Thursday, April 25, 2024
spot_imgspot_img
spot_imgspot_img

” ರಕ್ಷಾಬಂಧನ ” ಅಣ್ಣಾ-ತಂಗಿಯ ಪ್ರೀತಿಯ ನಂದನವನ

- Advertisement -G L Acharya panikkar
- Advertisement -

ಅಲೆಕ್ಸಾಂಡರ್ ತನ್ನ ದಿಗ್ವಿಜಯವನ್ನು ಸಾಧಿಸುತ್ತಾ….. ಪೌರವನನ್ನು ಸೋಲಿಸುತ್ತಾನೆ. ಆಗ ಅಲೆಕ್ಸಾಂಡರ್ ಪೌರವನ ದೃಢ ಮಾತು ,ನಿರ್ಧಾರ, ನಡವಳಿಕೆಗೆ ಪ್ರಸನ್ನನಾಗಿ ರಾಜ್ಯವನ್ನು ಹಿಂತಿರುಗಿಸುತ್ತಾನೆ. ಆಗ ಪೌರವನ ಮಡದಿ ಅಲೆಕ್ಸಾಂಡರ್ ಗೆ ಭಾತೃತ್ವದ ಸಂಕೇತವಾಗಿ ತಂಗಿಯ ಪ್ರೀತಿಯನ್ನೆಲ್ಲ ಧಾರೆಯೆರೆದು ರಾಖಿಯನ್ನು ಕಟ್ಟುತ್ತಾಳೆ. ಇದಕ್ಕೆ ಪ್ರತಿಯಾಗಿ ಅಲೆಕ್ಸಾಂಡರ್ ಧನಕನಕವನ್ನೆಲ್ಲ ಕೊಡುತ್ತಾನೆ. ಇದೇ ನಂತರ “ರಕ್ಷಾ ಬಂಧನ” ಎಂಬ ಹೆಸರಿನಿಂದ ಪ್ರಖ್ಯಾತವಾಯಿತು.

ರಕ್ಷಾ ಬಂಧನ ಎಂದರೆ ಒಂದು ನೂಲನ್ನು ಕಟ್ಟುವುದು ಎಂದರ್ಥವಲ್ಲ. ತನ್ನೆದೆಯ ಗಗನದಷ್ಟು ಎತ್ತರದ ಚಂದ್ರಮನ ಬಿಳುಪಾದ, ಅಗಣಿತ ಅಪರಿಮಿತ ಪ್ರೀತಿ ಅನುರಾಗ, ಮಮತೆ, ಸ್ನೇಹದ ಹೃದಯ ಹೊಳೆಯನ್ನು ಹರಿಸಿ ಕಟ್ಟುವ ಅಮೂಲ್ಯ ರಾಕಿಗೆ ಬೆಲೆ ಕಟ್ಟಲಾಗದು. ಜೀವನವೆನ್ನುವ ಸಮುದ್ರದಲ್ಲಿ ಅನುದಿನ ಅನುಕ್ಷಣ ರಕ್ಷೆಯ ಕವಚವಾಗಿ ತಂಗಿಯ ಬಾಳ ನೌಕೆಯನ್ನು ಯಶಸ್ವಿಯಾಗಿ ಮುನ್ನಡೆಸುವ ನಾವಿಕ ನನ್ನಣ್ಣನಾಗಬೇಕು ಎನ್ನುವುದೇ ರಕ್ಷಾಬಂಧನದಲ್ಲಿ ಭಾಗಿಯಾಗುವ ಪ್ರತಿಯೊಂದು ಹೆಣ್ಣಿನ ಹೃದಯದಾಳದ ಅಭಿಲಾಷೆ.

ಅಪ್ಪನ ಜವಾಬ್ದಾರಿ, ಅಮ್ಮನ ಪ್ರೀತಿ, ಗುರುವಿನ ಶಿಕ್ಷಣ ಇವೆಲ್ಲವುದನ್ನು ನೀಡುವ ಹೆಣ್ಣಿನ ಪಾಲಿಗೆ ಎಲ್ಲವೂ ಅದು ಅಣ್ಣ…… ಇದು ಅಕ್ಷರಶಃ ಸತ್ಯ ಇದು ಅಣ್ಣನಿರುವ ಹೆಣ್ಣಿಗಿಂತ ಅಣ್ಣನಿಲ್ಲದ ಹೆಣ್ಣಿಗೆ ಹೆಚ್ಚು ಅನುಭವವಾಗುತ್ತದೆ. ಹೌದು, “ಅಣ್ಣನಿಲ್ಲದ ಬಾಳು ಮರುಭೂಮಿಯಂತೆ”……. ಅಣ್ಣನಿದ್ದರೆ ಮರುಭೂಮಿಯಲ್ಲಿ ಓಯಸಿಸ್ ದೊರೆತಂತೆ. ಅಗ್ರಜ-ಅನುಜರಿಬ್ಬರೂ ಭಾತೃತ್ವದ ಕೊಂಡಿಯಾದರೂ, ಹೆಣ್ಣೋರ್ವಳು ಅಣ್ಣನಿಂದ ಪ್ರೀತಿಯನ್ನು ಪಡೆಯುತ್ತಾಳೆ ‌. ತಮ್ಮನಿಗೆ ಪ್ರೀತಿ ನೀಡುತ್ತಾಳೆ. ನೀಡುವುದಕ್ಕಿಂತ ಪಡೆಯುವುದು ಮನಸ್ಸಿಗೆ ಹೆಚ್ಚು ಸಮೀಪ.ಆದ್ದರಿಂದಲೇ ಶೇಕಡಾ 90ರಷ್ಟು ಸ್ತ್ರೀಯರು ತಮ್ಮನಿಗಿಂತ ಅಣ್ಣನಿರಬೇಕು ಎಂದು ಹೆಚ್ಚಾಗಿ ಬಯಸುತ್ತಾರೆ.

ಇತ್ತೀಚೆಗೆ ಕಿರುಕುಳ ನೀಡುವ ಹುಡುಗರಿಂದ ಪಾರಾಗುವ, ಅಣ್ಣನಿಂದ ಹಣ ಕೀಳುವ ಮಾರ್ಗವಾಗಿ ಕೂಡ ರಕ್ಷಾಬಂಧನವನ್ನು ಬಳಸುತ್ತಿರುವುದು ವಿಷಾದನೀಯ ಸಂಗತಿ. ಆದರೆ ಅಣ್ಣ-ತಂಗಿಯ ಬಾಂಧವ್ಯವನ್ನು ಯಾವ ಮಾಪನದಲ್ಲಿಯೂ ಕೂಡ ಅಳೆಯಲಾಗದು.

ತಪ್ಪಾದರೆ ಮನ ನೋಯಿಸದೆ ತಿಳಿ ಹೇಳುವ, ಸಹೋದರಿಯ ಪ್ರತಿಭೆಗೆ ನೀರೆರೆದು ಪೋಷಿಸುವ, ತಂಗಿಯ ಮುಖ ಬಾಡಿದರೆ ನಗೆ ಚಟಾಕಿಯನ್ನು ಸಿಡಿಸಿ ಮುಖ ಅರಳುವಂತೆ ಮಾಡುವ, ಜೀವನದ ಪ್ರತಿಯೊಂದು ಹೆಜ್ಜೆ- ಹೆಜ್ಜೆಗೂ ಬೆನ್ನು ತಟ್ಟಿ ಪ್ರೋತ್ಸಾಹಿಸುವ, ತಂಗಿ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಸ್ವರ್ಗ ಸುಖವನ್ನು ಭುವಿಯಲ್ಲಿ ಕಾಣುವ ಅಣ್ಣ ಎಲ್ಲರ ಬಾಳಲ್ಲೂ ಸಿಗಲಿ……..

?️ ಸಂಧ್ಯಾ ಕುಮಾರಿ ಎಸ್, ವಿಟ್ಲ.(ಸಾಹಿತಿ)
ಅರ್ಥಶಾಸ್ತ್ರ ಉಪನ್ಯಾಸಕಿ
ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ

- Advertisement -

Related news

error: Content is protected !!