Monday, May 6, 2024
spot_imgspot_img
spot_imgspot_img

ಹಳೆಯ ನೋಟು ಬದಲಾವಣೆಗೆ ಕಮೀಷನ್ ನೀಡುವುದಾಗಿ ಮಹಿಳೆಯೋರ್ವರಿಂದ 10 ಲಕ್ಷ ಪಡೆದು ವಂಚನೆ; ಪುತ್ತೂರಿನ ಓರ್ವನ ಸಹಿತ ಐವರ ಬಂಧನ

- Advertisement -G L Acharya panikkar
- Advertisement -

ಪುತ್ತೂರು: ವಿಲೇವಾರಿಗೆ ಕಷ್ಟವಾಗಿರುವ ಹಳೆಯ ನೋಟುಗಳನ್ನು ವಿಲೇವಾರಿ ಮಾಡಿಕೊಟ್ಟವರಿಗೆ 30ಶೇ.ಕಮಿಷನ್ ನೀಡುವುದಾಗಿ ಹೇಳಿ ಮಹಿಳೆಯೊಬ್ಬರಿಂದ 10 ಲಕ್ಷ ರೂ.ಪಡೆದು ನೋಟಿನ ಬದಲು ಕಾಗದದ ತುಂಡುಗಳನ್ನು ನೀಡಿ ವಂಚಿಸಿರುವ ಆರೋಪದಲ್ಲಿ ರೆಂಜದ ಅರಂತನಡ್ಕ ನಿವಾಸಿ ಸಹಿತ ಐವರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಬಳಿ ದೇವಸ್ಥಾನಗಳ ಹುಂಡಿಯಲ್ಲಿ ಭಕ್ತರು ಹಾಕಿದ್ದ ರೂ.100 ಮುಖ ಬೆಲೆಯ ರೂ.10 ಲಕ್ಷ ಮೌಲ್ಯದ ನೋಟುಗಳಿದ್ದು, ಆವುಗಳನ್ನು ವಿಲೇವಾರಿ ಮಾಡಲು ತೊಂದರೆ ಆಗಿದೆ. ಈ ನೋಟುಗಳನ್ನು ಪಡೆದು ರೂ.500, 2000 ಮುಖಬೆಲೆಯ ನೋಟುಗಳನ್ನು ಕೊಡುವವರಿಗೆ ಶೇ.30ರಷ್ಟು ಕಮಿಷನ್ ನೀಡುವುದಾಗಿ ನಂಬಿಸಿ ಉಜಿರೆಯ ಕೃಪಾ ಎಂಬವರಿಂದ ರೂ.10 ಲಕ್ಷ ಪಡೆದು ವಂಚಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಸಂಬಂಧ ತಿಂಗಳಾಡಿಯ ಕೊರಗಪ್ಪ ಎಂಬವರು ನೀಡಿದ್ದ ದೂರಿನ ಜಾಡು ಹಿಡಿದು ತನಿಖೆ ನಡೆಸಿದ್ದ ಕಡೂರು ಪೊಲೀಸರು ಆರೋಪಿಗಳ ದೂರವಾಣಿ ಸಂಖ್ಯೆ, ವಿಳಾಸ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು.ನ.20 ರಂದು ಕಡೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಡೂರು ನಿವಾಸಿ ಮಹೇಶ್(40) ಮತ್ತು ಬೆಟ್ಟಂಪಾಡಿ ರೆಂಜ ಅರಂತನಡ್ಕದ ನಾರಾಯಣ ರೈ(52ವ.)ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.ಈ ವೇಳೆ ಬಂಧಿತ ಆರೋಪಿಗಳು, ಸ್ವಾಮೀಜಿ ವೇಷ ಧರಿಸಿ ವಂಚಿಸುತ್ತಿದ್ದ ಖಾವಿ ಬಟ್ಟೆ, ರುದ್ರಾಕ್ಷಿ ಸರ, 100 ರೂ.ಮುಖ ಬೆಲೆಯ ಹಳೆಯ ನೋಟ್‌ಗಳಿದ್ದ ಬ್ಯಾಗ್ ಮತ್ತು ಆಕ್ಟೀವಾ ಸ್ಕೂಟರನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು.

ಮತ್ತೆ ಮೂವರ ಬಂಧನ:
ಬಂಧಿತ ಆರೋಪಿಗಳಾದ ಮಹೇಶ್ ಮತ್ತು ನಾರಾಯಣ ರೈಯವರು ನೀಡಿದ್ದ ಮಾಹಿತಿ ಮೇರೆಗೆ ತನಿಖೆ ಮುಂದುವರಿಸಿದ ಮೊಲೀಸರು ಚಿಕ್ಕಮಗಳೂರು ನಗರದ ತಮಿಳು ಕಾಲನಿಯ ಲಾರಿ ಸ್ಟ್ಯಾಂಡ್ ಬಳಿಯ ಚಿಕ್ಕಮಗಳೂರು ಇಲಿಯಾಜ್(೪೯ವ), ತುಮಕೂರಿನ ಗಂಗಾಧರ (೩೩ವ) ಮತ್ತು ವಿನಯ್ ಕುಮಾರ್(೩೩ವ) ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮಾರುತಿ ಒಮ್ನಿ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ಒಟ್ಟು 5,10,000 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರಗಪ್ಪರನ್ನು ಸಂಪರ್ಕಿಸಿದ್ದ ಆರೋಪಿಗಳು:
ತಮ್ಮಲ್ಲಿ ಕೆಲವರಿಗೆ ಪರಿಚಿತರಾಗಿರುವ ತಿಂಗಳಾಡಿಯ ಕೊರಗಪ್ಪ ಪೂಜಾರಿ ಎಂಬವರನ್ನು ಸಂಪರ್ಕಿಸಿದ್ದ ಆರೋಪಿಗಳು ಕಮಿಷನ್ ಹಣದ ವಿಷಯ ಪ್ರಸ್ತಾಪಿಸಿ ಈ ವಿಚಾರವನ್ನು ಬೇರೆಯವರಿಗೂ ತಿಳಿಸಲು ಹೇಳಿದ್ದರು. ಅದರಂತೆ ಕೊರಗಪ್ಪ ಅವರು ತಮಗೆ ಪರಿಚಯದ ಉಜಿರೆಯ ಕೃಪಾ ಅವರಿಗೆ ವಿಷಯ ತಿಳಿಸಿದ್ದರು.ಕಮಿಷನ್ ಹಣದ ಆಸೆಯಿಂದ ಕೃಪಾ ಅವರು ತಮ್ಮ ಸ್ನೇಹಿತರಾದ ಭುವನೇಂದ್ರ ಮತ್ತು ಜನಾರ್ದನ ಎಂಬವರೊಂದಿಗೆ ಆಗಮಿಸಿ ರೂ.೧೦ ಲಕ್ಷ ಹಣವನ್ನು ಕಡೂರಿನ ಕೋಟೆ ಭಾಗದ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಆರೋಪಿಗಳಿಗೆ ನೀಡಿದ್ದರು. ಈ ವೇಳೆ ಆರೋಪಿಗಳು, ‘ಇದರಲ್ಲಿ ರೂ.೧೩ ಲಕ್ಷ ಇದೆ, ಮತ್ತೆ ಎಣಿಸಿಕೊಳ್ಳಿ’ ಎಂದು ಹೇಳಿ, ನೋಟುಗಳಿಂದ ತುಂಬಿದಂತಿದ್ದ ಬ್ಯಾಗೊಂದನ್ನು ಕೃಪಾ ಅವರಿಗೆ ನೀಡಿ ಅಲ್ಲಿಂದ ಹೋಗಿದ್ದರು.

ನೋಟಿನ ಬದಲುಕಾಗದದ ತುಂಡು ನೀಡಿದ್ದರು:
ಬಳಿಕ ಕೃಪಾ ಹಾಗೂ ಜೊತೆಗಿದ್ದ ಭುವನೇಂದ್ರ ಮತ್ತು ಜನಾರ್ದನರವರು, ೧೩ ಲಕ್ಷ ರೂ.ಇರುವುದಾಗಿ ಹೇಳಿ ಆರೋಪಿಗಳು ನೀಡಿದ್ದ ಬ್ಯಾಗ್‌ನ್ನು ತೆರೆದು ನೋಡಿದಾಗ ಅದರಲ್ಲಿ ನೋಟಿನ ಗಾತ್ರದ ಬಿಳಿ ಕಾಗದದ ತುಂಡುಗಳ ಕಟ್ಟಿನಲ್ಲಿ ಮೇಲ್ಭಾಗದಲ್ಲಿ ಮಾತ್ರ ರೂ.೧೦೦ರ ನೋಟ್‌ಗಳನ್ನಿಟ್ಟಿರುವುದು ಕಂಡು ಬಂದಿದ್ದು ಕಮಿಷನ್‌ನ ಆಸೆಯಿಂದಾಗಿ ತಾವು ಮೋಸ ಹೋಗಿರುವುದು ಅವರ ಅರಿವಿಗೆ ಬಂತು. ಕೂಡಲೇ ಕೃಪಾ ಅವರು ಆರೋಪಿಗಳಿಗೆ ಕರೆ ಮಾಡಿದರು. ಆದರೆ ಅವರೆಲ್ಲರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು. ವಂಚನೆಗೊಳಗಾದ ಕೃಪಾ ಅವರು ನ.೧೮ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ವೇಳೆ ಪೊಲೀಸರು ಕೃಪಾ ಅವರಿಗೆ ಮಾಹಿತಿ ನೀಡಿದ್ದ ಕೊರಗಪ್ಪ ಅವರನ್ನು ವಿಚಾರಿಸಿದರು.

vtv vitla
vtv vitla

ಬಳಿಕ ಕೊರಗಪ್ಪ ಅವರು ನೀಡಿದ ದೂರು, ಮಾಹಿತಿಯಾಧರಿಸಿ ತನಿಖೆ ನಡೆಸಿದ ಕಡೂರು ಪೊಲೀಸರು ೪೮ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳದ ತಯ್ಯುಬ್ ಎಂಬಾತ ತಲೆಮರೆಸಿಕೊಂಡಿದ್ದು,ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ಕಾರ್ಯಾಚರಣೆಯಲ್ಲಿ ಕಡೂರು ಪೊಲೀಸ್ ಠಾಣೆಯ ಪಿಐ ರಮ್ಯಾ, ಎಸ್‌ಐಗಳಾದ ಆದರ್ಶ್, ನವೀನ್, ಎಎಸ್ಸೈ ವೇದಮೂರ್ತಿ, ಸಿಬ್ಬಂದಿ ಕೃಷ್ಣಮೂರ್ತಿ, ಉಮೇಶ್, ರಾಜಪ್ಪ, ಮಧುಕುಮಾರ್, ಓಂಕಾರ್ ಮತ್ತು ಶಿವರಾಜ್ ಪಾಲ್ಗೊಂಡಿದ್ದರು.

vtv vitla
vtv vitla

ನಾರಾಯಣ ರೈ ನಾಪತ್ತೆ ದೂರು:
ಅರಂತನಡ್ಕ ನಿವಾಸಿ ನಾರಾಯಣ ರೈ ಅವರನ್ನು ಕಡೂರು ಪೊಲೀಸರು ಬಂಧಿಸಿರುವ ವಿಚಾರ ಅವರ ಮನೆಯವರಿಗೆ ತಿಳಿದಿರಲಿಲ್ಲವಾದ್ದರಿಂದ ನಾರಾಯಣ ರೈ ಅವರು ಮನೆಗೆ ಬಂದಿಲ್ಲ ಎಂದು ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾರಾಯಣ ರೈ ಅವರನ್ನು ಕಡೂರು ಪೊಲೀಸರು ಪ್ರಕರಣವೊಂದರ ಬಗ್ಗೆ ಬಂಧಿಸಿದ್ದ ವಿಚಾರ ಆಗಷ್ಟೆ ಅವರಿಗೆ ತಿಳಿದಿದೆ ಎನ್ನಲಾಗಿದೆ.

- Advertisement -

Related news

error: Content is protected !!