Friday, March 29, 2024
spot_imgspot_img
spot_imgspot_img

ವಿಟ್ಲ: ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ಅಂಚೆ ಕಾರ್ಡ್ ಚಳವಳಿಗೆ ಚಾಲನೆ

- Advertisement -G L Acharya panikkar
- Advertisement -

ವಿಟ್ಲ: ರಾಕ್ಷಸ ಪ್ರವೃತ್ತಿ ಕಂಪನಿ ಎದುರಿಗೆ ಸಿಗುವ ರೈತರನ್ನು ನಾಶ ಮಾಡಲು ಮುಂದಾಗಿದೆ. ಇತಿಹಾಸದ ದಿನದಲ್ಲಿ ಹಾಗೂ ಇತ್ತೀಚಿನದ ದಿನದಲ್ಲಿ ದೇವರನ್ನು ಪ್ರಾರ್ಥಿಸಿದಾಗ ಪ್ರತ್ಯಕ್ಷವಾಗಿ ರಾಕ್ಷಸರನ್ನು ವಧಿಸಿದ ಘಟನೆಗಳಿದೆ. ಎರಡನೇ ಹಂತದಲ್ಲಿ ರೈತಾಪಿ ವರ್ಗವನ್ನು ಧಮನಿಸುವ ದುಷ್ಟರ ನಿಗ್ರಹಕ್ಕಾಗಿ ದೈವ ದೇವರ ಬಳಿ ದೂರು ನೀಡುವ ಕಾರ್ಯ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ವಿಟ್ಲ ರೈತ ಹೋರಾಟ ಸಮಿತಿ ಆಶ್ರಯದಲ್ಲಿ ಮಂಗಳವಾರ ಕರ್ನಾಟಕ ಮುಖ್ಯ ಮಂತ್ರಿಗಳಿಗೆ ಹಾಗೂ ದ. ಕ. ಜಿಲ್ಲಾ ದಂಡಾಧಿಕಾರಿಗಳಿಗೆ ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ಅಂಚೆ ಕಾರ್ಡ್ ಚಳವಳಿಗೆ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಾದ ಕಟೀಲು, ಪೊಳಲಿ, ಪಣೋಳಿಬೈಲು, ವಿಟ್ಲ ಶ್ರೀ ಪಂಚಲಿಂಗೇಶ್ವರ, ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರ, ಬದಿ ಅಡ್ಕ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಮೂಲ ಸನ್ನಿಧಿ, ಕಡಂಬು ಕಲ್ಲುರ್ಟಿ ಕ್ಷೇತ್ರ, ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕುತ್ತಾರು ಕೊರಗಜ್ಜ ಕ್ಷೇತ್ರ ಸೇರಿ ಪ್ರಸಿದ್ಧ ಮಸೀದಿಗಳು ಹಾಗೂ ಚರ್ಚುಗಳಲ್ಲಿ ವಿಶೇಷ ಹರಿಕೆ ಪ್ರಾರ್ಥನೆ ಸಲ್ಲಿಸುವ ಕಾರ್ಯವನ್ನು ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರಶೆಟ್ಟಿ ಬೈಲುಗುತ್ತು ಮಾತನಾಡಿ ಪಡುಬಿದ್ರೆಯಲ್ಲೇ ಯೋಜನೆಯನ್ನು ತಡೆ ಹಿಡಿಯಬೇಕೆಂಬ ನಿಟ್ಟಿನಲ್ಲಿ ಸಂಘಟನೆ ಕಾರ್ಯ ಪ್ರವೃತ್ತವಾಗಿದೆ. ರೈತರನ್ನು ಸರ್ವನಾಶ ಮಾಡಲು ಹೊರಟ ಸರ್ಕಾರದ ದೋರಣೆಯನ್ನು ಕೈಬಿಡಬೇಕು. ರೈತರು ಎಂದರೆ ಕೈಲಾಗದವರು ಎಂಬ ಮಂದ ಬುದ್ದಿಯನ್ನು ಹೊಂದಿದ ಜಿಲ್ಲಾಧಿಕಾರಿಗಳಿಗೆ ಅಂಚೆ ಕಾರ್ಡ್ ಮೂಲಕ ಮನವಿಯನ್ನು ಕಳುಹಿಸುವ ಕಾರ್ಯ ಮಾಡಲಾಗಿದೆ. ರೈತರ ಜತೆಗೆ ಸ್ನೇಹವನ್ನು ಬೆಳೆಸಿ ಕಂಪನಿಯನ್ನು ಜಿಲ್ಲೆಯಿಂದ ಒದ್ದು ಓಡಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕೆಂದು ಎಂದು ಆಗ್ರಹಿಸಿದರು.

ವಿಟ್ಲ ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಕೆ. ಮಾತನಾಡಿ ವಿದ್ಯುತ್ ಮಾರ್ಗದ ವಿರುದ್ಧ ಹಲವು ರೀತಿಯಲ್ಲಿ ಪ್ರತಿಭಟನೆಯನ್ನು ಸೂಚಿಸಲಾಗಿದೆ. ಆದರೆ ಸರ್ಕಾರದಿಂದ, ಯಾವುದೇ ಅಧಿಕಾರಿಗಳಿಂದ ಇದಕ್ಕೆ ಪ್ರತಿಕ್ರಿಯೆ ಬಂದಿರುವುದಿಲ್ಲ. ಮಾಧ್ಯಮಗಳಲ್ಲಿ ರೈತರಿಗೆ ಬಂಪರ್ ಕೊಡುಗೆ ಎಂದು ಹೇಳಿಕೊಂಡರೂ, ರೈತರು ಬದುಕನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದೆ. ಆಡಳಿತ ವರ್ಗಕೆ ರೈತರೆಂದರೆ ತಿರಸ್ಕಾರದ ಭಾವನೆ ಇರಬಹುದು. ರೈತರಿಂದ ರೈತರಿಗಾಗಿ ನಡೆಯುವ ಹೋರಾಟ ನಿರಂತವಾಗಿರುತ್ತದೆ ಎಂದು ಎಚ್ಚರಿಸಿದರು.

ಹೋರಾಟ ಸಮಿತಿ ಕಾರ್ಯದರ್ಶಿ ರೋಹಿತಾಕ್ಷ ಬಂಗ ವೀರಕಂಭ, ಲಕ್ಷ್ಮೀ ನಾರಾಯಣ, ಕೃಷ್ಣ ಪ್ರಸಾದ್, ಸುಭಾಷ್ ರೈ ಮೂಡಿಮಾರು, ಚಿತ್ತರಂಜನ್ ನೆಕ್ಕಿಲಾರ್, ಪದ್ಮನಾಭ ಕೊಚ್ಚೋಡಿ, ಶಶಿ ಕೊಚ್ಚೋಡಿ, ಸಂಜೀವ ಮಂಜಲಾಡಿ, ಅಣ್ಣ ಗೌಡ ಮಂಜಲಾಡಿ, ವಿಶುಕುಮಾರ್, ಭಾಸ್ಕರ್ ಗೌಡ, ಜಾನ್ ಮಸ್ಕರೇನಸ್, ಶಿವರಾಮಗೌಡ, ರಾಬರ್ಟ್ ಮಸ್ಕಾರೆನ್ಹಸ್, ಸಾಲಿ ಮಂಗಲಪದವು, ರಜಾಕ್ ಮಂಗಲಪದವು, ಆನಂದ ಗೌಡ, ವಿಷ್ಣು ಭಟ್ ಆಲಂಗಾರು ಮತ್ತಿತರರು ಹಾಜರಿದ್ದರು.

ವಿಟ್ಲ ಪಟ್ಟಣ ಪಂಚಾಯಿತಿಗೆ ಪತ್ರ:
400ಕೆವಿ ವಿದ್ಯುತ್ ಮಾರ್ಗವನ್ನು ರೈತರ ಭೂಮಿಯಲ್ಲಿ ನಿರ್ಮಾಣ ಮಾಡುವುದಕ್ಕೆ ವಿರೋಧವಿದೆ. ವಿಟ್ಲ ಪಟ್ಟಣ ಪಂಚಾಯಿತಿ ಈ ಯೋಜನೆಗೆ ಯಾವುದೇ ಕಾರಣಕ್ಕೂ ನಿರಪೇಕ್ಷಣಾ ಪತ್ರವನ್ನುನೀಡಬಾರದು. ಸರ್ಕಾರ ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಸ್ಥಳೀಯರು ರೈತರು ಹೋರಾಟ ಸಮಿತಿಯ ಮೂಲಕ ವಿಟ್ಲ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ/ಮುಖ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಅವರಿಗೆ ನೀಡಿದರು.

- Advertisement -

Related news

error: Content is protected !!