Saturday, May 4, 2024
spot_imgspot_img
spot_imgspot_img

ವಿಟ್ಲ: ವಿವಾದಕ್ಕೆ ಕಾರಣವಾದ ಶಾಲಾ ಪ್ರಾರಂಭೋತ್ಸವದಂದು ನಡೆಸಿದ ಗಣಪತಿ ಹವನ; ವಿಚಾರಣೆಗೆ ಬೇಸತ್ತು ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯ ರಾಜೀನಾಮೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಸಮೀಪದ ಪಡಿಬಾಗಿಲು ಸರ್ಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದಂದು ಗಣಪತಿ ಹವನ ನಡೆಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇದನ್ನು ಮುಂದಿಟ್ಟು ಶಿಕ್ಷಣ ಇಲಾಖೆಯು ವಿಚಾರಣೆ ಸಂದರ್ಭ ಅಗೌರವಪೂರ್ವಕವಾಗಿ ನಡೆಸಿಕೊಂಡಿದೆ ಎಂದು ಆರೋಪಿಸಿ ಎಸ್‌ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ ರಾಜೀನಾಮೆ ನೀಡಿದ್ದಾರೆ. ಶಾಲಾಭಿವೃದ್ಧಿ ಸಮಿತಿಯ ನಿರ್ಣಯಕ್ಕೂ ಬೆಲೆ ನೀಡಿಲ್ಲ ಎಂದು ಮನನೊಂದು ಸಮಿತಿಯ ಸದಸ್ಯ ಎಂ. ಐತ್ತಪ್ಪ ನಾಯ್ಕ ಎಂಬವರು ಕೂಡ ರಾಜೀನಾಮೆ ನೀಡಿದ್ದಾರೆ.

ವಿಟ್ಲ ಹೋಬಳಿ ವ್ಯಾಪ್ತಿಯ ಪಡಿಬಾಗಿಲು ದ. ಕ. ಜಿ. ಪಂ.ಹಿ.ಪ್ರಾ.ಶಾಲೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಶಾಲಾ ಪ್ರಾರಂಭೋತ್ಸವದಂದು ಗಣಪತಿ ಹವನವನ್ನು ನಡೆಸಿಕೊಂಡು ಬರುವ ಸಂಪ್ರದಾಯವನ್ನು ಇಟ್ಟುಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಗಣಪತಿ ಹವನ ನಡೆಸಿ ಶಾಲೆ ಪ್ರಾರಂಭ ಮಾಡುವ ಬಗ್ಗೆ ಎಸ್. ಡಿ. ಎಂ. ಸಿ. 2022ರ ಮೇ 6ರಂದು ನಡೆಸಿದ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಅದರಂತೆ ಹವನವನ್ನು ನಡೆಸಲಾಗಿತ್ತು.

ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡದಿರುವ ಕುರಿತು ವಿವಾದ ಏರ್ಪಟ್ಟ ಹಿನ್ನೆಲೆಯಲ್ಲಿ ಸರಕಾರಿ ಶಾಲೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಹೋಮ, ಪೂಜೆ ನಡೆಸಿದ್ದು ತಪ್ಪು ಎಂದು ಕೆಲವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಈ ವಿವಾದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲೂ ವರದಿಯಾಗಿತ್ತು.

ಇದಾದ ಬಳಿಕ ದ.ಕ. ಜಿಲ್ಲಾಧಿಕಾರಿಗಳು ಈ ಬಗ್ಗೆ ವರದಿ ನೀಡುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು. ಈ ಸಂಬಂಧ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ವಿಚಾರಣೆ ನಡೆಸಿದ್ದು ವರದಿಯನ್ನು ಡಿಡಿಪಿಐಯವರಿಗೆ ನೀಡಿದ್ದಾರೆ. ವಿಚಾರಣೆ ನಡೆಸಿದರಿಂದ ಬೇಸತ್ತು ಹಾಗೂ ವಿಚಾರಣೆ ವೇಳೆ ತನ್ನನ್ನೂ ಆರೋಪಿ ರೀತಿ ನಿಲ್ಲಿಸಿ ವಿಚಾರಣೆ ನಡೆಸಲಾಯಿತು ಎಂದು ಮನನೊಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ ರಾಜೀನಾಮೆ ನೀಡಿದ್ದರು. ಈ ಬಗ್ಗೆ ಪತ್ರ ಬರೆದಿರುವ ಅವರು ಎಸ್.ಡಿ.ಎಂ. ಸಿ. ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಗಣಪತಿ ಹವನ ನಡೆಸಿರುವುದು ಸರಿಯಲ್ಲ ಎಂದು ಸ್ಥಳೀಯ ಸಿ.ಆರ್.ಪಿ. ತಿಳಿಸಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆಂದು ತಿಳಿಸಿದ್ದಾರೆ.

ಇದಾದ ಬಳಿಕ ಎಸ್.ಡಿ.ಎಂ.ಸಿ. ಸದಸ್ಯ ಸ್ಥಾನಕ್ಕೆ ಎಂ. ಐತ್ತಪ್ಪ ನಾಯ್ಕ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಏಳುವರ್ಷದಿಂದ ಶಾಲಾಭಿವೃದ್ಧಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಿತಿಯ ನಿರ್ಣಯಗಳಿಗೆ ಬೆಲೆ ನೀಡದೇ ಇರುವುದು ಹಾಗೂ ಶಾಲಾಭಿವೃದ್ಧಿಯ ಚಟುವಟಿಕೆಗಳಿಗೆ ಶಿಕ್ಷಣ ಇಲಾಖೆ ಕನಿಷ್ಠ ಗೌರವವನ್ನೂ ನೀಡದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಶಾಲೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಶಾಲಾ ಪ್ರಾರಂಭೋತ್ಸವದಂದು ಗಣಪತಿ ಹವನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆ ಶಾಲೆಯಲ್ಲಿ ಆಗಾಗ ಅನಪೇಕ್ಷಿತ ಘಟನೆಗಳು ನಡೆಯುತಿತ್ತು. ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ದೈಹಿಕವಾಗಿ ಹಾನಿ ಸಂಭವಿಸಿದ ಘಟನೆಗಳು ಜರುಗಿದವು. ಹೀಗಾಗಿ 15 ವರ್ಷಗಳ ಹಿಂದೆ ಇಲ್ಲಿ ಶಾಲೆ ಪ್ರಾರಂಭೋತ್ಸವದಂದು ಗಣಪತಿ ಹೋಮ ನಡೆಸಲಾಯಿತು. ಆಮೇಲೆ ಶಾಲೆಯ ಸ್ಥಿತಿಗತಿಯು ಸುಧಾರಿಸಿದೆ. ಹಾಗಾಗಿ ಅದನ್ನು ಮುಂದೆ ಅನುಚೂನವಾಗಿ ನಡೆಸಲಾಗುತಿತ್ತು ಎಂದು ಶಾಲಾಭಿವೃದ್ಧಿ ಸಮಿತಿ, ಪೋಷಕರು, ಗ್ರಾಮಸ್ಥರು ತಿಳಿಸಿದ್ದಾರೆ.

15 ವರ್ಷಗಳಿಂದ ನಡೆಯುತಿತ್ತು, ಹೀಗಾಗಿ ಈ ವರ್ಷವೂ ಹವನ ಆಯೋಜಿಸಲಾಗಿತ್ತು. ಆದರೆ, ಹಿಂದೂ ಧಾರ್ಮಿಕ ಆಚರಣೆ ಮಾಡಬಾರದು ಎಂಬುದಾಗಿ ಇಲಾಖೆಯಿಂದಲೂ ಯಾವುದೇ ಸೂಚನೆ ಇಲ್ಲ. ಸರ್ವ ಧರ್ಮದ ವಿದ್ಯಾರ್ಥಿಗಳು ಕಲಿಯುವ ಈ ಶಾಲೆಯಲ್ಲಿ ಎಲ್ಲರೂ ಅನ್ನೋನಯವಾಗಿಯೇ ಇದ್ದು, ಕಳೆದ ಹದಿನೈದು ವರ್ಷಗಳಿಂದಲೂ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಇದನ್ನು ವಿವಾದ ಮಾಡುತ್ತಿದ್ದಾರೆ ಅವರು ಆರೋಪಿಸಿದ್ದಾರೆ.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ್ ರಾಜೀನಾಮೆ ನೀಡಿದ್ದರಿಂದ ಗ್ರಾಮಸ್ಥರು ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲೆ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆ ಮುಚ್ಚಿ ಹೋಗುವ ಸಂದರ್ಭದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಗ್ರಾಮಸ್ಥರು ಈ ಶಾಲೆಯನ್ನು ಉಳಿಸಿಕೊಂಡಿದ್ದಾರೆ. ಆಗ ಅಧಿಕಾರಿಗಳಿಗೆ ಶಾಲೆಯ ಬಗ್ಗೆ ಕಾಳಜಿ ಇರಲಿಲ್ಲ .ಅದು ಈಗ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -

Related news

error: Content is protected !!