Friday, March 29, 2024
spot_imgspot_img
spot_imgspot_img

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ- ತಲೆಮರೆಸಿಕೊಂಡಿದ್ದ ಸಂತ್ರಸ್ತೆ ಯುವತಿ ಎಸ್‌ಐಟಿ ವಶಕ್ಕೆ!

- Advertisement -G L Acharya panikkar
- Advertisement -

ಬೆಂಗಳೂರು: ಅಶ್ಲೀಲ ಸಿ.ಡಿ. ಪ್ರಕರಣದ ಕೇಂದ್ರಬಿಂದು ಯುವತಿಯನ್ನು ಎಸ್‌ಐಟಿ ತಂಡ ಹೈದರಾಬಾದ್‌ನಲ್ಲಿ ರವಿವಾರ ವಶಕ್ಕೆ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ದಿನಗಳಿಂದ ಹೈದರಾಬಾದ್‌ನ ಪರಿಚಯಸ್ಥರ ಮನೆಯಲ್ಲಿ ವಾಸವಿದ್ದ ಯುವತಿ ಶನಿವಾರ ವೀಡಿಯೋ ಬಿಡುಗಡೆ ಮಾಡಿದ್ದಳು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಎಸ್‌ಐಟಿ ಅಧಿಕಾರಿಗಳು ರವಿವಾರ ಮಹಿಳಾ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ತಂಡ ಪ್ರಕರಣದ ಕಿಂಗ್‌ಪಿನ್‌ ಪತ್ರಕರ್ತ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದೆ. ರವಿವಾರ ರಾತ್ರಿಯೇ ಮಡಿವಾಳದ ಎಫ್‌ಎಸ್‌ಎಲ್‌ ಕೇಂದ್ರಕ್ಕೆ ಇವರನ್ನು ಕರೆತರಲಾಗಿದ್ದು, ವಿಚಾರಣ ಕೊಠಡಿಯಲ್ಲಿ ಇರಿಸಲಾಗಿದೆ.

ರವಿವಾರ ಬೆಳಿಗ್ಗೆಯಷ್ಟೇ ಯುವತಿಯ ಮೊಬೈಲ್‌ ಸಂಖ್ಯೆ ಪತ್ತೆ ಹಚ್ಚಿದ್ದ ಪೊಲೀಸರು ಆಕೆಯ ವಾಟ್ಸಾ‌ಪ್‌ ಮತ್ತು ಇಮೇಲ್‌ಗೆ ನೋಟಿಸ್‌ ಕಳುಹಿಸಿದ್ದರು. ಜತೆಗೆ ಈ ಹಿಂದೆ ಆಕೆ ವಾಸ ಮಾಡುತ್ತಿದ್ದ ಮನೆ ಮಾಲಕರು, ಸ್ನೇಹಿತರಿಗೂ ವಿಚಾರ ತಿಳಿಸಿ, ಆಕೆ ಮತ್ತೂಮ್ಮೆ ಸಂಪರ್ಕಕ್ಕೆ ಬಂದರೆ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಿದ್ದರು. ಅಲ್ಲದೆ  ವಿಜಯಪುರ ಜಿಲ್ಲೆಯಲ್ಲಿರುವ ಆಕೆಯ ಅಜ್ಜನ ಮನೆ ಮತ್ತು ಗುಡೂರ ಗ್ರಾಮದ ಆಕೆಯ ತಂದೆಯ ಮನೆ ಬಾಗಿಲಿಗೂ ನೋಟಿಸ್‌ ಅಂಟಿಸಲಾಗಿದೆ.

ಅಖಂಡ ಬಸವನಬಾಗೇವಾಡಿ ತಾಲೂಕಿನ ಪಟ್ಟಣದ ಮನೆಯೊಂದರ ಬಾಗಿಲಿಗೆ ಪೊಲೀಸರು ರವಿವಾರ ನೋಟಿಸ್‌ ಅಂಟಿಸಿದ್ದಾರೆ. ಇದು ಸಂತ್ರಸ್ತೆಯ ಅಜ್ಜನ ಮನೆ ಎಂದು ಗುರುತಿಸಲಾಗಿದೆ. ನಾಲ್ಕಾರು ತಿಂಗಳ ಹಿಂದೆ ಅಜ್ಜ ತೀರಿದ ಬಳಿಕ ಈ ಮನೆಯಲ್ಲಿ ಯಾರೂ ವಾಸವಿಲ್ಲ ಎನ್ನಲಾಗಿದೆ.‌

ಉತ್ತರ ಕರ್ನಾಟಕ ಮೂಲದ ಸಂತ್ರಸ್ತೆ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಳು. ಸಂತ್ರಸ್ತೆಗೆ ಐದು ವರ್ಷಗಳಿಂದ ಯುವಕನೊಬ್ಬನ ಪರಿಚಯವಿದ್ದು, ಪ್ರೀತಿಸಿ ಮೂರು ತಿಂಗಳ ಹಿಂದೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಯುವಕ ತನ್ನ ಮನೆಯಲ್ಲೂ ಪ್ರೀತಿಯ ವಿಚಾರ ತಿಳಿಸಿ, ವಿವಾಹಕ್ಕೆ ಮನೆಯವರನ್ನು ಒಪ್ಪಿಸಿದ್ದ. ಸಂತ್ರಸ್ತೆಯನ್ನು ಮನೆಗೆ ಕರೆದೊಯ್ದು ಪರಿಚಯಿಸಿದ್ದ. ಹೀಗಾಗಿ ಆಕೆ ಯುವಕನ ಮನೆಯವರ ಜತೆಗೂ ಸಂಪರ್ಕದಲ್ಲಿದ್ದಳು. ಈಗ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆಯಲಾಗಿದೆ.

ತಲೆಮರೆಸಿಕೊಂಡಿದ್ದ ಪ್ರಕರಣದ ಕಿಂಗ್‌ಪಿನ್‌ ಸಹಿತ ಮೂವರನ್ನು ಎಸ್‌ಐಟಿ ಹೈದರಾಬಾದ್ನಲ್ಲಿ ವಶಕ್ಕೆ ಪಡೆದಿದೆ. ಈ ಪೈಕಿ ಒಬ್ಬ ಮಹಿಳೆ ಕೂಡ ಇದ್ದಾಳೆ ಎಂದು ಮೂಲಗಳು ತಿಳಿಸಿವೆ. ಈಕೆ ಸಂತ್ರಸ್ತೆಯ ಅತ್ಯಾಪ್ತ ಗೆಳತಿಯಾಗಿದ್ದು, ಕೃತ್ಯಕ್ಕೆ ಸಹಕಾರ ನೀಡಿದ್ದಾಳೆ ಎನ್ನಲಾಗಿದೆ. ಈ ಮೂವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ರವಿವಾರ ರಾತ್ರಿ ಮಡಿವಾಳದ ಎಫ್‌ಎಸ್‌ಎಲ್‌ ಕೇಂದ್ರದಲ್ಲಿ ಇರಿಸಲಾಗಿದೆ. ಮಹಿಳೆಯ ರಕ್ಷಣೆಗೆ ಪಿಎಸ್‌ಐ ಸೇರಿ ಮೂವರು ಮಹಿಳಾ ಸಿಬಂದಿ ನೇಮಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂತ್ರಸ್ತೆಯ ಪ್ರಿಯಕರ, ಚಿಕ್ಕಮಗಳೂರಿನ ವ್ಯಕ್ತಿ ಸಹಿತ ಮೂವರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡು ರವಿವಾರ ಮತ್ತೂಮ್ಮೆ ವಿಚಾರಣೆ ನಡೆಸಲಾಗಿದೆ. ಬೆಂಗಳೂರಿನ ಆರ್‌.ಟಿ. ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಂತ್ರಸ್ತೆಯು ಸಿ.ಡಿ. ಬಹಿರಂಗವಾಗುತ್ತಿದ್ದಂತೆ ನಾಲ್ಕೈದು ದಿನಗಳ ಕಾಲ ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದಳು. ಈ ನಡುವೆ ಮನೆ ಮಾಲಕರಿಗೆ ಫೋನ್‌ ಮಾಡಿ, “ನನ್ನಿಂದ ನಿಮಗೆ ತೊಂದರೆ ಆಗಿದೆ. ದಯವಿಟ್ಟು ಕ್ಷಮಿಸಿ. ಕೆಲವು ದಿನಗಳ ನಂತರ ಮನೆ ಖಾಲಿ ಮಾಡುತ್ತೇನೆ’ ಎಂದಿದ್ದಾರೆ.

ಪ್ರಕರಣದ ಕಿಂಗ್‌ಪಿನ್‌ ಎನ್ನಲಾದ ಮಾಜಿ ಪತ್ರಕರ್ತ ಸಿ.ಡಿ. ಡೀಲ್‌ನಲ್ಲಿ ಲಕ್ಷಾಂತರ ರೂ. ಸಂಪಾದಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಹಣದಲ್ಲಿ ಫಾರ್ಚುನರ್‌ ಮಾತ್ರವಲ್ಲದೆ, ಎಕ್ಸ್‌ಯುವಿ 500 ಮತ್ತು ಒಂದು ಜೀಪ್‌ ಖರೀದಿಗೆ ಸಿದ್ಧತೆ ನಡೆಸಿದ್ದ. ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಜಮೀನು ಖರೀದಿಗೆ ಮುಂದಾಗಿದ್ದ. ಕೆಲವೆಡೆ ಮಧ್ಯವರ್ತಿಗಳ ಮೂಲಕ ಮುಂಗಡ ಹಣ ಕೊಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಆಪ್ತ ನಾಗರಾಜ್‌ ದೂರು ಆಧರಿಸಿ ಸದಾಶಿವನಗರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಪ್ರಕರಣವನ್ನು ಎಸ್‌ಐಟಿಗೆ ವರ್ಗಾವಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ., ಡಿಸಿಪಿ ಅನುಚೇತ್‌, ಡಿಸಿಪಿ ರವಿಕುಮಾರ್‌, ಎಸಿಪಿ ಧರ್ಮೇಂದ್ರ, ಇನ್‌ಸ್ಪೆಕ್ಟರ್‌ ಮಾರುತಿ, ಪ್ರಶಾಂತ್‌ ಬಾಬು ಸಭೆ ನಡೆಸಿದ್ದಾರೆ.

ಸಂತ್ರಸ್ತೆಗೆ ನೋಟಿಸ್‌ ಕೊಟ್ಟಿದ್ದು, ಮುಂದೆ ಆಕೆಯನ್ನು ಯಾವ ರೀತಿ ವಿಚಾರಣೆ ನಡೆಸಬೇಕು, ಆಕೆಯಿಂದ ಯಾವೆಲ್ಲ ಮಾಹಿತಿ ಸಂಗ್ರಹಿಸಬೇಕು, ಕಿಂಗ್‌ಪಿನ್‌ ವಿಚಾರಣೆಗೆ ಹೇಗೆ ಮತ್ತಿತರ ವಿಚಾರಗಳ ಸಹಿತ ಮುಂದಿನ ನಡೆಯ ಬಗ್ಗೆ ಸುಮಾರು ಎರಡು ತಾಸುಗಳ ಕಾಲ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

Related news

error: Content is protected !!