
ಬಂಟ್ವಾಳ: ಹಿರಿಯ ಪ್ರಾಧ್ಯಾಪಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಹಾಗು ಮಾನಸಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಕಾಲೇಜಿನ ಸಂಚಾಲಕ ಹಾಗು ಇಬ್ಬರು ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವ ಸಲುವಾಗಿ ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಎಸ್.ವಿ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಇಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.


ಈ ಹಿಂದೆ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದ್ದು , ಇದಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.ಸದ್ಯ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಈತ ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಕಾಲೇಜಿನ ಪ್ರಾಂಶುಪಾಲರನ್ನು ಛೂ ಬಿಟ್ಟು ವಿನಾಕಾರಣ ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ದೂರಿದ್ದಾರೆ.


ಇದೂ ಅಲ್ಲದೆ ಮಹಿಳಾ ದೌರ್ಜನ್ಯ ಪ್ರಕರಣ ಹೊತ್ತುಕೊಂಡ ಆರೋಪಿಗಳು ಕಾಲೇಜು ಆವರಣದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದದ್ದನ್ನು ಗಮನಿಸಿ ಅದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರೆಸಿದ ಪ್ರಾಂಶುಪಾಲರು ಆ ವಿದ್ಯಾರ್ಥಿಗಳಿಗೆ ಈ ಕುರಿತಾಗಿ ಈ ವಿಚಾರದ ಕುರಿತು ಏನಾದರೂ ಪ್ರಶ್ನಿಸಿದರೆ ತಮ್ಮನ್ನು ಈ ಕಾಲೇಜಿನಿಂದ ವರ್ಗಾವಣಾ ಪತ್ರ ನೀಡಿ ಹೊರದಬ್ಬುದಾಗಿ ಹಾಗೂ ನಿಮ್ಮ ಗುಣ-ನಡತೆಯ ದಾಖಲೆಯಲ್ಲಿ (BAD) ಕೆಟ್ಟ ನಡತೆ ಉಳ್ಳವರು ಎಂದು ನಮೋದಿಸುದಾಗಿ ಹೆದರಿಸಿರುತ್ತಾರೆ.ಹಾಗು ವಿದ್ಯಾರ್ಥಿಗಳ ನಡುವೆಯೇ ಎರಡು ಬಣಗಳನ್ನ ಸೃಷ್ಟಿಸಿ ಅವರುಗಳ ಒಗ್ಗಟ್ಟನ್ನು ಒಡೆಯುವ ಪ್ರಯತ್ನವನ್ನೂ ಮಾಡಿದ್ದಾರೆ ಆದ್ದರಿಂದ ಆರೋಪಿಗಳ ಕೈ ಗೊಂಬೆಯಾಗಿ ವರ್ತಿಸುತ್ತಿರುವ ಪ್ರಾಂಶುಪಾಲರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಇನ್ನಿತರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇವರ ನೇತೃತ್ವದಲ್ಲಿ ಹಾಗು ಕಾಲೇಜಿನ ನಾಯಕ ಉಪ ನಾಯಕ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಇವತ್ತು ತಮ್ಮ ತಮ್ಮ ತರಗತಿಗಳನ್ನು ಬಹಿಷ್ಕರಿಸಿ ಧರಣಿ ನಡೆಸಿದರು.


ಸ್ಥಳಕ್ಕೆ ಆಗಮಿಸಿದ ತಾಲೂಕಿನ ತಹಸೀಲ್ದಾರ್ ಹಾಗು ಸಹಾಯಕ ಜಂಟಿ ನಿರ್ದೇಶಕ ರು ಧರಣಿ ನಿರತ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು ಹಾಗು ಪ್ರತಿಭಟನೆ ಕೈ ಬಿಡುವಂತೆ ವಿದ್ಯಾರ್ಥಿಗಳ ಮನ ಒಲಿಸಿದರು.

ಸದ್ಯ ಧರಣಿಯನ್ನು ಕೈ ಬಿಟ್ಟಿರುವ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳು ಕೂಡಲೇ ಈಡೇರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನೂ ಕಠಿಣ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
