Friday, May 3, 2024
spot_imgspot_img
spot_imgspot_img

ರಾಜಕೀಯ ನಿವೃತ್ತಿ ಘೋಷಿಸಿದ ಕುಂದಾಪುರದ ವಾಜಪೇಯಿ; ಐದು ಬಾರಿ ನಿರಂತರ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಸ್ಪರ್ಧಿಸಲ್ಲ..!

- Advertisement -G L Acharya panikkar
- Advertisement -

ಕುಂದಾಪುರದ ವಾಜಪೇಯಿ ಎಂದೇ ಜನಜನಿತರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಐದು ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಖ್ಯಾತಿ ಇವರಿಗೆ..! ಈ ಬಾರಿಯೂ ಸಹ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಇದ್ದ ಎಲ್ಲ ಊಹಪೋಹಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.

ರಾಜಕೀಯ ನಿವೃತ್ತಿ ಬಗ್ಗೆ ಹೇಳಿದಿಷ್ಟು..!
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ 5 ಅವಧಿಗೆ ನನ್ನನ್ನು ಬಹುನಿರೀಕ್ಷೆಯೊಂದಿಗೆ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಎಲ್ಲ ಜಾತಿ, ಧರ್ಮದ ಮತದಾರ ಬಾಂಧವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವಇಚ್ಚೆಯಿಂದ ಸ್ಪರ್ಧಿಸದಿರಲು ನಿಶ್ಚಯಿಸಿರುತ್ತೇನೆ. ನಾನು ವಿಧಾನಸಭಾ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಅತ್ಯಂತ ನಿಷ್ಠೆಯಿಂದ ನನ್ನ ಜವಾಬ್ದಾರಿಯನ್ನು ನಿರ್ವಹಿಸಿರುತ್ತೇನೆ.

ಕುಂದಾಪುರ ವಿಧಾನಸಭಾ ಕ್ಷೇತ್ರವು ಬಹಳಷ್ಟು ಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು ಈ ಕ್ಷೇತ್ರದ ಎಲ್ಲ ವರ್ಗದ ಮತದಾರರಿಗೂ ತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟು ಅವರ ನೋವು ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಆಶೋತ್ತರಗಳನ್ನು ಈಡೇರಿಸಿದ ಸಂತೃಪ್ತಿಯಿದೆ. ಐದೂ ಚುನಾವಣೆಗಳಲ್ಲಿಯೂ ನನ್ನನ್ನು ದಾಖಲೆ ಮತಗಳ ಅಂತರಗಳಿಂದ ಚುನಾಯಿಸಿ ಗೆಲ್ಲಿಸಿದ ಕ್ಷೇತ್ರದ ಎಲ್ಲ ಮತದಾರರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿ ಕ್ಷೇತ್ರದ ಮತದಾರರಿಂದ ಪ್ರೀತಿ ವಿಶ್ವಾಸ ಗಳಿಸಿದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹಾಲಾಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಐದು ಬಾರಿ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿ ನಡೆದ ಲೋಕಸಭಾ, ವಿಧಾನಸಭೆ, ವಿಧಾನಪರಿಷತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ದುಡಿದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಪ್ರಮುಖರಿಗೆ ಹಾಗೂ ಅಭಿಮಾನಿಗಳಿಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ.

ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನನಗೆ ಮಾರ್ಗದರ್ಶನ ನೀಡಿದ ಹಾಗೂ ಸಹಕಾರ ನೀಡಿದ ಪಕ್ಷದ ಪ್ರಮುಖರಿಗೆ, ಎಲ್ಲ ಹಿರಿ- ಕಿರಿಯ ಸ್ನೇಹಿತರಿಗೆ, ಅಧಿಕಾರಿ ವರ್ಗದವರಿಗೆ, ಮಾಧ್ಯಮದವರಿಗೆ ಹಾಗೂ ಕ್ಷೇತ್ರದ ಎಲ್ಲ ಮತದಾರರಿಗೂ ನನ್ನ ಮನ: ಪೂರ್ವಕ ಕೃತಜ್ಞತೆಗಳು ಎಂದು ಹಾಲಾಡಿ ತಿಳಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೂ ಹಾಗೂ ನಾನು ಪಕ್ಷೇತರರಾಗಿ ಸ್ಪರ್ಧೆಗೆ ನಿಂತಾಗಲೂ ಗೆಲ್ಲಿಸಿದ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಎಲ್ಲಾ ಮತಬಾಂಧವರೂ ಸಹಕಾರ ಮಾಡುವಂತೆ ಹಾಲಾಡಿ ಮನವಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!