

ಕೋಟಾ: ರಾಷ್ಟ್ರೀಯ ಹೆದ್ದಾರಿ 52ಕ್ಕೆ ಅಡ್ಡಲಾಗಿನಿರ್ಮಿಸುತ್ತಿದ್ದ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಪರಿಶೀಲನೆ ವೇಳೆ ಮಣ್ಣು ಕುಸಿದು ಇಬ್ಬರು ರೈಲ್ವೆ ಎಂಜಿನಿಯರ್‌ಗಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಧಾರಾ ಘಾಟ್ ಬಳಿ ಗುರುವಾರ ಸಂಜೆ ಸಂಭವಿಸಿದೆ.

ಮೃತರನ್ನು ಮಧ್ಯಪ್ರದೇಶದ ಪ್ರಭಾತ್ ಸಿಂಗ್ (30) ಹಾಗೂ ಬಿಹಾರದ ಸಂಜಯ್ ಕುಮಾರ್ ಝಾ (47) ಎಂದು ಗುರುತಿಸಲಾಗಿದೆ.ಗುರುವಾರ ಸಂಜೆ 8 ಗಂಟೆಗೆ ಕೆಲವೇ ಸಿಬ್ಬಂದಿ ಜೊತೆ ಈ ಇಬ್ಬರೂ ಎಂಜಿನಿಯರ್‌ಗಳು ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಪರಿಶೀಲನೆಗೆ ತೆರಳಿದ್ದರು. ಆಗ ಮಣ್ಣು ಏಕಾಏಕಿ ಕುಸಿದು ಅದರಡಿ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಆಸ್ಪತ್ರೆಗೆ ದಾಖಲಿಸಿತಾದರೂ ಅವರು ಬದುಕುಳಿಯಲಿಲ್ಲ ಎಂದು ರೈಲ್ವೆ ಎಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಯುವ ಎಂಜಿನಿಯರ್ ಪ್ರಭಾತ್ ಸಿಂಗ್ ಅವರು ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದರು.ಈದ್ ಹಬ್ಬ ಇದ್ದರೂ ಕೆಲವೇ ಸಿಬ್ಬಂದಿ ಜೊತೆ ಎಂಜಿನಿಯರ್‌ಗಳನ್ನು ಕೆಲಸಕ್ಕೆ ಕಳುಹಿಸಿದ್ದರಿಂದ ದುರುಂತ ನಡೆದಿದೆ. ಇದಕ್ಕೆ ರೈಲ್ವೆ ಹಿರಿಯ ಅಧಿಕಾರಿಗಳೇ ಹೊಣೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.










