Saturday, April 27, 2024
spot_imgspot_img
spot_imgspot_img

ಸುಸಂಸ್ಕೃತ ರತ್ನಗಳಾಗಲು ಸಾತ್ವಿಕ ಶಕ್ತಿಯು ದಾರಿ – ಮಲ್ಲಿಕಾ ಜೆ ರೈ ಗುಂಡ್ಯಡ್ಕ

- Advertisement -G L Acharya panikkar
- Advertisement -

ಧೃ ತ್ಯಾ ಯಯಾ ಧಾರಯತೇ
ಮನಃ ಪ್ರಾಣೇಂದ್ರಿಯಕ್ರಿಯಾ: |
ಯೋಗೇನಾವ್ಯಭಿಚಾರಿಣ್ಯಾ
ದೃತಿ: ಸಾ ಪಾರ್ಥ ಸಾತ್ತ್ವಿ ಕೀ || 18-33||

ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೀಗೆ ಬೋಧಿಸುತ್ತಾ ಎಲೇ ಪಾರ್ಥನೆ, ಸ್ವಲ್ಪವೂ ತಪ್ಪದಿರುವ ಯಾವ ಶಕ್ತಿಯಿಂದ ಮನಸ್ಸು, ಪ್ರಾಣ, ಇಂದ್ರಿಯಗಳನ್ನು ಯೋಗದಿಂದ ಹಿಡಿದು ನಿಲ್ಲಿಸಿಕೊಳ್ಳುತ್ತಾನೋ ಆ ಧೃತಿಯು ಸಾತ್ವಿಕವು ಎಂದು ಹೇಳುತ್ತಾನೆ. ಬದುಕಲ್ಲಿ ಸ್ವಪ್ನಗಳು ಬೀಳುವುದು ಸಹಜ. ಕೆಲವು ಶುಭ ಸ್ವಪ್ನಗಳಾದರೆ ಇನ್ನು ಕೆಲವು ದುಃಸ್ವಪ್ನಗಳು ಬಿದ್ದು ಪರದಾಡುವ ಸಂದರ್ಭಗಳೂ ಇಲ್ಲದಿಲ್ಲ. ಏನೇ ಇರಲಿ, ಮಲಗುವಾಗ, ನಿದ್ದೆ ಮಾಡಿದಾಗ ಮಾತ್ರ ಬೀಳುವ ಸ್ವಪ್ನಗಳು ಮಾತ್ರವಲ್ಲ, ಎಚ್ಚರವಿರುವಾಗಲೂ ಮನಸ್ಸು ಸ್ವಪ್ನ ಲೋಕದಲ್ಲಿ ತೇಲಾಡುತ್ತಿರುತ್ತವೆ. ಆದರೆ ಅದು ಹೋಗುವ ವೇಗ, ದೂರ, ಗಾತ್ರ ನಿಯಮಗಳು ಯೋಚನೆಗಳನ್ನು ಅವಲಂಬಿಸಿಕೊಂಡಿರುತ್ತವೆ. ಕೆಲವೊಮ್ಮೆ ಒಂದೇ ಹೊಡೆತಕ್ಕೆ ಸಿಕ್ಕು ಒಂದೇ ಏಟಿಗೆ ಎರಡು ತುಂಡಾಗುವಂತೆ ಅಥವಾ ಭಾರ ತಾಳಲಾರದೇ ಹಗ್ಗವನ್ನು ಎಳೆದಾಗ ತುಂಡಾದಂತೆ ಅಲ್ಲೇ ಸ್ಥಗಿತಗೊಳ್ಳುತ್ತವೆ. ಹಗ್ಗವೆಂದಾಗ ನೆನಪಾಗುವುದುಂಟು. ಏನೆಂದರೆ ಕೆಲವರು ಹಗ್ಗವನ್ನೇ ಹಾವೆಂದು ಭ್ರಮಿಸಿ ಹೆದರುವುದುಂಟು. ಇನ್ನು ಕೆಲವರು ಹಾವನ್ನೇ ಹಗ್ಗವಾಗಿ ಕೊರಳಿಗೆ ಸುತ್ತು ಹಾಕಿಕೊಳ್ಳುವುದುಂಟು. ಮನಸ್ಸು ಏನನ್ನು ಗಹನವಾಗಿ ಯೋಚಿಸುತ್ತಿರುತ್ತದೆಯೋ, ಅದುವೇ ಸುಪ್ತಾವಸ್ಥೆಯಲ್ಲಿರುವಾಗಲೂ ಸಂಭವಿಸುವುದುಂಟು. ಬದಲಾದ ಸನ್ನಿವೇಶಗಳು ಹೊತ್ತು ಗೊತ್ತನ್ನು ತೀರಾ ಬದಲಾಯಿಸಿ ಇರಿಸು ಮುರುಸಾಗುವಂತೆ ಮಾಡಿಬಿಡುವುದುಂಟು. ಹಾಗಾಗಿ ನೈಮಿತ್ತಿಕ ಶ್ಲೋಕಗಳನ್ನು ಅನುದಿನವೂ ಪಠಿಸುತಿದ್ದರೆ ಕೇಳುವ ಕಿವಿಗಳಿಗೆ ಹಿತವುಣಿಸಿ ಮನಸ್ಸನ್ನು ಭದ್ರತೆಗೆ ತಂದಿರಿಸುತ್ತದೆ. ಜೀವನದ ಅನುಭವಗಳೇ ನಮಗೆ ದಿನ ನಿತ್ಯದ ಪಾಠಗಳಾಗಿ ಕಲಿಯುವಂತಾಗುತ್ತದೆ. ಯಾರೋ ಹೇಳಿದ ಅಥವಾ ಕಪೋಲ ಕಲ್ಪಿತ ಸಂದರ್ಭ ಕುತೂಹಲದ ದೃಷ್ಟಿಯಿಂದ ಆಲಿಸಿದ ಮನಸ್ಸು ತಾನೂ ಅದರಂತೆ ಭಾವಿಸಿಕೊಂಡು ಬಳಿಕ ಅದರೊಂದಿಗೆ ಮೌನ ಮಾತುಗಳ ಮೂಲಕ ಮನನಗೊಳಿಸುತ್ತ ಬಂದು ಆದೇ ಭಾವನೆಗಳೊಂದಿಗೆ ಸುಪ್ತವಾಗಿರಲು ಬಯಸುತ್ತದೆ. ಬಳಿಕ ಅದುವೇ ಸ್ವಪ್ನಗಳಂತೆ ಬಿಂಬಿತವಾಗುತ್ತವೆ. ಮನಸ್ಸಿನ ಅಗೋಚರ ನಿಲುವು ಕಾರ್ಯಗಳನ್ನು ಪ್ರೇರೇಪಿಸಲು ಮುಂದಡಿ ಇಡುವ ಹೆಜ್ಜೆಗಳೇ ಈ ಸ್ವಪ್ನಗಳೆನ್ನಬಹುದು.

ಬಾಳು ದೊಡ್ಡದಲ್ಲ, ಬದುಕುವುದು ದೊಡ್ಡದು. ಏನೇನೋ ಹೇಗೇಗೋ ಬದುಕು ನಡೆಸುವುದು ಸಾರ್ಥಕತನದ ಹಾದಿಯನ್ನು ತುಳಿಯುವುದಿಲ್ಲ. ತನ್ನಿಂದ ಈ ಮಣ್ಣಿಗೆ, ಸಮಾಜಕ್ಕೆ, ದೇಶಕ್ಕೆ ಏನು ಉಪಕಾರ ಆಗಿದೆ ಎಂದು ಅರಿಯುವ ಪ್ರಯತ್ನದಲ್ಲಿ ಕಿಂಚಿತ್ತಾದರೂ ಪ್ರತಿಫಲ ಒದಗಿದೆಯೇ ಎಂದು ತಿಳಿದುಕೊಳ್ಳುವುದು ಸೂಕ್ತ. ಇತರರಿಗೆ ನೀತಿ ಹೇಳುತ್ತಾ ತಾವು ಅನೀತಿಯ ಮಾರ್ಗ ತುಳಿಯುವುದು ಶ್ರೇಯಸ್ಕರವಲ್ಲ. ಹೇಳಿದಂತೆ ಮಾಡುವ ಕ್ರಮಬದ್ಧ ಮನಸ್ಸು, ಬುದ್ಧಿ ಹೇಗೋ ಅದಕ್ಕೆ ಅದನ್ನೊಪ್ಪುವ ಶರೀರವೂ ಬೇಕು. ಆಗ ಜೀವನದ ಒಂದೊಂದೇ ಮೆಟ್ಟಲು ಪಾರದರ್ಶಕವಾಗಿ ಗೋಚರಿಸತೊಡಗುತ್ತವೆ. ತಾನು ತನ್ನದು ಎಂಬುದು ಕಿಂಚಿತ್ತು, ಸಮಾಜಕ್ಕೆ ಒಳಿತು ಬಯಸುತ್ತಾ ಬದುಕುವುದು ಯೋಗ ಭಾಗ್ಯವೇ ಆಗಿರುವುದು. ಇತರರಿಗೆ ಅದರ ಬಗ್ಗೆ ತಿಳಿ ಹೇಳಿ ಅವರನ್ನು ಯೋಗದೆಡೆಗೆ ಆಕರ್ಷಿಸುವ ಕಲೆಯನ್ನು ತಾವು ಸ್ವತಃ ಅನುಭವಿಸಿ ಅನುಷ್ಠಾನಕ್ಕೆ ತರುವಂತಾಗಬೇಕು. ಆಗಲೇ ಲೋಪದೋಷಗಳು ಕಡಿಮೆಯಾಗಿ ಒಳಿತಿನ ಭಾವ ಹೆಚ್ಚುವುದನ್ನು ಗಮನಿಸಿ ಮನವರಿಕೆ ಮಾಡಿಕೊಳ್ಳುವತ್ತ ಸುಗಮ ದಾರಿಯು ಸಾಧ್ಯವಾಗುತ್ತದೆ.

” ಉಪದೇಶಂ” ಉ ದಾಸೀನ ಪ ಟ್ಟುಕೊಳ್ಳದೇ ದೇ ಹವನ್ನು ಶಂ mಖದ ರೀತಿಯಲ್ಲಿ ಬಳಸಿಕೊಳ್ಳುವುದೇ ಆಗಿದೆ. ಶಂಖದ ನಾದ ಕೇಳಿದ ಯಾವುದೇ ಮನಸ್ಸು ದೈವೀ ಭಾವನೆಗೆ ಒಳಗಾಗದೇ ಇರುವುದಿಲ್ಲ. ಅಖಂಡ ಶಕ್ತಿಯನ್ನು ಉಪಯೋಗಿಸುವ ರಹಸ್ಯವೂ ಈ ಶಂಖವೇ ಎಂಬುದು ವೇದ ವಿಧಿತ. ಶಂಖ ನಾದ ಮೊಳಗಿದರೆ ದಶ ದಿಕ್ಕುಗಳು ಪ್ರತಿದ್ವನಿಸುತ್ತಾ ಇನ್ನಷ್ಟು ಕ್ರಿಯಾಶೀಲವಾಗುತ್ತವೆ. ಎಚ್ಚರದಿಂದಿರು ಮನವೇ! ಎನ್ನುತ್ತದೆ. ಸದಾ ರಾಷ್ಟ್ರ ಹಿತವನ್ನು ಬಯಸುತ್ತಾ ಶ್ವೇತವರ್ಣದಂತೆ ಶುಭ್ರವಾಗಿರುವ ಮನಸ್ಸನ್ನು ಅನುಗ್ರಹಿಸಿದರೆ ಪ್ರತೀ ಹೆಜ್ಜೆ ಇಡುವ ನಮ್ಮ ಕಾಲಿನ ಅಡಿಯ ಭಾಗ ಕೂಡಾ ಭೂಸ್ಪರ್ಶದಿಂದ ಪವಿತ್ರವೇ ಆಗುತ್ತದೆ. ಈ ಮಣ್ಣಿನಲ್ಲಿ ಅಂತಹ ಶಕ್ತಿ ಇದೆ, ಅಸಾಧಾರಣ ಯೋಚನೆಗಳಿವೆ. ಒಂದೊಂದನ್ನೇ ನೆನಪಿಸುತ್ತ ಭೂಸ್ಪರ್ಶ ಮಾಡಿದಾಗ ಮಣ್ಣಿನ ಕಾರುಣ್ಯ ಕಾಲಿನಿಂದ ಪ್ರವಹಿಸುತ್ತದೆ. ಶಿರದವರೆಗೆ ಪಯಣಿಸುತ್ತದೆ. ಬದುಕನ್ನು ಚಿನ್ನದಂತೆ ಝಳಪಿಸುತ್ತದೆ. ಹಾಗಾಗಿ ಒಂದೊಂದು ಹೆಜ್ಜೆ ಇಡುವಾಗಲೂ ಆ ಭಾವನಾ ಪೂರಿತ ಮನಸ್ಸೇ ಕಾಲಿನೆಡೆಗೆ ಹರಿಯಬೇಕು. ಅಖಂಡ ಶಕ್ತಿಯನ್ನು ಪ್ರಜ್ವಲಿಸುವ ಹಾಗೆ ಆ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಬೇಕು. ಹಾಗಾಗಿ ನಿರತವೂ ಮನವನ್ನು ಚಿಂತನಶೀಲವಾದ ಯೋಗದೆಡೆಗೆ ಅಭಿಮುಖಗೊಳಿಸಬೇಕು. ಆಗ ಇತರರ ಭೌತಿಕ ವಸ್ತುಗಳ ಕಡೆಗೆ ಈ ಮನಸ್ಸು ವಾಲುವುದಿಲ್ಲ. ಅಭಿಲಾಷೆಯೂ ಮೂಡುವುದಿಲ್ಲ. ನಮ್ಮೊಳಗಿನ ಆತ್ಮನ ನೆನಹೇ ಮೈ ಮನದಲ್ಲಿ ಭದ್ರವಾಗಿ ಬೇರೂರಲ್ಪಡುತ್ತದೆ.

ಬೀಜ ಹಾಕಿ, ಮೊಳಕೆ ಬಂದ ಗಿಡ ದಿನ ಕಳೆದಂತೆ ತನ್ನ ಬೆಳವಣಿಗೆಯಲ್ಲಿ ತೋರುವ ಬೆರಗು, ಬೇರುಗಳು ಹೆಚ್ಚು ಕ್ರಿಯಾಶೀಲವಾದಾಗ ಮಾತ್ರ ನೆಲೆಗೊಳ್ಳಲು ಅವಕಾಶವಾಗುವಂತೆ, ತನ್ನಡೆಗೆ ಬಂದ ಗಾಳಿ, ಬಿಸಿಲು, ನೀರು ಇನ್ನಿತರ ಪೋಷಕಾಂಶಗಳನ್ನು ಉಪಯೋಗಿಸಿಕೊಳ್ಳುತ್ತಾ ದೃಢತ್ವವನ್ನು ಪಡೆಯುವಲ್ಲಿ ಸಫಲವಾಗುತ್ತದೆ. ಈ ನೆಲ, ಜಲ, ಗಾಳಿ, ಪರಿಸರ ಪ್ರಕೃತಿಯನ್ನು ಉಪಯೋಗಿಸಿಕೊಳ್ಳುತ್ತಾ, ಈ ನೆಲದ ಬಗೆಗೆ ಯೋಚಿಸುತ್ತಾ ಒಳಿತು ಮಾಡುವುದೇ ಮಾನವ ಧರ್ಮವಾಗಬೇಕು. ಒಳಿತು ಮಾಡು ಮನುಷ್ಯ ಹಾಗಾದಾಗ ಆಗುವೆ ನೀ ಭಾರತದ ಹೆಮ್ಮೆಯ ಸದಸ್ಯ, ಸುಸಂಸ್ಕೃತ ಭಾರತ ಮಾತೆಗೆ ಸುಸಂಸ್ಕೃತ ರತ್ನಗಳೇ ನಾವೆಲ್ಲರೂ ಆಗಿ ಬಾಳಿ ಧನ್ಯರಾಗೋಣ. ಸಾತ್ವಿಕ ಶಕ್ತಿಯಿಂದ ಬಾಳಿ ಬದುಕಿನ ಹೆಜ್ಜೆ ಗುರುತು ಮಲ್ಲಿಗೆಯ ಶುಭ್ರತೆಯಂತೆ ಕಾಪಿಡೋಣ.

- Advertisement -

Related news

error: Content is protected !!