Sunday, May 19, 2024
spot_imgspot_img
spot_imgspot_img

ಮೋದಿ, ಜೆ.ಪಿ. ನಡ್ಡಾ, ಅಮಿತ್ ಶಾರವರ ಸೂಚನೆಯನ್ನ ಧಿಕ್ಕರಿಸಿದವರು ಅರುಣ್ ಕುಮಾರ್ ಪುತ್ತಿಲ; ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹಿಂದೂ ಸಾಮ್ರಾಟ ಡಾ.ಎಂ.ಕೆ ಪ್ರಸಾದ್ ಅಕ್ರೋಶ

- Advertisement -G L Acharya panikkar
- Advertisement -

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಇವತ್ತು ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ವಿಷಯವೇನೆಂದರೆ ಅರುಣ್ ಕುಮಾರ್ ಪುತ್ತಿಲ ರವರಿಗೆ ಬಿಜೆಪಿಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಲು ಯಾಕೆ ಟಿಕೆಟ್ ನೀಡಿಲ್ಲ ಎಂಬುದು ಯುವ ಕಾರ್ಯಕರ್ತರಿಗೆ ತಿಳಿಯದೇ ಇರುವ ಸಂಗತಿಗಳು ಹಲವಾರು ಇವೆ. ಪುತ್ತೂರು ಬಿಜೆಪಿಯ ಕಛೇರಿಗೇ ಬಾರದೇ, ಬಿಜೆಪಿಯ ಮುಖಂಡರನ್ನು ಸಂಪರ್ಕಿಸದೇ ತನಗೆ ಶಾಸಕ ಸ್ಥಾನದ ಟಿಕೆಟ್ ನೀಡಬೇಕೆಂದು ಆಗ್ರಹಿಸುವುದು ಹಾಸ್ಯಾಸ್ಪದ ಎಂದು ಪತ್ರಿಕಾಗೋಷ್ಠಿಯಲ್ಲಿ ಡಾ.ಎಂ.ಕೆ. ಪ್ರಸಾದ್ ರವರು ಹೇಳಿದರು.

ಅರುಣ್ ಕುಮಾರ್ ಪುತ್ತಿಲ ರವರು ಈ ಹಿಂದೆ ಭಜರಂಗದಳದ ಜಿಲ್ಲಾ ಸಂಚಾಲಕರಾಗಿದ್ದರು. ಅವರ ನಡವಳಿಕೆಯಿಂದಾಗಿ ಅವರಾಗಿಯೇ ಪರಿವಾರ ಸಂಘಟನೆಯಿಂದ ಹೊರ ನಡೆದರು. ನಂತರ ಪ್ರಮೋದ್ ಮುತಾಲಿಕರೊಂದಿಗೆ ಕೈಜೋಡಿಸಿ ಶ್ರೀರಾಮಸೇನೆಯ ಸಂಚಾಲಕರಾದರು. ಯಾವಾಗ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವೃದ್ಧಿಯಾಯಿತೋ, ಪುತ್ತಿಲರು ಶ್ರೀರಾಮ ಸೇನೆಯಿಂದ ಹೊರ ಬಂದರು. ತನ್ನದೇ ಹಿಂದೂ ಸೇನೆ ರಚಿಸಿ ಅದನ್ನೂ ಸಹ ಅರ್ಧದಲ್ಲೇ ಕೈ ಬಿಟ್ಟರು.

2013ರಲ್ಲಿ ಸಂಘ ಪರಿವಾರದ ಹಿರಿಯರು ಬಿಜೆಪಿಯಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳಿದಾಗ ತನಗೆ ಅಧ್ಯಕ್ಷ ಸ್ಥಾನವನ್ನೇ ಕೊಡಬೇಕೆಂದು ಹಠ ಹಿಡಿದ ಕಾರಣದಿಂದ, ಬಿಜೆಪಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ತಾನಾಗಿಯೇ ಕೈ ಚೆಲ್ಲಿದರು. ಸಂಘದ ಹಿರಿಯರು ಬಿಜೆಪಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸೂಚಿಸಿದರೂ ಪಕ್ಷಕ್ಕೆ ಬರಲಿಲ್ಲ. ನಂತರ ಕೂಡಾ ಸಂಘ ಪರಿವಾರದ ಹಿರಿಯರು ಪುತ್ತಿಲರನ್ನು ಕಡೆಗಣಿಸದೇ, ಸಂಘಟನೆಯಲ್ಲಿ ಕೆಲಸ ಮಾಡುವ ಸಲುವಾಗಿ ನಮೋ ಬ್ರಿಗೇಡ್‌ನ ನೇತೃತ್ವವನ್ನು ನೀಡಿದರು.

2008ರ ವಿಧಾನ ಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಶಕುಂತಳಾ ಶೆಟ್ಟಿಯವರೊಂದಿಗೆ ಕೆಲಸ ಮಾಡಿ, ಬಿಜೆಪಿಗೆ ವಿರುದ್ಧವಾಗಿ ನಡೆದರು. ನಂತರದ ಚುನಾವಣೆಗಳಾದ 2013, 2018ರ ಚುನಾವಣೆಗಳಲ್ಲಿಯೂ ಪುತ್ತಿಲರವರು ಪಕ್ಷದ ವಿರುದ್ಧ ಬಂಡಾಯವೆದ್ದು, ತಾನು ಮತ್ತು ತನ್ನ ಬಳಗ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ ಬಿಜೆಪಿಗೆ ವಿರುದ್ಧವಾಗಿ ಕೆಲಸ ಮಾಡಿ ಬಿಜೆಪಿಯನ್ನು ಸೋಲಿಸಲು ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ ಅವರ ವಿರುದ್ಧ ಹಲವಾರು ಆಪಾದನೆಗಳು ಕೇಳಿ ಬಂದಿವೆ. ಶನಿ ಪೂಜೆಯ ಸಂದರ್ಭದಲ್ಲಿ ಪೊಲೀಸರು ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸಮಯದಲ್ಲಿ ಅನುಮತಿ ಇಲ್ಲದೇ ಮೆರವಣಿಗೆ ಮಾಡುವ ಪ್ರಯತ್ನ ಮಾಡಿ ಸಾಕಷ್ಟು ಕಾರ್ಯಕರ್ತರು ತೊಂದರೆಗೊಳಗಾಗಿರುವುದು ಎಲ್ಲರಿಗೂ ತಿಳಿದ ವಿಚಾರ.., ಕುಕ್ಕಿನಡ್ಕ ದೇವಸ್ಥಾನದ ಬ್ರಹ್ಮಕಲಶದ ಸಮಯದಲ್ಲಿ, ಸಂಪ್ಯ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮುಂತಾದ ಸಂದರ್ಭಗಳಲ್ಲಿ ಅವರ ವಿರುದ್ಧ ಹಣಕಾಸಿನ ವಿಚಾರವಾಗಿ ಆಪಾದನೆಗಳು ಕೇಳಿ ಬಂದಿರುತ್ತದೆ.

ಮುಂಡೂರು ಮೃತ್ಯುಂಜಯೇಶ್ವರ ದೇವಾಲಯದಲ್ಲಿನ ಕಾಣಿಕೆ ಡಬ್ಬಿಯ ವಿಚಾರವಾಗಿ ಅವರ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣ ಈಗಲೂ ಇದೆ. ಧಾರ್ಮಿಕ ಕೇಂದ್ರವಾದ ದೇವಸ್ಥಾನದಲ್ಲಿಯೇ ಹಿಂದೂ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣವೂ ಅವರ ವಿರುದ್ಧ ಇದೆ.

ಮೃತ್ಯುಂಜಯೇಶ್ವರ ದೇವಾಲಯದಲ್ಲಿ ನಾಗನ ಕಟ್ಟೆಯನ್ನು ಕಟ್ಟುವಾಗ ಆ ಕೆಲಸ ಆಗದಂತೆ ಅದರ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು, ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡಿದ್ದಾಗಿದೆ. ಈ ರೀತಿಯಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹಲವಾರು ಆಪಾದನೆಗಳು ಪುತ್ತಿಲರ ವಿರುದ್ಧ ಇದೆ.

ಓರ್ವ ವ್ಯಕ್ತಿ ಶಾಸಕನಾಗಬೇಕಾದರೆ ಆತ ಶಾಂತ ಸ್ವಭಾವವನ್ನು ಹೊಂದಿರಬೇಕು. ಸಾರ್ವಜನಿಕರ ಕಷ್ಟ ಸುಖಗಳಲ್ಲಿ ಸ್ಪಂದಿಸಬೇಕು. ಪಕ್ಷದಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿರಬೇಕು. ಪುತ್ತೂರು ಬಿಜೆಪಿಯಲ್ಲಿ ಪರಿವಾರ ಸಂಘಟನೆಯ ಹಿರಿಯರು ಸೂಚಿಸಿದಾಗಲೂ ಯಾವುದೇ ಜವಾಬ್ದಾರಿ ಅಥವಾ ಹುದ್ದೆ ಸ್ವೀಕರಿಸಲು ನಿರಾಕರಿಸಿ, ತನ್ನದೇ ಆದ ಸಂಘಟನೆ ಮಾಡಿಕೊಂಡು, ಬಿಜೆಪಿಯ ವಿರುದ್ಧವೇ ಹೋರಾಟ ಮಾಡಿಕೊಂಡು, ಬಿಜೆಪಿಯ, ಸಂಘ ಪರಿವಾರದ ಹಿರಿಯರ ವಿರುದ್ಧ ಕೆಟ್ಟದಾಗಿ ಮಾತಾಡಿಕೊಂಡು, ಮುಖ್ಯವಾಹಿನಿಗೆ ಸೇರಿಕೊಳ್ಳದೇ, ತನಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಬೇಕೆಂದು.., ಕೇಳುವುದು ಎಷ್ಟು ಸರಿ ಎಂಬುದನ್ನು ನಾವೆಲ್ಲ ಅರ್ಥೈಸಿಕೊಳ್ಳಬೇಕಾಗಿದೆ ಎಂದು ಖ್ಯಾತ ವೈದರಾದ ಡಾ. ಎಂ.ಕೆ. ಪ್ರಸಾದ್ ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳ್ಳಜ್ಜ, ರಾಜೇಶ್ ಬನ್ನೂರು, ಚಂದ್ರಶೇಖರ್ ರಾವ್ ಬಪ್ಪಳಿಗೆ, ಶಂಭು ಭಟ್ ಉಪಸ್ಥಿತರಿದ್ದರು.

- Advertisement -

Related news

error: Content is protected !!