Friday, April 19, 2024
spot_imgspot_img
spot_imgspot_img

ಸರ್ಕಾರಿ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ವಿಚಾರ; ಹೆಬ್ರಿ ಪಿಡಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ: ಶೇಖರ್ ಹೆಜಮಾಡಿ

- Advertisement -G L Acharya panikkar
- Advertisement -
driving

ಪೆರ್ಡೂರು: ಪೆರ್ಡೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುಮನಾ ಕೆ.ಅವರ ಮೇಲಾದ ದೌರ್ಜನ್ಯ ಮತ್ತು ಅನ್ಯಾಯವನ್ನು ಖಂಡಿಸಿ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ವತಿಯಿಂದ ಪೆರ್ಡೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ “ಬೃಹತ್ ಪ್ರತಿಭಟನಾ ಸಭೆ” ನಡೆಸಲಾಯಿತು.

ಈ ವೇಳೆ ಮಾತನಾಡಿದ ಬೈರಂಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಬೈರಂಪಳ್ಳಿಯ ಶ್ರಮಿಕ ತರುಣರ ತಂಡದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಅವರು ಬಿಜೆಪಿ ವಿರುದ್ಧ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆಬ್ರಿ ಮುದ್ರಾಡಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸದಾಶಿವ ಶೇರ್ವೆಗಾರ್ ಅವರು ಅಧಿಕಾರ ದುರುಪಯೋಗ ಪಡಿಸಿ ಅಕ್ರಮವಾಗಿ ವಾಸ್ತವ್ಯದ ಮನೆ ನಿರ್ಮಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಕಾನೂನು ಬಾಹಿರ ಕಟ್ಟಡ ಪರವಾನಿಗೆಯನ್ನು ರದ್ದುಗೊಳಿಸಿದ ಪೆರ್ಡೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಮನಾ.ಕೆ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಮಾತ್ರವಲ್ಲದೆ ರಾಜಕೀಯ ಪ್ರಭಾವ ಬಳಸಿ ಏಕಾಏಕಿ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಅಲ್ಲದೆ ಸುಮನಾ ಕೆ. ಅವರಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿರುವುದು ಖಂಡನೀಯ. ಈ ವಿಚಾರಕ್ಕೆ ಸಂಬಂಧಿಸಿ ಗ್ರಾ.ಪಂ.ಅಧ್ಯಕ್ಷ ದೇವು ಪೂಜಾರಿ, ಸದಸ್ಯರಾದ ತುಕಾರಾಮ್ ನಾಯಕ್, ಜಗದೀಶ್ ಶೆಟ್ಟಿ ಮತ್ತು ಸಚಿನ್ ಪೂಜಾರಿ ವಿರುದ್ಧ ಜಾತಿ ನಿಂದನೆ ಕೇಸನ್ನು ದಾಖಲಿಸಿಸಲಾಗಿದೆ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಲ್ಪಟ್ಟಿದ್ದರೂ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಹೀಗಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಹಾಗೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಪೆರ್ಡೂರು ಗ್ರಾಮದ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ ಹೆಬ್ರಿ ಮತ್ತು ಮುದ್ರಾಡಿ ಪಿಡಿಒ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಅಕ್ರಮವಾಗಿ ನಿರ್ಮಿಸಿರುವ ಮನೆಯನ್ನು ಕೂಡಲೇ ಧ್ವಂಸಗೊಳಿಸಬೇಕು. ಆದರೆ ಅಕ್ರಮ ಮನೆ ನಿರ್ಮಿಸುತ್ತಿರುವ ಬಗ್ಗೆ ವಿವರಣೆ ನೀಡುವಂತೆ ನೋಟೀಸ್ ನೀಡಿರುವ ಪಿಡಿಒ ಅವರನ್ನೇ ವರ್ಗಾವಣೆ ಮಾಡಿರುವುದು ಅಮಾನವೀಯ ಎಂದು ಆರೋಪಿಸಿದರು.

ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿರುವ ಹೆಬ್ರಿ ಮತ್ತು ಮುದ್ರಾಡಿ ಪಿಡಿಒ ಸದಾಶಿವ ಸೇರ್ವೆಗಾರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ತನಿಖೆ ನಡೆಸಿ ಸರಕಾರಕ್ಕೆ ವಂಚನೆ ಮಾಡಿದ ಪಿಡಿಓರನ್ನು ಕೂಡಲೇ ಸೇವೆಯಿಂದ ವಜಾ ಗೊಳಿಸಬೇಕು ಎಂದು ದಸಂಸ ರಾಜ್ಯ ವಿಭಾಗೀಯ ಸಂಚಾಲಕ ಶೇಖರ್ ಹೆಜಮಾಡಿ ಆಗ್ರಹಿಸಿದ್ದಾರೆ. ಸದಾಶಿವ ಸೇರ್ವೆಗಾರ ಅಕ್ರಮಕ್ಕೆ ಸಂಬಂಧಿಸಿ ನೋಟೀಸ್ ಜಾರಿಗೊಳಿಸಿ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದ ಪೆರ್ಡೂರು ಪಿಡಿಒ ಸುಮನ ಕೆ. ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರು ನೀಡಿ ವರ್ಗಾವಣೆಗೊಳಿಸಲಾಗಿದೆ. ಪಿಡಿಒ ಸುಮನ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿ ಬೆದರಿಸಿ, ಮೇಲಾಧಿಕಾರಿಗೆ ಸುಳ್ಳು ದೂರು ನೀಡಿದ ಪೆರ್ಡೂರು ಗ್ರಾಪಂ ಅಧ್ಯಕ್ಷ ದೇವು ಪೂಜಾರಿ ಹಾಗೂ ಸದಸ್ಯರ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾಕಾರರು ಪೆರ್ಡೂರು ಮಾಂಗಲ್ಯ ಸಭಾಭವನದಲ್ಲಿ ಸಮಾವೇಶಗೊಂಡು ನಂತರ ಮೆರವಣಿಗೆ ಮೂಲಕ ಗ್ರಾಮ ಪಂಚಾಯತ್ ಬಳಿ ತೆರಳಿ ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ಮಾಜಿ ಮಂಡಲ ಪ್ರಧಾನರಾದ ಶಾಂತರಾಮ್ ಸೂಡಾ, ನೀರೆ ಕೃಷ್ಣ ಶೆಟ್ಟಿ, ಪಂಚಾಯತ್ ಸದಸ್ಯರು, ಪಕ್ಷದ ವಕ್ತಾರರು ಕಾರ್ಯಕರ್ತರು, ಬ್ಲಾಕ್ ಸಮಿತಿ ಪದಾಧಿಕಾರಿಗಳು, ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್.ಎಸ್.ಯು.ಐ., ಅಲ್ಪಸಂಖ್ಯಾತ ಘಟಕ, ಎಸ್.ಸಿ./ಎಸ್.ಟಿ ಘಟಕ, ಹಿಂದುಳಿದ ವರ್ಗಗಳ ಘಟಕ, ಎಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು/ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!