

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಕಾಡತೊಡಗಿವೆ. ಮಳೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂ, ನೋರಾ ಮತ್ತು ಇತರ ವೈರಲ್ ಜ್ವರದ ಭೀತಿ ಕಾಡತೊಡಗಿದೆ.

ಕರಾವಳಿ ಜಿಲ್ಲೆಯ ಗ್ರಾಮಾಂತರ ಭಾಗಗಳಾದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಡೆಂಗ್ಯೂ ಜಾಸ್ತಿ ಇದ್ದರೆ, ಮಂಗಳೂರು ನಗರದಲ್ಲಿ ಮಲೇರಿಯಾ ಜಾಸ್ತಿ ಇದೆ.

2021ರಲ್ಲಿ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ (ಅಕ್ಟೋ ಬರ್ ಅಂತ್ಯಕ್ಕೆ) 665 ಮಲೇರಿಯಾ ಮತ್ತು 247 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಶೇ. 85 ಮಲೇರಿಯಾ ಪ್ರಕರಣಗಳು ಮಂಗಳೂರು ನಗರದಲ್ಲಿ ಹಾಗೂ ಶೇ. 85 ಡೆಂಗ್ಯೂ ಜ್ವರ ಗ್ರಾಮಾಂತರ ತಾಲೂಕುಗಳಲ್ಲಿ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿ ಮೂಲಗಳು ತಿಳಿಸಿವೆ.

ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಲೇರಿಯಾ ಪ್ರಮಾಣ ಶೇ. 30ರಷ್ಟು ಕಡಿಮೆ. ಡೆಂಗ್ಯೂ ಪ್ರಕರಣಗಳು ಕಳೆದ ವರ್ಷದಷ್ಟೇ ಇವೆ. ಈ ವರ್ಷ ಡೆಂಗ್ಯೂ ಮಂಗಳೂರು ನಗರದಲ್ಲಿ 54, ಮಂಗಳೂರು ಗ್ರಾಮಾಂತರ 56, ಬಂಟ್ವಾಳ 58, ಪುತ್ತೂರು 32, ಸುಳ್ಯ 26, ಬೆಳ್ತಂಗಡಿ 20 ಪ್ರಕರಣಗಳು ವರದಿಯಾಗಿವೆ.











