

ಮಂಗಳೂರು: ಹಿಂದೂ ಸಂಘಟನೆಗಳ ನಾಲ್ವರು ಕಾರ್ಯಕರ್ತರ ಮೇಲೆ ಬಜ್ಪೆ ಠಾಣಾ ಪೊಲೀಸರು ಹಲ್ಲೆ ನಡೆಸಿ ಅವರ ಮನೆಯ ಮಹಿಳೆಯರ ಬಗ್ಗೆ ಅಸಭ್ಯ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಈ ಹಿನ್ನೆಲೆ ಪೊಲೀಸರ ಅಮಾನತಿಗೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಬಜ್ಪೆ ಠಾಣೆಯ ಇನ್ಸ್ ಪೆಕ್ಟರ್ ಸಹಿತ ಐವರು ಪೊಲೀಸರನ್ನು ತಕ್ಷಣ ಅಮಾನತುಗೊಳಿಸುವುದರ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಆರೆಸ್ಸೆಸ್ ಹಾಗೂ ಇತರ ಹಿಂದೂ ಪರ ಸಂಘಟನೆಗಳು ನಿನ್ನೆ ಸಂಜೆ ಬಜ್ಪೆ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನಂತರ ಪೊಲೀಸ್ ಆಯುಕ್ತರು ಹಾಗೂ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಗಳ ಪರವಾಗಿ ಮಾಜಿ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಡಾ.ಸೋಂದಾ ಭಾಸ್ಕರ್ ಭಟ್ ಸಂಘಟನೆಗಳ ಪ್ರಮುಖರು ಹಾಗೂ ಮತ್ತಿತರರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಪ್ರತಿಭಟನೆಯ ನಂತರ ಮನವಿಯನ್ನು ಸ್ವೀಕರಿಸಿದ ಎಸಿಪಿ ಮಹೇಶ್ ಕುಮಾರ್, ಪ್ರಕರಣಕ್ಕೆ ಉನ್ನತ ತಂಡದ ಮೂಲಕ ತನಿಖೆಗೆ ಒಳಪಡಿಸಿ ಮೂರು ದಿನದೊಳಗೆ ವರದಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು.










