Saturday, April 20, 2024
spot_imgspot_img
spot_imgspot_img

ಹಿರಿಯರ ಮನದಂಗಳದಲ್ಲಿ ಇರುವ ಭಾಗ್ಯ – ಮಲ್ಲಿಕಾ ಜೆ ರೈ, ಪುತ್ತೂರು

- Advertisement -G L Acharya panikkar
- Advertisement -

ಹೇಳುವುದಕ್ಕೆ ಬೇಕಾದಷ್ಟಿದೆ. ಆದರೆ ಕೇಳುವವರಿಲ್ಲ. ಹೇಳಲು ಸಮಯವೂ ಸಾಲದು. ಒಂದೊಮ್ಮೆ ಹೇಳಿದಿರೋ ಖಂಡಿಸೋ ಅಭಿಪ್ರಾಯಗಳು ಒಂದೇ ಎರಡೇ. ಯುದ್ಧದಲ್ಲಿ ಸಾಲು ಸಾಲು ಬಿಟ್ಟು ಬಿಡುವ ಬಿಲ್ಲು ಬಾಣಗಳಂತೆ ಚುಚ್ಚಿದೆಡೆಗೆ ಇನ್ನಷ್ಟು ಚುಚ್ಚಿ ಹಿಂಸಿಸುತ್ತವೆ. ಆಲೋಚನೆಗಳು ಅಂತೆಯೆ ಮನದೊಳಗೇ ಇದ್ದುಕೊಂಡು ಕೆಲವೊಂದು ಒತ್ತಡಗಳ ಪ್ರಭಾವದಿಂದ ಇನ್ನಷ್ಟು ವಿಕಸನಗೊಂಡು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಪ್ರಭಾವಿಸುತ್ತವೆ. ಅದನ್ನು ಹತೋಟಿಯಲ್ಲಿ ಇಟ್ಟುಕೊಂಡು ಬಾಳಿಗೆ ಬೆಳಕಾಗಿಸುವ ನಿಟ್ಟಿನಲ್ಲಿ ಮಾನವ ಯತ್ನ ಸದಾ ಕ್ರಿಯಾಶೀಲವಾಗಿರಬೇಕು. ಆಗ ಒಳ್ಳೆಯ ಆಲೋಚನೆಗಳು ಮನವನ್ನು ಉಲ್ಲಾಸ ಗೊಳಿಸುವಲ್ಲಿ ಸಹಕರಿಸುತ್ತವೆ.

ಮರಳಿ ಯತ್ನವ ಮಾಡು ಎಂಬೊಂದು ಮಾತಿದೆ. ಹುಟ್ಟಿನ ಬಳಿಕ ಪ್ರತಿದಿನವೂ ಈ ಯತ್ನ ಮಾಡುತ್ತ ಬೆಳೆಯುವ ಪರಿ ಸದಾ ಅನುಕರಣೀಯ. ಆದರೆ ಹೋಲಿಸುತ್ತ ಬೆಳೆದಾಗ ಸ್ವಂತಿಕೆ ಮರೆಯಾಗುವ ಸಾಧ್ಯತೆ ಇದೆ. ಪ್ರಯತ್ನದಲ್ಲಿ ಏರಿಳಿತವೆಂಬುದು ಇದ್ದೇ ಇರುತ್ತದೆ. ಅದರಿಂದ ಒದಗುವ ಫಲಿತಾಂಶ ಕೂಡಾ ಅನಿರೀಕ್ಷಿತ ಅಥವಾ ಪೂರ್ವ ನಿರೀಕ್ಷೆಗೆ ಅನುಸಾರವಾಗಿ ಸಿಗುತ್ತವೆ. ಬದುಕು ನಿಂತ ನೀರಾಗಿರದೆ ಸದಾ ಚಲನೆಯಿರುವ ಪರಿಶುದ್ಧ ನೀರಾಗಬೇಕು. ಬದುಕಿನ ಶಕ್ತಿಗೆ ನಂಬಿಕೆಯ ಭಕ್ತಿ ಬೇಕು. ಹಾಗೆಂದು ಪ್ರಯತ್ನವಿಲ್ಲದೇ ಯಾವುದೇ ಫಲ ಸಿದ್ಧಿಸದು. ಮನಸ್ಸಿಗೆ ದಿನವೂ ಕೆಲಸ ಕೊಡಬೇಕು. ಇಲ್ಲದಿದ್ದರೆ ದೇಹವನ್ನು ಔದಾಸೀನ್ಯಕ್ಕೆ ದೂಡಬಹುದು. ಹಾಗೆಯೇ ಅತಿಯಾದ ಕಾರ್ಯಗಳ ಒತ್ತಡವೂ ಬೇಡ. ಪರಿಣಾಮ ಯಾವುದನ್ನೂ ಸಮರ್ಪಕವಾಗಿ ನಿರ್ವಹಿಸಲಾಗದೇ ಪರದಾಡುವುದು, ಚಡಪಡಿಕೆ, ಅತಿಯಾದ ಸಿಟ್ಟು, ಆತಂಕ, ಉದ್ವೇಗ, ಅಸಹನೆಯಿಂದ ತಾಳ್ಮೆ ತಪ್ಪಿ ಹೋಗಬಹುದು.

ಬೆಳಗಾದ ಮೇಲೆ ಏಳಲೇ ಬೇಕು. ದಿನ ತೆವಳುತ್ತ ಸಾಗುವುದಿಲ್ಲ. ನಾಗಲೋಟದಲ್ಲಿ ಓಡುವಂತೆ ಭಾಸವಾದರೆ ತಪ್ಪೇನಲ್ಲ. ಸುಮ್ಮನೆ ಕುಳಿತುಕೊಂಡಿಲ್ಲ ಎಂದು ಸೂಚಿಸುವುದು. ಬೆಳಗಿನ ಖಾತೆ ಮುಗಿದು ಮಧ್ಯಾಹ್ನದ ಬಾಗಿಲು ತೆರೆಯುತ್ತದೆ. ಹೊರ ಹೋದ ಮೇಲೆ ಕೆಲಸ ಪೂರ್ತಿಯಾಗದೇ ಹಿಂತಿರುಗಿದರೆ ಸಮಯವೂ ದಂಡ. ಕೆಲಸವೂ ಅರ್ಧರ್ಧ. ಅದೇನೋ ಹೇಳ್ತಾರಲ್ಲ ಇಲಿ ತಿಂದ ಹಾಗೆ. ಪೂರ್ತಿ ತಿನ್ನಲ್ಲ. ಕಚ್ಚಿ ಬಿಡುವ ಕೆಟ್ಟ ಚಾಳಿ. ಮತ್ತೆ ಅದರ ಉಪಯೋಗವೂ ಮಾಡುವ ಹಾಗಿಲ್ಲ.

ಅತ್ತ ಕಡೆ ಒಂದು ಸಂವಾದ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಹೋಗದಿದ್ದರೆ ಬಲು ದೊಡ್ಡ ನಷ್ಟ. ಹೋದರೆ ಅಷ್ಟೈ ಶ್ವರ್ಯ ದೊರಕಿದಂತಹ ಅನುಭವಗಳ ಮೂಟೆಯೇ ದೊರಕುತ್ತದೆ. ಹಾಗಾಗಿ ಬಾಲ ಸುಟ್ಟ ಬೆಕ್ಕಿನ ಹಾಗೆ ಬೇಗ ಬೇಗ ಮಧ್ಯಾಹ್ನದಡುಗೆ ಮುಗಿಸಿದಾಗ ನಳ ಪಾಕವಂತೂ ಬರದೇ ಇದ್ದರೆ ತಪ್ಪಲ್ಲ. ಸರಿ ತರಾತುರಿ ಇಲ್ಲದಿದ್ದರೆ ಮನುಷ್ಯ ಕೊರಡಿನಂತೆ ಬಿದ್ದಲ್ಲೇ ಬೀಳಬೇಕಿತ್ತೇನೋ. ಆದರೆ ದೇವರು ಸ್ವಂತಿಕೆ, ಬುದ್ಧಿ, ವಿವೇಚನೆಯನ್ನು ಇಷ್ಟು ಸಣ್ಣ ಮೆದುಳಿನೊಳಗೆ ಇರಿಸಿ ಸದಾ ಉತ್ಸಾಹ ಮೂಡಿಸುವ ಕಾರ್ಯಗಳಿಗೆ ಕೈ ಜೋಡಿಸುವ ಪ್ರಮೇಯ ಒದಗಿಸುವ ಮೂಲಕ ಅರಿವಿನ ಬಾಗಿಲು ತೆರೆದಿರಿಸಲು ಸಹಾಯ ಮಾಡುತ್ತಾರೆ .

ವ್ಯಕ್ತಿತ್ವ ಬೆಳವಣಿಗೆ ನಮ್ಮೊಳಗೆ ಸುಪ್ತ ಸ್ಥಿತಿಯಲ್ಲಿರುತ್ತದೆ. ಅದರ ಬೆಳವಣಿಗೆಗೆ ಹೊರಗಿನ ಕಾರ್ಯಕ್ರಮ ಜೋಡಣೆ ಸಮರ್ಪಕವಾದಾಗ ಬೆಳಕಿನ ಕಿಂಡಿ ತೆರೆದ ಹಾಗೆ ಪ್ರಜ್ವಲಿಸುತ್ತದೆ. ಸಾಸಿವೆ ಬಿದ್ದರೂ ಸದ್ದು ಕೇಳುವಂತಹ ನಿಶ್ಯಬ್ದ ಹೊರಗೂ ಒಳಗೂ ತುಂಬುತ್ತದೆ. ಮನಸ್ಸು ಒಳ ಹೊರಗೆ ಚಲಿಸದ ಹಾಗೆ ಒಳಗಿನ ಶಕ್ತಿಗೆ ಶರಣಾಗಬೇಕು. ಆಗ ಏಕಾಗ್ರತೆ ಚಂಚಲವಾಗುವುದಿಲ್ಲ. ನೆಮ್ಮದಿಯು ಮನದ ಬಾಗಿಲಲ್ಲಿ ಪವಡಿಸುತ್ತದೆ. ಆ ಬಾಗಿಲು ಸದಾ ತೆರೆದಿರಲಿ. ಆಗ ದೇವರ ದರ್ಶನ ಸಿಕ್ಕ ಅನುಭವದ ಫಲವು ದೊರೆಯುತ್ತದೆ. ಪ್ರಸಾದ ಸ್ವೀಕಾರ ನಡೆಯುತ್ತದೆ. ಮಾಡಿದ ಒಳ್ಳೆಯ ಕಾರ್ಯ ಹಿರಿಯರ ಭೇಟಿಯಾಗಿ ಅವರ ಹಿತನುಡಿಗಳು ಅಪ್ಯಾಯಮಾನವಾಗಿ ಬದುಕಿನ ಭರವಸೆಯ ಹೆಜ್ಜೆಗಳೊಂದಿಗೆ ಊರುಗೋಲಾಗುತ್ತವೆ. ಪಯಣ ಸುಂದರವಾಗುವುದು ಇಂತಹ ಹಿರಿಯರ ಭೇಟಿಯಿಂದ. ಅವರ ಅನುಭವ ಕಥನಗಳಿಂದ.

ಅದಕ್ಕೆ ಹಿರಿಯರು ಆತ್ಮೀಯರಾಗಿರುತ್ತಾರೆ. ಅವರನ್ನು ಭೇಟಿಯಾದಾಗ ಅವರಿಗಾಗುವ ಸಂತೋಷ ಹೇಳತೀರದು. ಅಲ್ಲದೇ ಹೊತ್ತು ನಿಲ್ಲುವುದಿಲ್ಲ. ಅವರ ಬಳಿಯಿಂದ ಹೊರಡಲು ಮನಸ್ಸೂ ಬಾರದು. ಆದರೆ ಜವಾಬ್ದಾರಿಗಳ ಮೂಟೆ ಹೆಗಲಲ್ಲಿ ಸದಾ ಹೊತ್ತುಕೊಂಡು ತಿರುಗುವ ಪಾಡು ಈ ಬದುಕಿನುದ್ದಕ್ಕೂ ಸಾಗುತ್ತಿರುತ್ತದೆ. ಆದರೂ ಮಾತಾಡಿದ ಅಷ್ಟು ಕ್ಷಣವಾದರೂ ನೋವು ನಲಿವಿಗೆ ಸ್ಪಂದಿಸಿದ ಗಳಿಗೆ ಎಂಬ ಮೌನ ಮುದ್ರೆಯು ಮನದಲ್ಲಿ ನೆಮ್ಮದಿ ತರುತ್ತದೆ. ಆರಾಮ ವಿರಾಮದ ಮಾತುಕತೆ, ಹರಟೆಯ ಮೆಲುಕು ಮನದೊಳಗೆ ಏರುಪೇರು ಮಾಡುತ್ತ ಗತಕಾಲವನ್ನು ವರ್ತಮಾನಕ್ಕೆ ತಂದ ಹಾಗಾಗುತ್ತದೆ. ನಂಟು ಅದು ಗಂಟು ಆಗಬಹುದು. ಒಂದೇ ಅಭಿರುಚಿಯಿದ್ದರೆ, ಹೊಂದಿಕೆ ಸರಿಯಾದರೆ ಆಗದು ಏನೂ ತೊಂದರೆ. ಹಿರಿಯರ ಮನದಂಗಳದಲ್ಲಿ ಇರುವ ಭಾಗ್ಯ ಸಿಕ್ಕರೆ ಬೇರೇನೂ ಬೇಕಾಗಿಲ್ಲ.

ಮಲ್ಲಿಕಾ ಜೆ ರೈ, ಪುತ್ತೂರು (ಅಂಕಣಕಾರರು, ಕವಯಿತ್ರಿ.)

ಧನ್ ರಾಮ ವಿಲಾಸ್ ಮುಕ್ರಂಪಾಡಿ. ದರ್ಬೆ ಅಂಚೆ ದ. ಕ.


- Advertisement -

Related news

error: Content is protected !!