


ವಿಟ್ಲ: ವಿಠಲ ವಿದ್ಯಾ ಸಂಘ, ವಿಠಲ ಪ್ರೌಢ ಶಾಲೆಯ ವಿದ್ಯಾ ಪೋಷಕ ಸಮಿತಿ ವತಿಯಿಂದ ಉಚಿತ ಶಿಕ್ಷಣ ಅಭಿಯಾನ, ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಮತ್ತು ಗಾಂಧಿ ಜಯಂತಿ ಆಚರಣೆ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಮೈಸೂರು ಎಸ್.ಎಲ್.ವಿ. ಗ್ರೂಪ್ಸ್ ನ ಮಾಲಕ, ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ನೇರ್ಲಾಜೆ ಅವರು ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಅಧ್ಯಾಪಕರ ಪಾತ್ರ ಮಹತ್ವದ್ದಾಗಿದೆ.

ಕಲಿಯುವ ವೇಳೆ ಅಧ್ಯಾಪಕರು ನನ್ನನ್ನು ತಿದ್ದಿ ಸರಿದಾರಿಗೆ ತಂದಿರುವ ಹಿನ್ನೆಲೆಯಲ್ಲಿ ರೈತನ ಮಗನಾದ ನಾನು ಇಷ್ಟೊಂದು ಮೇಲ್ಮಟ್ಟಕ್ಕೆ ಏರಲು ಕಾರಣವಾಗಿದೆ. ಇದೀಗ ನಾನು ಮೈಸೂರಿನಲ್ಲಿ ಎಸ್.ಎಲ್.ವಿ.ಗ್ರೂಪ್ಸ್ ನ್ನು ಕಟ್ಟಿ ಬೆಳೆಸಿದ್ದೇನೆ. ಅಲ್ಲಿ ೧೫೦ ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಅಷ್ಟೊಂದು ಜನರಿಗೆ ಕೆಲಸ ಕೊಡುವ ಮಟ್ಟಕ್ಕೆ ನನ್ನನ್ನು ಬೆಳೆಸಿದ ಅದ್ಯಾಪಕ ವೃಂದಕ್ಕೆ ನಾನು ಸದಾ ರುಣಿಯಾಗಿದ್ದೇನೆ. ನಾನು ಮಾಡುವ ಉದ್ಯಮದಲ್ಲಿ ಬಂದಂತಹ ಲಾಭಾಂಶದ ಒಂದಿಷ್ಟನ್ನು ಸಮಾಜಸೇವೆಗಾಗಿ ಮೀಸಲಿಟ್ಟಿದ್ದೇನೆ. ಆ ಹಣದಲ್ಲಿ ಸಮಾಜದ ಬಡ ಬಗ್ಗರಿಗೆ ನನ್ನಿಂದಾಗುವ ಸಹಕಾರವನ್ನು ನೀಡುತ್ತಾ ಬರುತ್ತಿದ್ದೇನೆ. ಕಳೆದ ಕೆಲಸಮಯಗಳಿಂದ ನಾನು ಕಲಿತ ಈ ಶಾಲೆಗೆ ಸಹಕಾರವನ್ನು ನೀಡುತ್ತಾ ಬಂದಿದ್ದೇನೆ. ಇದೀಗ ೬೦೦ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಈ ಶಾಲೆಯ ಮಕ್ಕಳಿಗೆ ಬೇಕಾದ ಪುಸ್ತಕವನ್ನು ನೀಡುವುದಾಗಿ ನಾನು ಈ ಸಂದರ್ಭದಲ್ಲಿ ಭರವಸೆಯನ್ನು ನೀಡುತ್ತದ್ದೇನೆ ಎಂದರು.

ವಿಟ್ಲ ಅರಮನೆಯ ಬಂಗಾರು ಅರಸರು, ವಿಟ್ಲ ಗ್ರಾಮೀಣ ಸಹಕಾರಿಬ್ಯಾಂಕ್ ನ ಅಧ್ಯಕ್ಷ ಜಗನ್ನಾಥ ಸಾಲಿಯಾನ್ , ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕ್ಯಾಂಪ್ಕೋ ನಿರ್ದೇಶಕ ಸತೀಶ್ಚಂದ್ರ ಎಸ್.ಆರ್., ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ನಿತ್ಯಾನಂದ ನಾಯಕ ವಿಟ್ಲ , ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್, ವಿಠಲ ವಿದ್ಯಾ ಸಂಘ ದ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಪದ್ಮಯ್ಯ ಗೌಡ, ಭವಾನಿ ರೈಲ್ಯ, ಬಾಬು ಕೆ.ವಿ., ರವಿಪ್ರಕಾಶ್, ವಿಠಲ ಪ.ಪೂ. ಕಾಲೇಜಿನ ಪ್ರಾಚಾರ್ಯ ಆದರ್ಶ ಚೊಕ್ಕಾಡಿ ಉಪಸ್ಥಿತರಿದ್ದರು.

ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ ಸ್ವಾಗತಿಸಿದರು. ರಮೇಶ್ ಬಿ.ಕೆ ಹಾಗೂ ರಾಜಶೇಖರ ಕಾರ್ಯಕ್ರಮ ನಿರೂಪಿಸಿದರು. ಶಂಕರ ನಾರಾಯಣ ಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಹರಿ ಶರ್ಮ ವಂದಿಸಿದರು.











