Saturday, April 27, 2024
spot_imgspot_img
spot_imgspot_img

ಮೂಡಬಿದಿರೆ; 41ಗಂಟೆಯಲ್ಲಿ 2,700 ಕಿ.ಮೀ ದೂರ ಕ್ರಮಿಸಿ ಕಾರ್ಮಿಕನ ಜೀವ ಉಳಿಸಿದ ಆಂಬುಲೆನ್ಸ್‌ ಡ್ರೈವರ್‌ ಅನಿಲ್‌ ಮೆಂಡೋನ್ಸಾ

- Advertisement -G L Acharya panikkar
- Advertisement -

ಮೂಡುಬಿದಿರೆ: ಅಡಿಕೆ ಗೋದಾಮಿನ ಮಾಡಿನಿಂದ ಬಿದ್ದು ಕೋಮದಲ್ಲಿದ್ದ ಕಾರ್ಮಿಕನನ್ನು ಆಂಬುಲೆನ್ಸ್‌ನಲ್ಲಿ ಸುಮಾರು 2,700 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಕೇವಲ 41 ಗಂಟೆಗಳಲ್ಲಿ ಕರೆದೊಯ್ದ “ಐರಾವತ” ಆಯಂಬುಲೆನ್ಸ್‌ನ ಚಾಲಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಕಾರ್ಮಿಕ ಮಹಾಂದಿ ಹಸ್ಸನ್‌ ಮೂಡುಬಿದಿರೆ ಮಾಸ್ತಿಕಟ್ಟೆಯಲ್ಲಿ ಅಡಿಕೆ ದಾಸ್ತಾನು ಕೇಂದ್ರದಲ್ಲಿ ಕಾರ್ಮಿಕನಾಗಿದ್ದ. ಕೆಲಸದ ಸಂದರ್ಭ ಆಕಸ್ಮಾತ್‌ ಕೆಳಗೆ ಬಿದ್ದು ಆಸ್ಪತ್ರೆ ಸೇರಿ ಕೋಮಾಕ್ಕೆ ಜಾರಿದ. ಒಡನಾಡಿಗಳ ಸಲಹೆಯ ಮೇರೆಗೆ ಆತನನ್ನು ಸ್ವಂತ ಊರಿಗೆ ಕಳುಹಿಸಲು ಯಜಮಾನರು ವಿಮಾನದ ಟಿಕೆಟ್‌ ತೆಗೆಸಿಕೊಟ್ಟರು. ವೈದ್ಯರಿಲ್ಲದೆ, ದಾದಿಯರಿಲ್ಲದೆ ರೋಗಿಯನ್ನು ಒಯ್ಯಲಾಗದು ಎಂದು ವಿಮಾನ ಯಾನ ಸಂಸ್ಥೆ ನಿರಾಕರಿಸಿದ್ದರಿಂದ “ಐರಾವತ’ ಆಯಂಬುಲೆನ್ಸ್‌ ಮಾಲಕ, ಮೂಡುಬಿದಿರೆಯ ಅನಿಲ್‌ ರೂಬನ್‌ ಮೆಂಡೋನ್ಸಾ ಅವರಲ್ಲಿ ಕೇಳಿಕೊಳ್ಳಲಾಯಿತು. ರೋಗಿಯ ಕಡೆಯವರ ಹೊಣೆಗಾರಿಕೆಯಲ್ಲಿ ಆಸ್ಪತ್ರೆಯವರು ನೀಡಿದ ಬಿಡುಗಡೆ ಪತ್ರ, ಆಮ್ಲಜನಕದ ಜಾಡಿ, ಪೊಲೀಸ್‌ ಠಾಣೆಯಿಂದ ಪಡೆದ ಪತ್ರ ಜತೆಗಿರಿಸಿಕೊಂಡ ಅನಿಲ್‌ ಮೆಂಡೋನ್ಸಾ ಅವರು ಅಶ್ವತ್ಥ್ ಎಂಬ ಇನ್ನೋರ್ವ ಚಾಲಕನನ್ನು ಕರೆದುಕೊಂಡು ಸೆ. 10ರ ಸಂಜೆ ಮೂಡುಬಿದಿರೆಯಿಂದ ಹೊರಟರು.

ಡೀಸೆಲ್‌ ತುಂಬಿಸುವಲ್ಲಿ ಹೊರತು ಪಡಿಸಿ ಎಲ್ಲೂ ವಾಹನ ನಿಲ್ಲಲಿಲ್ಲ. ಹಸ್ಸನ್‌ನ ಗೆಳೆಯರಲ್ಲಿ ಓರ್ವ ವಾಹನ ಚಾಲನೆ ಬಲ್ಲವನಾಗಿದ್ದರಿಂದಲೂ ಅನುಕೂಲವಾಯಿತು. ವಾಹನ ಹೊಸದಿಲ್ಲಿ ತಲುಪುವಾಗ ಇನ್ನೂ 160 ಕಿ.ಮೀ. ದೂರದ ಮೊರಾದಾಬಾದ್‌ಗೆ ಹೋಗಬೇಕಾಗಿದೆ ಎಂದು ಹಸ್ಸನ್‌ ಒಡನಾಡಿಗಳು ತಿಳಿಸಿದರು. ಮೊರಾದಾಬಾದ್‌ನ ಶ್ರೇಯಾ ನ್ಯೂರೋ ಕೇಂದ್ರ ತಲುಪುವಾಗ ಸೆ.12ರ ಬೆಳಗ್ಗೆ 10.30 ಆಗಿತ್ತು. ಆಯಂಬುಲೆನ್ಸ್‌ ನಲ್ಲಿ ವೈದ್ಯರಾಗಲೀ ದಾದಿಯರಾಗಲೀ ಇಲ್ಲದೆಯೇ ಬಂದಿರುವುದನ್ನು ನೋಡಿದ ಅಲ್ಲಿನ ನರರೋಗ ತಜ್ಞ ಡಾ| ಅಜಯ್‌ ಜೈನ್‌, “ಯೂ ಅರ್‌ ಗ್ರೇಟ್‌’ ಎಂದು ಉದ್ಗರಿಸಿದರಂತೆ.

ಅನಿಲ್‌ ಮೆಂಡೋನ್ಸಾ ಗುರುವಾರ ಮೂಡುಬಿದಿರೆಗೆ ವಾಪಸಾಗಿದ್ದಾರೆ. ಪ್ರಯಾಣದ ಎಲ್ಲ ವೆಚ್ಚವನ್ನೂ ಹಸ್ಸನ್‌ ಯಜಮಾನರು ನೋಡಿಕೊಂಡಿದ್ದಾರೆ. ಹಸ್ಸನ್‌ ಚೇತರಿಸಿಕೊಳ್ಳುತ್ತಿರುವುದಾಗಿ ಮಾಹಿತಿ ಲಭಿಸಿದೆ ಎಂದು ಅನಿಲ್‌ ತಿಳಿಸಿದ್ದಾರೆ.

astr
- Advertisement -

Related news

error: Content is protected !!