Thursday, April 25, 2024
spot_imgspot_img
spot_imgspot_img

ಮಂಗಳೂರು: ಪ್ರತಿದಿನ 800ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಆಹಾರ ನೀಡುವ ರಜನಿ ಶೆಟ್ಟಿಗೆ ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿ

- Advertisement -G L Acharya panikkar
- Advertisement -

ಮಂಗಳೂರು: ಪ್ರತಿದಿನ 800ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಊಟ ಹಾಕುವ, ತನ್ನ ಮನೆಯಲ್ಲೇ 55 ಬೀಡಾಡಿ ನಾಯಿ, 15 ಬೆಕ್ಕು, 11 ಗಿಡುಗ, ದನ, ಕಾಗೆ, ಕೋಗಿಲೆ, ಆಮೆ, ಮೊಲಗಳನ್ನು ಸಾಕಿ ಸಲಹುತ್ತಿರುವ ಮಂಗಳೂರು ಬಲ್ಲಾಳ್‌ಬಾಗ್ ನಿವಾಸಿ ರಜನಿ ಶೆಟ್ಟಿ ಅವರನ್ನು ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಂಗಳೂರು ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿಯು 2022ನೇ ಸಾಲಿನ ಪ್ರಶಸ್ತಿಗೆ ರಜನಿ ಶೆಟ್ಟಿ ಅವರನ್ನು ಆಯ್ಕೆ ಮಾಡಿದೆ. ಮಾ.5ರಂದು ನಗರದ ಬೊಕ್ಕಪಟ್ಣ ಸಮೀಪದ ಪ್ಯಾರಡೈಸ್ ಐಲ್ಯಾಂಡ್‌ನಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆ ಕಾರ್ಯಕ್ರಮದಲ್ಲಿ ರಜನಿ ಶೆಟ್ಟಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಗರದ ಮಣ್ಣಗುಡ್ಡೆಯ ಪುಟ್ಟ ಬಾಡಿಗೆ ಮನೆಯಲ್ಲಿ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿರುವ ರಜನಿ ಶೆಟ್ಟಿ, ತನ್ನ ಮನೆಯನ್ನು ಗಾಯಗೊಂಡ, ರೋಗಗ್ರಸ್ತ ನಾಯಿ, ಬೆಕ್ಕು, ಹಕ್ಕಿಗಳಿಗೆ ಮೀಸಲಿಟ್ಟಿದ್ದಾರೆ. ಬೀದಿ ಬದಿ ಬರಡಾಗುವ ಬದುಕು, ವಾಹನಗಳ ಅಡಿಗೆ ಸಿಲುಕಿಯೊ, ಯಾರದ್ದೋ ವಿಷ ತಿಂದು ಸಾಯುವ ಪರಿಸ್ಥಿತಿಯ ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ಮನಗಂಡು ತಮ್ಮ ಪಾಡಿಗೆ ಸದ್ದಿಲ್ಲದೆ ಪ್ರಾಣಿಗಳ ಸೇವೆ ಮಾಡಿಕೊಂಡು ಬಂದವರು ರಜನಿ ಶೆಟ್ಟಿ. ನಾಯಿ, ಬೆಕ್ಕು ಬಾವಿಗೆ ಬಿದ್ದಾಗ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಬರುವ ಮೊದಲೇ ದೂರವಾಣಿ ಕರೆ ಸ್ವೀಕರಿಸಿ, ಸರ ಸರನೆ ಬಾವಿಗಿಳಿದು ಮೇಲೆತ್ತುವುದರಲ್ಲಿ ರಜನಿ ಶೆಟ್ಟಿಯವರದ್ದು ಎತ್ತಿದ ಕೈ. ಅನೇಕ ನಾಯಿ, ಬೆಕ್ಕುಗಳನ್ನು ಅವರು ರಕ್ಷಣೆ ಮಾಡಿದ್ದಾರೆ. ಮರ ಕಡಿಯುವಾಗ ಗಾಯಗೊಂಡ ಹಕ್ಕಿಗಳನ್ನೂ ಅವರು ತಮ್ಮ ಮನೆಯ ಗೂಡಿನಲ್ಲಿರಿಸಿ ಆರೈಕೆ ಮಾಡುತ್ತಾರೆ. ಗಿಳಿ, ಹದ್ದುಗಳಿಗೂ ರಜನಿಯಕ್ಕನ ಮನೆಯಲ್ಲಿ ಆಸರೆ ಸಿಕ್ಕಿದೆ.

ರಜನಿಯ ಮನೆಯಲ್ಲಿ ಪ್ರತಿದಿನ 60 ಕೆಜಿ ಅಕ್ಕಿಯಿಂದ ಚಿಕನ್ ಮಿಶ್ರಿತ ಅನ್ನ ಬೇಯುತ್ತಿರುತ್ತದೆ. ಇದನ್ನು ಅವರು 800ಕ್ಕೂ ಹೆಚ್ಚು ನಾಯಿಗಳಿಗೆ ಬಡಿಸುತ್ತಾರೆ. ಮಗಳು ಅಥವಾ ಪತಿ ದಾಮೋದರ್ ಶೆಟ್ಟಿಯ ಜೊತೆ ಸ್ಕೂಟರ್‌ನಲ್ಲಿ ತೆರಳಿ ನಾಯಿಗಳ ಮೈದಡವಿ, ಊಟ ಹಾಕಿ ಬರುತ್ತಾರೆ.

ಕಳೆದ 16 ವರ್ಷಗಳಿಂದ ನಾಯಿಗಳಿಗೆ ಊಟ ಹಾಕುವ ಅವರು, 2500ರಷ್ಟು ಪ್ರಾಣಿಗಳನ್ನು ರಕ್ಷಿಸಿದ್ದಾರೆ. ಆರಂಭದಲ್ಲಿ ಸ್ವಂತ ದುಡಿಮೆಯ ಹಣದಿಂದ ನಾಯಿಗಳಿಗೆ ಊಟ ಬೇಯಿಸಿ ಹಾಕುತ್ತಿದ್ದರೆ, ಈಗ ಬಿರುವೆರ್ ಕುಡ್ಲದಂತಹ ಸಂಘಟನೆಗಳು, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಗಾಯಗೊಂಡ ಪ್ರಾಣಿಗಳಿಗೆ ಎನಿಮಲ್ ಕೇರ್ ಟ್ರಸ್ಟ್‌ನವರು ಚಿಕಿತ್ಸೆ ನೀಡುತ್ತಾರೆ.

- Advertisement -

Related news

error: Content is protected !!