Saturday, April 27, 2024
spot_imgspot_img
spot_imgspot_img

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

- Advertisement -G L Acharya panikkar
- Advertisement -
vtv vitla

ದೇವಾಲಯದ ಒಳಗೆ ರಾಜಕೀಯ, ಜಾತಿ, ಮೇಲುಕೀಳೆಂಬ ಭಾವ ಬೇಡ; ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ

ವಿಟ್ಲ: ಹಿಂದೂ ಸಮಾಜದ ನೈತಿಕ ಬದ್ದತೆಯನ್ನು ಉಳಿಸುವ ಕೆಲಸವಾಗಬೇಕು. ಜಗತ್ತಿನ ಸೃಷ್ಟಿಯಲ್ಲಿ ರಕ್ತ ಬಹಳಷ್ಟು ಪವಿತ್ರವಾದುದು. ಮಕ್ಕಳು ದೇವರಿಗೆ ಸಮಾನ. ಮಂಗಳ ಕಾರ್ಯದಲ್ಲಿ ಅಮಂಗಳವಿರಬಾರದು. ದೇವಸ್ಥಾನ, ಮಠ ಮಂದಿರಗಳಿಂದ ತೃಪ್ತಿ ಲಭಿಸಲು ಸಾಧ್ಯ. ದೇವಾಲಯದ ಒಳಗೆ ರಾಜಕೀಯ, ಜಾತಿ, ಮೇಲುಕೀಳೆಂಬ ಭಾವ ಬೇಡ. ಸಹಕಾರ ಸಹಾನುಭೂತಿಯ ಚಿಂತನೆ ಎಲ್ಲರಲ್ಲೂ ಬರಲಿ ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.3ರಿಂದ ಜ.8ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಜ.4ರಂದು ಕ.ಶಿ.ವಿಶ್ವನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜಾರಾಮ ಭಟ್ ರವರು ಮಾತನಾಡಿ ಹಲವಾರು ಕಾರಣಿಕತೆಗೆ ಸಾಕ್ಷಿಯಾಗಿರುವ ಕ್ಷೇತ್ರ ಕೋಲ್ಪೆ. ಗೋಮಾತೆಯನ್ನು ಪೂಜೆ‌ ಮಾಡಿದಲ್ಲಿ ಎಲ್ಲಾ ದೇವರು ನಮಗೊಲಿಯಲು ಸಾಧ್ಯ. ಹಿಂದೂ ಸಮಾಜವನ್ನು ಬಡಿದೆಬ್ಬಿಸುವ ಕಾರ್ಯವಾಗಬೇಕಿದೆ. ಶತ್ರುವನ್ನು ಜಾಣ್ಮೆಯಿಂದ ಹಿಮ್ಮೆಟ್ಟಿಸುವ ಛಲ ಬೇಕು. ಸಮಾಜ ವಿಶ್ವಾಸ, ನಂಬಿಕೆಯ ಮೇಲೆ ನಿಂತಿದೆ. ನಮ್ಮ ವಿಶ್ವಾಸ ನಮ್ಮನ್ನು ಕಾಪಾಡುತ್ತದೆ. ಗ್ರಾಮದ ಜನರ ಜೀವನ ಪಾವನವಾಗಲಿ ಎಂದರು.

ಬನ್ನೂರು ರೈತಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ಬರ ಭಟ್ ಪಂಜಿಗುಡ್ಡೆರವರು ಮಾತನಾಡಿ ಬ್ರಹ್ಮಕಲಶಕ್ಕೆ ಬಹಳ ಪಾವಿತ್ರ್ಯವಿದೆ. ದೇವಾಲಯದ ನಿಯಮಗಳನ್ನು ಪಾಲನೆ ಮಾಡಿಕೊಂಡು ನಾವು ಮುಂದುವರೆಯಬೇಕು. ಹಿಂದೂ ಧರ್ಮ ಶ್ರೇಷ್ಟವಾದುದು. ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ವಿಷವನ್ನು ಅಮೃತಮಾಡುವ ಶಕ್ತಿ ಗೋವುಗಳಿಗಿದೆ. ಪ್ರತೀ ಮನೆಮನೆಗಳಲ್ಲಿ ಗೋವುಗಳನ್ನು ಸಾಕುವಂತಾಗಬೇಕು.

ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲುರವರು ಮಾತನಾಡಿ ನಾವು ನಂಬಿದ ದೇವರು ನಮ್ಮನ್ನು ಕೈಬಿಡುವುದಿಲ್ಲ. ಅರ್ಪಣಾ ಭಾವದ ಸೇವೆ ನಮ್ಮಲ್ಲಿರಲಿ. ಕಾಲ ಬದಲಾದರೂ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು ಎಂದರು.

ರಾಜ್ಯಧಾರ್ಮಿಕ ಪರಿಷತ್ ನ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಿ ನಾವು ಮಾಡುವ ಕೆಲಸದ ಬಗ್ಗೆ ನಮಗೆ ಅರಿವಿರಬೇಕು. ವೇದಗಳ ಆದಾರದಲ್ಲಿ ಹಿಂದೂ ಧರ್ಮ ನಿಂತಿದೆ. ನಾವು ನಡೆದು ಬಂದ ದಾರಿಯನ್ನು ಅವಲೋಕನ ಮಾಡಿದಾಗ ಜೀವನ‌ ಸಾರ್ಥಕವಾಗುತ್ತದೆ. ನಮ್ಮ ಪ್ರಯತ್ನವನ್ನು ನಾವು ನಿರಂತರವಾಗಿ ಮಾಡಬೇಕು. ಮಕ್ಕಳನ್ನು ಸ್ವಪ್ರಜ್ಞೆ ಮೂಡುವ ರೀತಿಯಲ್ಲಿ ಬೆಳೆಸಬೇಕು. ನಮ್ಮ ಮಕ್ಕಳನ್ನು ತಿದ್ದುವ ಮೊದಲು ನಾವು ಬದಲಾಗಬೇಕು. ಸಂಸ್ಕೃತಿ ಕಲಿಸುವ ಕೆಲಸ ಇಂತಹ ದೇವಾಲಯಗಳಿಂದ ಆಗಬೇಕಾಗಿದೆ. ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ. ಕಷ್ಟವನ್ನು ಮೆಟ್ಟಿನಿಂತಾಗ ಆದರ್ಶ ವ್ಯಕ್ತಿಯಾಗಲು ಸಾಧ್ಯ.

ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎಂ.ಹೆಚ್. ರಮೇಶ್ ಭಟ್ ಮಿತ್ತೂರುರವರು ಮಾತನಾಡಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಲವರ ನಿಸ್ವಾರ್ಥ ಸೇವೆ ಇದೆ. ಎಲ್ಲರೂ ಒಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ನವಚೇತನಾ ಚಿಟ್ಸ್ ಪ್ರೈವೇಟ್ ಲಿ.ನ ಆಡಳಿತ ನಿರ್ದೇಶಕ ಲೊಕೇಶ್ ಶೆಟ್ಟಿ, ಕುಂಜಾರು ಮದಗಶ್ರೀ ಜನಾರ್ದನ ದೇವಸ್ಥಾನದ ಅಧ್ಯಕ್ಷ ಹಾರೆಕೆರೆ ವೆಂಕಟ್ರಮಣ ಭಟ್, ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಪಾಣೆಮಂಗಳೂರು ಸುಮಂಗಲಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು , ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲದ ಅಧ್ಯಕ್ಷ ಹಿಮಕರ ಗಾಣಿಗ, ವ್ಯವಸ್ಥಾಪನಾ ಸಮಿತಿ ಸದಸ್ಯ‌ ಶೇಖರ ಕಂಬಳಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಿಮ್ಮಪ್ಪ ಸಪಲ್ಯ ದೇವಸ್ಯ, ಶಿವಶಂಕರ ಭಟ್, ಶಶಿಧರ ಭಂಡಾರಿ ಸೂರ್ಯ, ಪದ್ಮಾವತಿ ಬೀಡಿನ ಮಜಲು, ತಿಮ್ಮಪ್ಪ ಗೌಡ ಕೊಡಂಗೆರವರನ್ನು ಗೌರವಿಸಲಾಯಿತು. ಜಯಸ್ಮಿತಾ ಪ್ರಾರ್ಥಿಸಿದರು. ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಪುಲ್ಲಚಂದ್ರ ಪಿ.ಜಿ.ಕೋಲ್ಪೆ ರವರು ಸ್ವಾಗತಿಸಿದರು. ದಿನೇಶ್ ಕೊಪ್ಪಳ ವಂದಿಸಿದರು. ಜಯಶ್ರೀ ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!