

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ತಿಕೋಟಾ ತಾಲೂಕಿನ ತೊರವಿ ತಾಂಡಾದಲ್ಲಿ ಬುಧವಾರದಂದು ಈ ಆಘಾತಕಾರಿ ಘಟನೆ ನಡೆದಿದ್ದು, 27 ವರ್ಷದ ಅನಿತಾ ಪಿಂಟು ಜಾದವ್ ತನ್ನ ಮೂವರು ಮಕ್ಕಳಾದ ಪ್ರವೀಣ (6) ಸುದೀಪ (4) ಮತ್ತು ಮಮದಿಕಾ(2) ಜೊತೆಗೆ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ನಿತ್ಯ ಮನೆಯಲ್ಲಿ ಕಿರಿಕಿರಿ, ಹದಗೆಟ್ಟಿದ್ದ ಸಂಸಾರ..!
8 ವರ್ಷಗಳ ಹಿಂದೆ ಅನಿತಾಳನ್ನ ಜಾಧವ ಕುಟುಂಬದ ಪಿಂಟುಗೆ ನೀಡಿ ಮದುವೆ ಮಾಡಲಾಗಿತ್ತು. ಒಂದು ಹೆಣ್ಣು ಎರಡು ಗಂಡು ಮಕ್ಕಳಿದ್ದರು. ಸಂಸಾರ ಚೆನ್ನಾಗಿದೆ ಎನ್ನುವಾಗಲೇ ಮನೆಯಲ್ಲಿ ಕೆಲಸದ ವಿಚಾರದಲ್ಲಿ ಮನಸ್ತಾಪಗಳು ಉಂಟಾಗಿದ್ದವಂತೆ. ತೊರವಿ ತಾಂಡಾದಲ್ಲಿರುವ 4 ಏಕರೆ ಜಮೀನಿನಲ್ಲೆ ಗಂಡ ಪಿಂಟು ಕೆಲಸ ಮಾಡ್ತಿದ್ದು, ಪತ್ನಿ ಅನಿತಾ ಕೆಲಸದ ವಿಚಾರದಲ್ಲಿ ಮನೆಯವರ ಮಾತು ಕೇಳ್ತಿರಲಿಲ್ಲ ಎನ್ನಲಾಗಿದೆ. ಇದೆ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ-ಕದನಗಳು ಆಗ್ತಿದ್ದವು ಎನ್ನುವ ಮಾಹಿತಿ ಇವೆ. ಸಾಂಸಾರಿಕ ಗಲಾಟೆ ಈ ಸಾವಿಗೆ ಕಾರಣ ಎನ್ನಲಾಗ್ತಿದೆ.









