Friday, April 19, 2024
spot_imgspot_img
spot_imgspot_img

ವಿಟ್ಲ: ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ವಿಚಾರ- ರಾಜೇಶ್ ಬಾಳೆಕಲ್ಲು ಸ್ಪಷ್ಟನೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ಮುಖಂಡರ ಮೇಲೆ ನೇರ ಸವಾಲು

- Advertisement -G L Acharya panikkar
- Advertisement -

ವಿಟ್ಲ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಣಿಲ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಮಾಜಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಸ್ಪಷ್ಟೀಕರಣ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಯಲ್ಲಿ ನನ್ನನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿರುವ ವಿಚಾರ ತಿಳಿಯಿತು. ನನ್ನ ಬಗ್ಗೆ ಆರೋಪಗಳಿರುವ ಬಗ್ಗೆ ನನ್ನ ವಿಚಾರಣೆಯಾಗಲಿ ಅಥವಾ ನನಗೆ ನೋಟಿಸಾಗಲೀ ಈವರೆಗೆ ನೀಡಿಲ್ಲ.

ಮಾತ್ರವಲ್ಲದೆ ನನ್ನನ್ನು ಉಚ್ಚಾಟಿಸಲಾಗಿರುವ ಬಗ್ಗೆ ಯಾವುದೇ ನೋಟೀಸು ನನಗೆ ಬಂದಿಲ್ಲ. ನಾನು ಕಳೆದ 19ನೇ ತಾರೀಕಿನಂದು ನನ್ನ ರಾಜಿನಾಮೆ ಪತ್ರವನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರಿಗೆ ರವಾನೆ ಮಾಡಿದ್ದೇನೆ. ಓರ್ವ ಕಾರ್ಯಕರ್ತ ರಾಜಿನಾಮೆ ಕೊಟ್ಟ ಬಳಿಕ ಆತನನ್ನು ಉಚ್ಚಾಟನೆ ಮಾಡುವ ಪ್ರಮೇಯವೇ ಬರುವುದಿಲ್ಲ. ನನ್ನ ಸ್ವಾಭೀಮಾನಕ್ಕೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ನಾನು ರಾಜಿನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದೇನೆ.

ನಾನು ಪಕ್ಷದ ಓರ್ವ ನಿಷ್ಠಾವಂತ ಸಕ್ರೀಯ ಕಾರ್ಯಕರ್ತನಾಗಿ ಸುಮಾರು 25 ವರ್ಷಗಳ ಕಾಲ ಪಕ್ಷದ ಭಲವರ್ಧನೆಗಾಗಿ ಶ್ರಮಿಸಿದ್ದೇನೆ. ಇದೀಗ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎನ್ನುವ ವಿಚಾರ ಬೇಸರ ತಂದಿದೆ. ಪೆರುವಾಯಿ ಹಾಗೂ ಮಾಣಿಲ ಗ್ರಾಮ ಪಂಚಾಯತನ್ನು ಕಳೆದ 5 ವರ್ಷದ ಅವಧಿಯಲ್ಲಿ ನನ್ನ ನೇತೃತ್ವದಲ್ಲಿ ಅಧಿಕಾರಕ್ಕೆ ತಂದಿದ್ದೇನೆ. ಮಾಣಿಲ ಗ್ರಾಮ ಪಂಚಾಯತ್ ನ ಎರಡು ಕ್ಷೇತ್ರಗಳಲ್ಲಿ 3 ಅವಧಿಗೆ ಸ್ಪರ್ಧಿಸಿ ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ.

ಪೆರುವಾಯಿ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷನಾಗಿ, ಉಪಾಧ್ಯಕ್ಷನಾಗಿ ಮಾಣಿಲ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷನಾಗಿ ಪ್ರಸ್ತುತ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈ ಭಾಗದಲ್ಲಿ ಪಕ್ಷದ ಭಲವರ್ಧನೆಗೆ ಬಹಳಷ್ಟು ಶ್ರಮಿಸಿದ್ದೇನೆ. ಇವತ್ತಿನ ಪರಿಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಯಾರದ್ದೋ ಕುಮ್ಮಕ್ಕಿಗೆ ಒಳಗಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಇವರಿಗೆ ನನ್ನನ್ನು ಉಚ್ಚಾಟನೆ ಮಾಡುವ ನೈತಿಕ ಹಕ್ಕಿಲ್ಲ. ಯಾಕೆಂದರೆ ಹರೀಶ್ ಕುಮಾರ್ ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಬಂದಿರುವುದು ಹಿಂಭಾಗಿಲ ಮೂಲಕವಾಗಿದೆ.

ಇವರು ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಜಿಲ್ಲೆಯಲ್ಲಿ ನೆಲಕಚ್ಚುತ್ತಾ ಹೋಗಿದೆ. ಎಂಎಲ್ ಎ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ತನ್ನ ಪಾರಪತ್ಯವನ್ನು ಕಳೆದುಕೊಳ್ಳುತ್ತಾ ಹೋಗಿದೆ ವಿನಃ, ಅಭಿವೃದ್ಧಿಯಾಗಿರುವುದು ಕಂಡುಬರುತ್ತಿಲ್ಲ. ಆದರೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಪೆರುವಾಯಿ ಮಾಣಿಲ ಗ್ರಾಮ ಪಂಚಾಯತ್ ಅನ್ನು ನಾನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ನನ್ನನ್ನು ಉಚ್ಚಾಟನೆ ಮಾಡಲು ಕಾರಣವೇನೆಂಬುದನ್ನು ಅಧ್ಯಕ್ಷರು ತಿಳಿಸಬೇಕಾಗಿದೆ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಅಥವಾ ನಾಯಕರನ್ನು ನಿಂಧಿಸಿದ್ದೇನೆ ಎಂದಾದರೆ ನನಗೆ ದಾಖಲೆ ಸಮೇತವಾಗಿ ತೋರಿಸಿ.

ಯಾವುದೇ ವಿಚಾರಣೆ ನಡೆಸದೆ, ನೋಟೀಸು ನೀಡದೆ ನನ್ನನ್ನು ಉಚ್ಚಾಟನೆ ಮಾಡಿರುವುದು ಸಮಂಜಸವಾದ ನಿರ್ಧಾರವಲ್ಲಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿಯವರ ಕುಮ್ಮಕ್ಕಿನಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎನ್ನುವುದು ನನಗೆ ಸ್ವತಃ ಅನುಭವವಾಗಿದೆ. ಅನೇಕ ಕಾರ್ಯಕರ್ತರನ್ನು ಶಕುಂತಳಾ ಶೆಟ್ಟಿಯವರು ತೊಂದರೆ ಮಾಡಿದ್ದಾರೆ, ಅವರನ್ನು ತುಳಿಯುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಬಂಟ್ವಾಳ ಭೂ ಅಭಿವೃದ್ಧಿ ನಿರ್ದೇಶಕರ ಸ್ಥಾನಕ್ಕೆ ಕೊಲ್ನಾಡು ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದೇನೆ. ಪೆರುವಾಯಿ ವ್ಯ. ಸೆ. ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಪ್ರಪ್ರಥಮ ಬ್ಯಾಂಕ್ ಚುನಾವಣೆಯಲ್ಲಿ ಆಯ್ಕೆಯಾಗಿರುತ್ತೇನೆ. ಹತ್ತು ಹಲವು ಸಂಘಟನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅದರಲ್ಲೂ ವಿಟ್ಲ, ಮಾಣಿಲ, ಪೆರುವಾಯಿ, ಅಳಿಕೆ,ಕೇಪು, ಪುಣಚ ಮುಂತಾದ ಕಡೆ ನನ್ನದೇ ಆದ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿ ಕೆಲಸ ಕಾರ್ಯಗಳನ್ನು ಅನೇಕ ವರ್ಷಗಳಿಂದ ಕಾರ್ಯ ನಿಭಾಯಿಸಿಕೊಂಡು ಬಂದಿದ್ದೇನೆ.ಆದರೆ ಕಳೆದ 4-5 ವರ್ಷಗಳಿಂದ ಈ ಕಾಂಗ್ರೆಸ್ ಮಾಜಿ ಶಾಸಕಿಯವರ ಕಿರುಕುಳದಿಂದಾಗಿ ಪಕ್ಷದಲ್ಲಿ ಬಹಳಷ್ಟು ನೊಂದಿದ್ದೇನೆ. ಕಳೆದ ಎರಡು ಬಾರಿ ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕವಾಗಬೇಕಿತ್ತು. ಪಕ್ಷದ ಕಾರ್ಯಕರ್ತರ ಒಲವು ಮತ್ತು ಬೆಂಬಲ ನನಗೆ ಇತ್ತು ಆದರೆ ಮಾಜಿ ಶಾಸಕಿಯ ಸರ್ವಾಧಿಕಾರ ಮತ್ತು ದುರಂಕಾರದಿಂದ ನಾನು ಅದನ್ನು ಕಳೆದುಕೊಂಡೆ. ಅಲ್ಲದೆ ಗ್ರಾಮ ಪಂ. ಚುನಾವಣೆಯಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಿ ಸೋಲಿಸಲು ಸತಾಯ ಗತಾಯ ಪ್ರಯತ್ನ ನಡೆಸಿದರು.

ನನ್ನನ್ನು ಉಚ್ಚಾಟಿಸಲು ನೀಡಿದ ಕಾರಣ ನೋಡಿ ಒಬ್ಬ ಜಿಲ್ಲಾ- ಕಾಂಗ್ರೆಸ್ ಅಧ್ಯಕ್ಷನಿಗೆ ಪಕ್ಷದ ನೀತಿ ನಿಯಮಗಳನ್ನು ತಿಳಿದುಕೊಳ್ಳಲು ಆಗದ ದುಃಸ್ಥಿತಿಯನ್ನು ಕಂಡಿದ್ದೇನೆ. ಗ್ರಾ. ಪಂ. ಚುನಾವಣೆಯಲ್ಲಿ ಯಾವುದೇ ಪಕ್ಷದ ಅಥವಾ ಬೆಂಬಲಿತ ಅಭ್ಯರ್ಥಿ ಎಂಬುದು ಇಲ್ಲ ಎಂಬ ಕನಿಷ್ಠ ಪರಿಜ್ಞಾನವು ಇಲ್ಲದ ಈ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷನಿಂದಾಗಿ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಳುಗಿದಹಡಗಾಗಿದೆ. ಹರೀಶ್ ಕುಮಾರ್ ಅವರು ಜಿಲ್ಲಾ- ಕಾಂಗ್ರೆಸ್ ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಈ ಜಿಲ್ಲೆಯಲ್ಲಿ 7ಜನ ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದರು. ಆದರೆ ಇವರ ಸಂಘಟನಾ ಶ್ರಮದಿಂದ ಈಗ ಏಕೈಕ ಶಾಸಕರು ಮಾತ್ರ ಇದ್ದಾರೆ.

ಅದೇ ರೀತಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ, ಬೆಳ್ತಂಗಡಿ, ಮೂಡಬಿದಿರೆ, ಬಂಟ್ವಾಳ, ಪುತ್ತೂರು, ಉಳ್ಳಾಲ, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಇತ್ತು ಆದರೆ ಜಿಲ್ಲಾಧ್ಯಕ್ಷರ ಪಕ್ಷ ಸಂಘಟನೆಯಿಂದ ಈಗ ಇದೆಲ್ಲಾ ಬಿ. ಜೆ.ಪಿ ಆಡಳಿತದಲ್ಲಿದೆ. ಅದೇ ರೀತಿ ಈ ಜಿಲ್ಲೆಯಲ್ಲಿ ನಡೆದ ಇತ್ತೀಚಿನ ಗ್ರಾ. ಪಂ. ಚುನಾವಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಸ್ವಂತ ಅಧ್ಯಕ್ಷರ ಊರಾದ ಬೆಳ್ತಂಗಡಿ ತಾಲೂಕಿನಲ್ಲಿ 48 ಗ್ರಾ. ಪಂ. ಪೈಕಿ ಕಾಂಗ್ರೆಸ್ ಕೇವಲ ೪ರಲ್ಲಿ ಆಡಳಿತದಲ್ಲಿದೆ. 12 ಗ್ರಾ. ಪಂ ನಲ್ಲಿ ಶೂನ್ಯ ಸಂಘಟನೆಯಾಗಿದೆ.

ಬೆಳ್ತಂಗಡಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲಾಗದ ಜಿಲ್ಲಾಧ್ಯಕ್ಷ ನನ್ನನ್ನು ಉಚ್ಚಾಟನೆ ಮಾಡುವ ನೈತಿಕತೆ ಇದೆಯೇ ಎಂಬುದು ಪ್ರಶ್ನೆ. ಪುತ್ತೂರಿನ ಮಾಜಿ ಶಾಸಕಿಯ ಕಥೆಯೇ ಬೇರೆ ಪುತ್ತೂರಿನಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಕಾಂಗ್ರೆಸ್ ಮಾಜಿ ಶಾಸಕಿಯೇ ಸಾಕು, ಪಕ್ಷದಿಂದ, ಪಕ್ಷಕ್ಕೆ ಹಾರುವ ಎರಡು ಬಾರಿ ಬಂಟ್ವಾಳದಲ್ಲಿ ಸೋತು ಪುತ್ತೂರಿನಲ್ಲಿ ಸುಧಾಕರ ಶೆಟ್ಟಿ ಮತ್ತು ಬೊಂಡಾಲ ಜಗನ್ನಾಥ ಶೆಟ್ಟಿಯವರ ಸೋಲಿಗೆ ಕಾರಣರಾಗಿ ಯಾರೋ ಕಟ್ಟಿದ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಬಂದು ಇಲ್ಲೂ ಸರ್ವಾಧಿಕಾರ ಮತ್ತು ದುರಂಕಾರದಿಂದ ಮೆರೆದು ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ್ದು ಇದೆ ಮಾಜಿ ಶಾಸಕಿ. ನನ್ನ ವಿರುದ್ಧ ನಿರಂತರ ಪಿತೂರಿ ನಡೆಸಿ ಈ ದಿನ ನನ್ನ ವಿರುದ್ಧ ಜಿಲ್ಲಾಧ್ಯಕ್ಷರಿಗೂ ದೂರು ನೀಡಿ ನನ್ನನ್ನು ಉಚ್ಚಾಟಿಸಿದ್ದೇನೆ ಎಂದು ಸಂತೋಷಪಡುತ್ತಿರುವ ವಿಘ್ನ ಸಂತೋಷಿಯನ್ನು ನಾನು ಕಂಡಿದ್ದೇನೆ.

ನಾನು ಪಕ್ಷದಲ್ಲಿ ಪ್ರಾಮಾಣಿಕ ತೊಡಗಿಕೊಂಡು ಇರುವ ಸಂಧರ್ಭದಲ್ಲಿ ನನ್ನ ಮೇಲೆ ಈ ರೀತಿಯ ಪಿತೂರಿಗಳಿಂದ ನನ್ನ ಸ್ವಇಚ್ಛೆಯಿಂದಲೇ ನಾನು ಕಳೆದ 19/04/2021 ರಂದು ಜಿಲ್ಲಾ-ಅಧ್ಯಕ್ಷರಿಗೆ ನನ್ನ ರಾಜೀನಾಮೆಯನ್ನು ಕಳುಹಿಸಿಕೊಟ್ಟಿದ್ದೇನೆ. ಈ ರಾಜೀನಾಮೆಯನ್ನು ಕಂಡು ಆನಂತರ ದಿನಾಂಕ ಇಲ್ಲದ ನನ್ನ ಉಚ್ಚಾಟನೆಯ ಆದೇಶವನ್ನು ಹೊರಡಿಸಿದ್ದಾರೆ. ನಮ್ಮ ಪಕ್ಷಕ್ಕೆ ನಿಮ್ಮ ಉಚ್ಚಾಟನೆಯ ಮೊದಲೇ ನಾನು ದೊಡ್ಡ ಸಲಾಂ ಮಾಡಿದ್ದೇನೆ. ನಿಮ್ಮ ಮುಳುಗುವ ಹಡಗಿನಲ್ಲಿ ನನ್ನ ಪಯಣವನ್ನು ನಿಲ್ಲಿಸಿದ್ದೇನೆ. ನಿಮ್ಮ ಉಚ್ಚಾಟನೆಗೆ ದಿಕ್ಕಾರವಿರಲಿ. ಇನ್ನು ಮುಂದಿನ ದಿನಗಳಲ್ಲಿ ನನ್ನ ತಾಕತ್ತು ಮತ್ತು ನನ್ನ ಸಂಘಟನೆ ಏನು ಎಂಬುದನ್ನು ತೋರಿಸಿಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

driving
- Advertisement -

Related news

error: Content is protected !!