Monday, May 20, 2024
spot_imgspot_img
spot_imgspot_img

ಬೆಟ್ಟಂಪಾಡಿ: ಸರಗಳ್ಳರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

- Advertisement -G L Acharya panikkar
- Advertisement -

ಬೆಟ್ಟಂಪಾಡಿ: ತಿಂಗಳ ಹಿಂದೆ ಬೆಟ್ಟಂಪಾಡಿ ಪರಿಸರದಲ್ಲಿ ಹಾಡಹಗಲೇ ಮಹಿಳೆಯ ಕತ್ತಿನಿಂದ ಕರಿಮಣಿ ಸರ ಒಯ್ದ ಸರಗಳ್ಳರನ್ನು ಬೆಟ್ಟಂಪಾಡಿಯ ಯುವಕರೇ ಹೆಡೆಮುರಿ ಕಟ್ಟಿ ಸಾರ್ವಜನಿಕವಾಗಿ ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಯುವಕರ ಧೈರ್ಯ ಮತ್ತು ಸಾಹಸ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಇಂದು ಬೆಳಗ್ಗೆ ಮತ್ತೊಮ್ಮೆ ಕಳ್ಳತನಕ್ಕಾಗಿ ಹೊಂಚುಹಾಕುತ್ತಿದ್ದ ಕಳ್ಳರನ್ನು ಅನುಮಾನ ಬಂದ ಸ್ಥಳೀಯ ಯುವಕರು ಅಟ್ಟಾಡಿಸಿ ಹಿಡಿದಿದ್ದಾರೆ. ಬಳಿಕ ರೆಂಜ ಸರ್ಕಲ್ ಬಳಿ ಕಟ್ಟಿ ಹಾಕಿ ಸಾರ್ವಜನಿಕವಾಗಿ ಗೂಸಾ ನೀಡಿ ಇದೀಗ ಪೊಲೀಸರಿಗೊಪ್ಪಿಸಿದ್ದಾರೆ.

ಜೂನ್ 7 ರಂದು ಬೆಟ್ಟಂಪಾಡಿ ಕೋನಡ್ಕದ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಬುಲೆಟ್ ಬೈಕ್ ನಲ್ಲಿ ಬಂದಿದ್ದ ಅಪರಿಚಿತ ಇಬ್ಬರು ಮಹಿಳೆಯ ಕತ್ತಿಗೆ ಕೈ ಹಾಕಿ ಕರಿಮಣಿ ಸರ ಒಯ್ದಿದ್ದರು.

ಜು. 18 ರಂದು ಮತ್ತೆ ಇದೇ ಕಳ್ಳರು ಬೈಕ್‌ನಲ್ಲಿ ಬಂದಿದ್ದರೆನ್ನಲಾಗಿದೆ. ಸ್ಥಳೀಯ ಯುವಕರೂ ತಿಂಗಳ ಹಿಂದೆ ನಡೆದ ಸರಗಳ್ಳತನವನ್ನು ಮರೆತಿರಲಿಲ್ಲ. ಕಳ್ಳರ ಮೇಲೆ ಯುವಕರು ಹದ್ದಿನ ಕಣ್ಣೀಟಿದ್ದರು. ಬೈಕ್ ಬದಲಾಯಿಸಿದರೂ ಕಳ್ಳರ ಮುಖ ಪರಿಚಯ ಇಟ್ಟುಕೊಂಡಿದ್ದ ಸ್ಥಳೀಯರಿಗೆ ಅದೇ ಕಳ್ಳರು ಇವರೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ.

ಎಫ್‌ಝಡ್‌ ಬೈಕ್ ನಲ್ಲಿ ಅಪರಿಚಿತ ಮತ್ತು ಅನುಮಾನಾಸ್ಪದ ಇಬ್ಬರು ಪಾಣಾಜೆ ಕಡೆಯಿಂದ ಪುತ್ತೂರು ಕಡೆಗೆ ಚಲಿಸುತ್ತಿರುವುದನ್ನು ಗಮನಿಸಿ ಆರ್ಲಪದವು ಎಂಬಲ್ಲಿಂದ ರೆಂಜ ಬೆಟ್ಟಂಪಾಡಿ ಪರಿಸರದವರಿಗೆ ಸುಳಿವು ನೀಡಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಬೆಟ್ಟಂಪಾಡಿಯ ಯುವಕರು ಮಿತ್ತಡ್ಕ ಕೇಸರಿ ನಗರದಲ್ಲಿ ರಿಕ್ಷಾ ಅಡ್ಡ ಹಾಕಿ ನಿಲ್ಲಿಸಲು ಪ್ರಯತ್ನಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಅವರು ಪುತ್ತೂರು ಕಡೆಗೆ ಹೋಗಿದ್ದರು. ಯುವಕರ ನೆಟ್‌ವರ್ಕ್ ಇಲ್ಲಿ ಕ್ಷಣಾರ್ಧದಲ್ಲಿ ಮಿಂಚಿನ ರೀತಿಯಲ್ಲಿ ಕಾರ್ಯಾಚರಿಸಿತು. ಸಂಟ್ಯಾರ್ ನಲ್ಲಿ ಬೈಕ್‌ನ್ನು ಅಡ್ಡ ಹಾಕಲು ಪ್ರಯತ್ನಿಸಲಾಯಿತು.

ಆದರೆ ಅಲ್ಲಿಂದ ತಿರುಗಿ ಹೋದ ಕಳ್ಳರು ಚೆಲ್ಯಡ್ಕದಿಂದ ಗುಮ್ಮಟೆಗದ್ದೆ ದೇವಸ್ಯ ಮಾರ್ಗವಾಗಿ ಮತ್ತೆ ಪುತ್ತೂರಿಗೆ ಬಂದು ಸಂಟ್ಯಾರ್ ಮೂಲಕ ವಾಪಾಸಾಗಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು . ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ ಐ ಉದಯರವಿಯವರ ನೇತೃತ್ವದಲ್ಲಿ ಪೊಲೀಸರೂ ಕಳ್ಳರ ಹುಡುಕಾಟದಲ್ಲಿ ನಿರತರಾಗಿದ್ದರು. ಆದರೆ ಪುತ್ತೂರಿನಿಂದ ಸಂಟ್ಯಾರ್‌ ಮಾರ್ಗವಾಗಿ ವಾಪಸಾಗುತ್ತಿದ್ದಂತೆ ಕಳ್ಳರ ಪ್ಲ್ಯಾನ್ ಕಂಪ್ಲೀಟ್ ಕೈ ಕೊಟ್ಟಿತ್ತು. ಸಂಟ್ಯಾರ್ ನಲ್ಲಿ ಪಾಸಾದ ಬಗ್ಗೆ ಮತ್ತೆ ಬೆಟ್ಟಂಪಾಡಿಯ ಯುವಕರಿಗೆ ಮಾಹಿತಿ ನೀಡಲಾಯಿತು. ರೆಂಜ ಜಂಕ್ಷನ್ ನಲ್ಲಿ ಯುವಕರು ಪೊಲೀಸ್ ಬ್ಯಾರಿಕೇಡ್ ಎಳೆದು ಅಡ್ಡ ಹಾಕಿದರು. ಬ್ಯಾರಿಕೇಡ್ ಗೆ ಗುದ್ದಿ ಮಗುಚಿಬಿದ್ದ ಬೈಕ್ ನಿಂದ ಎಗರಿದ ಕಳ್ಳರು ಸ್ಥಳೀಯ ತೋಟದಲ್ಲಿ ಓಡಿ ಪರಾರಿಯಾಗಲು ಯತ್ನಿ ಸಿದ್ದರು. ಬೆಂಬಿಡದ ಯುವಕರು ಅಟ್ಟಾಡಿಸಿ ಇಬ್ಬರನ್ನು ಹಿಡಿದು ಕಟ್ಟಿ ಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಪ್ಪಿಸಿಕೊಂಡು ಪರಾರಿಯಾಗಲೆತ್ನಿಸಿದ ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿರುವ ಯುವಕರ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಘಟನೆಯಲ್ಲಿ ಸ್ಥಳೀಯ ಯುವಕನೋರ್ವನ ಕಾಲಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!