



ಮುಂಬೈ: ನಗರದ ಭಾಂಡಪ್(ಪಶ್ಚಿಮ) ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸ್ಥಳದಲ್ಲಿ ಜನರ ಗುಂಪೊಂದು ಆಳವಾದ ಗುಂಡಿಗೆ ಬಿದ್ದ ಪರಿಣಾಮ 25 ವರ್ಷದ ಯುವಕನೊಬ್ಬರು ಮೃತಪಟ್ಟಿದ್ದು, ಇನ್ನೂ 10 ಮಂದಿ ಗಾಯಗೊಂಡಿರುವ ಘಟನೆ ಗುರುವಾರ(ಏ.23) ರಾತ್ರಿ ಸುಮಾರು 11.30ರ ವೇಳೆಗೆ ಜನತಾ ಮಾರುಕಟ್ಟೆ ಸಮೀಪದ ಮೆಟ್ರೋ ಮಾಲ್ ಬಳಿ ನಡೆದಿದೆ.
ಕೊಳಚೆ ಪುನರ್ವಸತಿ ಪ್ರಾಧಿಕಾರ(ಎಸ್ಆರ್ಎ) ವತಿಯಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಸಮರ್ಪಕ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಜನರು ಸಂಚರಿಸುತ್ತಿದ್ದ ವೇಳೆ ಅಕಸ್ಮಿಕವಾಗಿ ನೆಲ ಕುಸಿದು ಗುಂಡಿ ಉಂಟಾಗಿ, ಜನರು ಅದಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.
ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








