಕ ಆ ನಂಬರಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ಹುಡುಗಿಯೊಬ್ಬಳು ‘ನಾನು ಮಂಗಳೂರಿನ ತನೀಶಾ’ ಎಂಬುದಾಗಿ ಹಿಂದಿ ಭಾಷೆಯಲ್ಲಿ ತಿಳಿಸಿದ್ದು, ಬಳಿಕ ಅದೇ ರೀತಿ ಆವಾಗವಾಗ ಸಂಪರ್ಕಿಸುತ್ತಿದ್ದರು.

ಸುಮಾರು 2 ತಿಂಗಳ ಬಳಿಕ ಹುಡುಗಿಯು ಕರೆ ಮಾಡಿ ತನ್ನನ್ನು ಭೇಟಿಯಾಗುವಂತೆ ತಿಳಿಸಿದ್ದು, ಅದರಂತೆ ಮಂಗಳೂರಿನಲ್ಲಿ ತನೀಶಾ ಎಂದು ಹೇಳಿಕೊಂಡಿದ್ದ ಹುಡುಗಿಯನ್ನು ನಾಸಿರ್ ಭೇಟಿಯಾಗಿದ್ದು, ಆ ವೇಳೆ ತನ್ನ ಊರು ಕಾರ್ಕಳ ಎಂಬುದಾಗಿ ತಿಳಿಸಿರುತ್ತಾಳೆ. ಇದಾದ ಸುಮಾರು 3 ದಿನದ ಬಳಿಕ ಆಕೆ ನಾಸಿರ್ ಗೆ ವೀಡಿಯೋ ಕಾಲ್ ಮಾಡುವಂತೆ ಹೇಳಿದ್ದು, ವೀಡಿಯೋ ಕಾಲ್ ಮಾಡಿದಾಗ ಬಟ್ಟೆ ಬರೆಗಳನ್ನು ಬಿಚ್ಚಿ ನಗ್ನ ದೇಹವನ್ನು ತೋರಿಸುವಂತೆ ಒತ್ತಾಯ ಮಾಡಿದ್ದಾಳೆ. ನಿರಾಕರಿಸಿದರೂ ಆಕೆ ಪದೇ ಪದೇ ಒತ್ತಾಯ ಮಾಡಿದಾಗ ನಾಸಿರ್ ತನ್ನ ನಗ್ನ ದೇಹವನ್ನು ಅವಳಿಗೆ ತೋರಿಸಿ ಅವಳು ಹೇಳಿದಂತೆ ಮಾಡಿ ತೋರಿಸಿದ್ದರು.

ಆ ಬಳಿಕ ತನೀಶಾ ಮೊಬೈಲಿನಲ್ಲಿ ನಾಸಿರ್ ನ ಕರೆ ಮತ್ತು ವಾಟ್ಸಾಪ್ ಮೆಸೇಜನ್ನು ಬ್ಲಾಕ್ ಮಾಡಿದ್ದು, ಮೊಬೈಲ್ ಕರೆ ಮಾಡಿದರೂ ಕರೆಯನ್ನು ಅವಳು ಸ್ವೀಕರಿಸುತ್ತಿರಲಿಲ್ಲ. ಇದಾದ ಬಳಿಕ ಸುಮಾರು 3 ದಿನದ ಬಳಿಕ ಕೊಟ್ಯಾಡಿಯ ಮಹಮ್ಮದ್ ಕುಂಞ ಎಂಬಾತ ಕರೆ ಮಾಡಿ ‘ಅರ್ಜೆಂಟಾಗಿ ನಿನ್ನಲ್ಲಿ ಮಾತನಾಡಲಿದೆ. ನೀನು ಕೊಟ್ಯಾಡಿಗೆ ಬಾ” ಎಂದು ಹೇಳಿದ್ದನು. ಮರುದಿನ ನಾಸಿರ್ ಕೊಟ್ಯಾಡಿಯ ಬಸ್ ಸ್ಟ್ಯಾಂಡ್ ಬಳಿಗೆ ಹೋದಾಗ ಕೊಟ್ಯಾಡಿಯ ಮಹಮ್ಮದ್ ಕುಂಞ ಮತ್ತು ಶಾಫಿ ಎಂಬವರು ಇದ್ದು ಆ ಪೈಕಿ ಶಾಫಿಯು, ಮಂಗಳೂರಿನಲ್ಲಿ ನನ್ನನ್ನು ಭೇಟಿಯಾಗಿದ್ದ ತನೀಶಾ ಎಂಬವಳ ಫೊಟೋವನ್ನು ಮತ್ತು ಆತನ ಮೊಬೈಲಿನಲ್ಲಿ ತನೀಶಾ ಜೊತೆ ತಾನು ತೆಗೆದುಕೊಂಡಿದ್ದ ಸೆಲ್ಫಿ ಫೊಟೋವನ್ನು ತೋರಿಸಿದ್ದನು.

ಮಹಮ್ಮದ್ ಕುಂಞಯವರು ‘ಫೊಟೋದಲ್ಲಿರುವ ಹುಡುಗಿಯು ಶಾಫಿಯ ಗೆಳೆಯನಾದ ಸವಣೂರಿನ ಆಝರ್ ಎಂಬಾತನ ಗೆಳೆಯ ಸವಣೂರಿನ ಸನು ಎಂಬವನ ತಂಗಿಯಾಗಿದ್ದು, ನೀನು ಅವಳಲ್ಲಿ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದೀಯ, ಆ ಹುಡುಗಿಯ ಕಡೆಯವರು ನಿನ್ನನ್ನು ಹುಡುಕುತ್ತಿದ್ದಾರೆ, ನಾವು ಅವರಲ್ಲಿ ಮಾತುಕತೆ ನಡೆಸಿ, ಈ ವಿಚಾರವನ್ನು ಮುಗಿಸುವ, ನಾಳೆ ಕಂಬಳಬೆಟ್ಟು ಎಂಬಲ್ಲಿಗೆ ಹೋಗುವ, ಅಲ್ಲಿಗೆ ಹುಡುಗಿಯ ಕಡೆಯವರು ಬರುತ್ತಾರೆ ‘ ಎಂದು ಹೇಳಿ ಮರುದಿನ ನಾಸಿರ್ ನನ್ನು ಬರುವಂತೆ ತಿಳಿಸಿದ್ದರು.

ಅದರಂತೆ ಮಹಮ್ಮದ್ ಕುಂಞ ಮತ್ತು ಶಾಫಿಯವರೊಂದಿಗೆ ಪುತ್ತೂರಿಗೆ ಬಂದಾಗ ಇಲ್ಲಿನ ಹೊಟೇಲ್ ಬಳಿಯ ಸರ್ಕಲ್‌ನಲ್ಲಿ ನಿಂತಿದ್ದ ಸವಣೂರಿನ ಅಝರ್‌ನನ್ನು ಮಹಮ್ಮದ್ ಕುಂಞ ಪರಿಚಯಿಸಿ ಕಾರಿನಲ್ಲಿ ಕುಳ್ಳಿರಿಸಿಕೊಂಡಿರುತ್ತಾರೆ. ಬಳಿಕ ಅಝರ್ ಹೇಳಿದಂತೆ ವಿಟ್ಲದ ಕಂಬಳಬೆಟ್ಟು ಎಂಬಲ್ಲಿಗೆ ತಲುಪಿದಾಗ ಅಲ್ಲಿ ಕಾರೊಂದರಲ್ಲಿ, ಕುಳಿತುಕೊಂಡಿದ್ದ ಸಯೀದ್‌ಮೋನು ಮತ್ತು ನಾಸಿರ್ ಎಂಬವರ ಪೈಕಿ ಒಬ್ಬಾತ ನಾಸಿರ್ ನಲ್ಲಿ ನೀನು ನನ್ನ ತಂಗಿಯನ್ನು ಪ್ರೀತಿಸುವ ನಾಟಕವಾಡಿ ಮೋಸ ಮಾಡಿದ್ದೀಯ, ನನ್ನಲ್ಲಿ ನಿನ್ನ ವೀಡಿಯೋ ಎಲ್ಲಾ ಇದೆ ಎಂದು ಹೇಳಿ, ಸಯೀದ್ ಮೋನು ಆತನ ಮೊಬೈಲಿನಲ್ಲಿದ್ದ ವೀಡಿಯೋವೊಂದನ್ನು ತೋರಿಸಿದ್ದು, ಅದು ಈ ಹಿಂದೆ ತನೀಶಾ ಎಂದು ಪರಿಚಯಿಸಿಕೊಂಡಿದ್ದ ಹುಡುಗಿಯ ಜೊತೆ ನಾಸಿರ್ ನಗ್ನವಾಗಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದ ವೀಡಿಯೋ ಆಗಿತ್ತು.

ಬಳಿಕ ಸಯೀದ್‌ಮೋನು ‘ನೀನು ನಮಗೆ ಎಪ್ಪತ್ತು ಲಕ್ಷ ರೂಪಾಯಿ ಕೊಟ್ಟರೆ ಈ ವಿಷಯವನ್ನು ಇಲ್ಲಿಗೇ ಮುಗಿಸುವ, ಇಲ್ಲದಿದ್ದರೆ ಈ ವೀಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡುತ್ತೇವೆ, ಅಲ್ಲದೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ನೀನು ಏನು ಮಾಡುತ್ತಿ ಅಂತ ನಿನ್ನ ಜೊತೆಗೆ ಬಂದಿರುವ ಶಾಫಿ ಮತ್ತು ಮಹಮ್ಮದ್ ಕುಂಞಯವರಲ್ಲಿ ನಾಳೆಯೊಳಗೆ ತಿಳಿಸಬೇಕು’ ಎಂದು ಹೇಳಿ ನಾಸಿರ್ ನ ಮೊಬೈಲ್ ಕಸಿದು ಮೊಬೈಲ್ ನಲ್ಲಿದ್ದ ಹುಡುಗಿಯ ನಂಬರ್ ಡಿಲೀಟ್ ಮಾಡಿದ್ದಾನೆ.

ಮರುದಿನ ಕಂಬಳಬೆಟ್ಟುವಿಗೆ ಬಂದ ನಾಸಿರ್ ನನ್ನಲ್ಲಿ ಎಪ್ಪತ್ತು ಲಕ್ಷ ಇಲ್ಲ ಎಂದಾಗ ಮಹಮ್ಮದ್ ಕುಂಞಿ ಮತ್ತು ಅಜರ್ ನಾಸಿರ್ ನನ್ನು ಪಕ್ಕಕ್ಕೆ ಕರೆದು ಮೂವತ್ತು ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಿಕೋ, ಇಲ್ಲದಿದ್ದರೆ ಅವರು ನಿನ್ನನ್ನ ಸುಮ್ಮನೆ ಬಿಡುವುದಿಲ್ಲ” ಎಂದು ಹೇಳಿದ್ದು, ತನ್ನಲ್ಲಿ ಅಷ್ಟೊಂದು ಹಣವಿಲ್ಲವೆಂದು ಹೇಳಿದರೂ ಕೂಡಾ ಮರುದಿನವೇ ಮೂವತ್ತು ಲಕ್ಷ ರೂಪಾಯಿಯನ್ನು ಕೊಡುವಂತೆ ಅವರೆಲ್ಲರೂ ಸತಾಯಿಸಿರುವುದರಿಂದ ಬೇರೆ ದಾರಿ ಕಾಣದೇ ಹೇಗಾದರೂ ಮಾಡಿ ಮೂವತ್ತು ಲಕ್ಷ ರೂಪಾಯಿಯನ್ನು ಅವರಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

ಮರುದಿನ ನಾಸಿರ್ ತಾನು ಮತ್ತು ಅಣ್ಣಂದಿರು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಇಪ್ಪತ್ತೈದು ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಮರುದಿನ ಶಾಫಿ ಮಹಮ್ಮದ್ ಕುಂಞ ಮತ್ತು ಅಜರ್ ಎಂಬವರ ಜೊತೆಯಲ್ಲಿ ಕಂಬಳಬೆಟ್ಟಿಗೆ ತೆರಳಿ ಅಲ್ಲಿ ಸಯೀದ್‌ಮೋನ್‌ಗೆ ಇಪ್ಪತ್ತೈದು ಲಕ್ಷ ರೂಪಾಯಿಯನ್ನು ನೀಡಿದ್ದರು. ಉಳಿದ ಐದು ಲಕ್ಷ 5 ದಿನದಲ್ಲಿ ನೀಡಬೇಕೆಂದು ಬೆದರಿಕೆ ಹಾಕಿದ್ದಾರೆ. ಐದು ದಿನದ ಬಳಿಕ 5 ಲಕ್ಷ ರೂಪಾಯಿಯನ್ನೂ ನಾಸಿರ್ ನೀಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ.

ನೆಟ್ಟಣಿಗೆಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್,ಸಯೀದ್‌ಮೋನು, ನಾಸಿರ್ ಮತ್ತು ಕಾರ್ಕಳದವಳೆಂದು ಪರಿಚಯಿಸಿಕೊಂಡಿದ್ದ ತನೀಶಾ ಎಂಬವರ ವಿರುದ್ಧ ದೂರು ನೀಡಿದ್ದಾರೆ.

ತನಿಖೆ ಕೈಗೆತ್ತಿಗೊಂಡ ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದ ಪೊಲೀಸರು ಪ್ರಕರಣದ ಆರೋಪಿಗಳ ಪೈಕಿ ತನೀಶಾ ಎಂಬಾಕೆಯನ್ನು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

- Advertisement -

Related news

error: Content is protected !!