Monday, May 6, 2024
spot_imgspot_img
spot_imgspot_img

ಸಂತೋಷ್ ಶವ ಇಟ್ಟು ಪ್ರತಿಭಟನೆ ಮಾಡಲು ಮುಂದಾದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

- Advertisement -G L Acharya panikkar
- Advertisement -

ಬೆಳಗಾವಿ: ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ನಡುವೆ ಬಡಸ ಗ್ರಾಮದಲ್ಲಿ ಇಂದು ಮುಂಜಾನೆ ವಾಗ್ವಾದ ನಡೆಯಿತು.

ಮೃತ ದೇಹದ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ, ಸ್ಥಳಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಂದರು. ಈ ವೇಳೆ ಶಾಸಕಿಯ ಮುಂದೆ ಸಂತೋಷ್ ಕುಟುಂಬ ಸದಸ್ಯರು ಕಣ್ಣೀರಿಟ್ಟರು. ಅಂತ್ಯ ಸಂಸ್ಕಾರ ಮಾಡುವ ಕುರಿತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ, ಮೃತನ ಸೋದರ ಬಸವನಗೌಡ ಪಾಟೀಲ್ ಚರ್ಚೆ ಮಾಡಿದರು. ಶವದ ಅಂತಿಮ ಸಂಸ್ಕಾರ ಮಾಡುವುದು ಬೇಡ. ಶವವನ್ನು ಮನೆಯ ಎದುರೇ ಇರಿಸಿಕೊಂಡು ಪ್ರತಿಭಟನೆ ಮಾಡೋಣ. ಆರೋಪಿಗಳ ಬಂಧನ ಜೊತೆಗೆ ಪರಿಹಾರ ಘೋಷಣೆ ನಂತರ ಅಂತ್ಯಸಂಸ್ಕಾರ ಮಾಡೋಣ ಎಂದು ಶಾಸಕಿ ಹೆಬ್ಬಾಳರ್ ಕುಟುಂಬದವರಿಗೆ ಸಲಹೆ ನೀಡಿದರು. ಯಾವಾಗ ಶಾಸಕಿ ಹೆಬ್ಬಾಳ್ಕರ್ ಈ ರೀತಿಯ ಸಲಹೆ ನೀಡಿದರೋ, ಆಗ ಕುಟುಂಬಸ್ಥರ ನಡುವೆ ವಾಗ್ವಾದ ಆರಂಭವಾಯಿತು. ಒಂದು ಹಂತದಲ್ಲಿ ಸಂತೋಷ್ ಸಾವಿಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಬೇಕೆಂದು ಆಗ್ರಹಿಸಿ, ಶವ ಇಡಲು ಕುಟುಂಬಸ್ಥರು ಮುಂದಾಗಿದ್ದರು. ನ್ಯಾಯ ಸಿಗುವವರೆಗೆ ಹೋರಾಟ ಮಾಡಬೇಕೆಂದು ಕೆಲವರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಹಿಳೆಯರು ಮುಂದೆ ಬಂದು ಎಲ್ಲರನ್ನೂ ಸಮಾಧಾನ ಪಡಿಸಲು ಯತ್ನಿಸಿದರು. ಮನೆ ಎದುರು ಗಲಾಟೆ ಆಗುವುದು ಬೇಡ ಎಂದು ಅತ್ತು ಗೋಗರೆದರು. ಈ ರೀತಿಯ ಬೆಳವಣಿಗೆಯ ನಡುವೆ ಕುಟುಂಬಸ್ಥರ ಮಧ್ಯೆ ಪರಸ್ಪರ ನೂಕಾಟ, ತಳ್ಳಾಟ ನಡೆಯಿತು. ನ್ಯಾಯ ಸಿಗುವವರೆಗೂ ಹೋರಾಟ ಮಾಡೋಣ ಎಂದು ಕೆಲವರು ಪಟ್ಟು ಹಿಡಿದರು. ಕೊನೆಗೆ ಗ್ರಾಮದ ಹಿರಿಯರು ಎಲ್ಲರನ್ನೂ ಸಮಾಧಾನಪಡಿಸಿದರು. ಗ್ರಾಮದಲ್ಲಿ ಮದುವೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಶೀಘ್ರ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಪಡಿಸಿದರು. ಮನೆ ಮುಂಭಾಗದಲ್ಲಿದ್ದ ಪಾರ್ಥಿವ ಶರೀರವನ್ನು ಆಂಬುಲೆನ್ಸ್‌ಗೆ ಸ್ಥಳಾಂತರಿಸಲಾಯಿತು. ಮೃತನ ಸಹೋದರ ಬಸವನಗೌಡ ವಿರೋಧದ ನಡುವೆಯೂ ಗ್ರಾಮದ ಮುಖಂಡರು ಮತ್ತು ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಮುಂದಾದರು. ಶವವಿಟ್ಟು ಹೋರಾಟ ಮಾಡುವುದಾಗಿ ಸಹೋದರ ಬಸವನಗೌಡ ಹೇಳಿದರೂ, ಗ್ರಾಮದ ಮುಖಂಡರು ಕೇಳಲಿಲ್ಲ. ಒಟ್ಟಾರೆ ಶವ ಇಟ್ಟು ಹೋರಾಟ ನಡೆಸುವ ಪಟ್ಟಿಗೆ ಕೊನೆಗೂ ಬೆಲೆ ಸಿಗಲಿಲ್ಲ. ಅದು ಸರಿಯಲ್ಲ ಎಂದು ಮುಖಂಡರು ತಿಳಿ ಹೇಳಿದರು.

ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅಂತಿಮ ನಮನ ಸಲ್ಲಿಸಿದರು. ನಂತರ ಮನೆ ಮುಂಭಾಗದಲ್ಲಿ ಸಂತೋಷ್ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಶವದ ಮೇಲೆ ಕೇಸರಿ ಶಾಲು ಹೊದಿಸಿ ಗೌರವ ಸೂಚಿಸಿದರು. ಪುರೋಹಿತರು ಹೂ, ಬಿಲ್ವಪತ್ರೆ ಹಾಕಿ ಪೂಜೆ ಮಾಡಿದರು. ಸಂತೋಷ್ ಅವರ ಸ್ನೇಹಿತರು ಮತ್ತು ಸಂಬಂಧಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!